ಆನಂದ್ ಋಗ್ವೇದಿ ಅವರ ಕವನ ಸಂಕಲನ ‘ನಿನ್ನ ನೆನಪಿಗೊಂದು ನವಿಲುಗರಿ’. ಅನೂಹ್ಯ ಸಾಧ್ಯತೆಗಳನ್ನು ಕಥೆಗಳ ಮೂಲಕ ಸಮರ್ಥವಾಗಿ ಹುಡುಕುತ್ತಲೇ ಕವಿತೆಯ ನವಿಲುಗರಿ ಹಿಡಿದು ತಂದ ಹೆಮ್ಮೆ ತೋರುತ್ತಿದ್ದಾರೆ ಆನಂದ.
ಜಗದ ಕಂಬನಿಯನ್ನೇ ನಾನು ಕುಡಿದಿರುವೆ' ಎಂದು ಆರ್ತನಾಗಿ ಹಾಡಿ ನಮ್ಮಲ್ಲಿ ದಿಗಿಲು ಹುಟ್ಟಿಸುತ್ತಲೇ “ ಬಿದ್ದು ಬಿಡಲಿ ಗೆಳೆಯ ಬರಿಯ ನಾಲ್ಕು ಹನಿ, ಬೊಗಸೆ ತುಂಬೀತು ಬಾಳು ನಾಳೆ ಬೆಳಕು' ಎನ್ನುತ್ತ ಭರವಸೆ ಮೂಡಿಸುತ್ತಾರೆ. ನಿಶ್ಯಬ್ಬದಾಳದ ಶಬ್ದದ ಬೆನ್ನು ಹತ್ತಿರುವ ಈ ಕನಸುಗಾರ ರವಿ ಬದುಕು ಸಹಜ ಲಯ, ನಮ್ಮ ಅರಿವಿನ ಆಲಯ' ಎಂಬ ತಾತ್ವಿಕ ತಿಳಿವಳಿಕೆಯಲ್ಲಿ ಕವಿತೆಯ ಸಾಲುಗಳನ್ನು ನೇಯ್ದಿದ್ದಾರೆ.
ಕಥನ - ರೂಪಕಗಳ ಜಾಡಿನಲ್ಲಿ ಚರಿತ್ರೆ – ವರ್ತಮಾನಗಳನ್ನು ಬೆದಕುತ್ತ ಕಾವ್ಯ ಮಾಯಕತೆಯ ಬೆನ್ನು ಹತ್ತಿದ್ದಾರೆ. ಬದುಕನ್ನು ಅರಿಯುತ್ತಲೇ ಅದನ್ನು ಪ್ರೀತಿಸುವ ವಿವೇಕ ಇಲ್ಲಿಯ ಸ್ಥಾಯಿಭಾವ, ಹಸಿವನ್ನು ಪ್ರೀತಿಸುತ್ತಲೇ ಸೋಲಿನ ನೆರಳುಗಳನ್ನು ಹುಡುಕುವುದು ಇಲ್ಲಿರುವ ಶಕ್ತಿ. “ಮನುಷ್ಯರೆಲ್ಲರಲ್ಲಿ , ಮನುಷ್ಯರ ಬಗ್ಗೆ ನಂಬಿಕೆಯ ಕೊಡು' ಎಂಬುದು ಇಲ್ಲಿಯ ದಿಟ. 'ಎಲ್ಲರನ್ನು ಪ್ರೀತಿಸಲು ನನಗೆ ಮತ್ತಷ್ಟು ಬದುಕು ಕೊಡು' ಇದು ಇಲ್ಲಿಯ ಹಂಬಲ. 'ಕಿನಾರೆಯಲ್ಲೇ ಕಡಲು ದಕ್ಕುವುದಿಲ್ಲ' ಇದು ಇಲ್ಲಿಯ ವಿಚಾರ, ನವಿಲುಗರಿಯೊಂದನ್ನು ಹಿಡಿದೇ ನವಿಲ ನೂರು ಕಣ್ಣುಗಳ ಕಾಣೆಯ ಅರಸುತ್ತಿರುವ ಈ ಕವಿಯ ಕೃತಿ ಆನಂದವನ್ನು ಉಂಟು ಮಾಡುತ್ತದೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE