ನೀಲು ಕಾವ್ಯ ಸಂಗ್ರಹ-3, ಸಾಹಿತಿ, ಚಿಂತಕ, ಪತ್ರಕರ್ತರಾದ ಲಂಕೇಶ್ ಅವರ ಕವನ ಸಂಕಲನ. ತಮ್ಮದೇ ಹೊಸ ಶೈಲಿಯೊಂದನ್ನ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದು ಲಂಕೇಶರ ಹೆಗ್ಗಳಿಕೆಗಳಲ್ಲಿ ಒಂದು. ತಿಳಿ ಹಾಸ್ಯ, ವಿಡಂಬಣೆ, ವೈಚಾರಿಕತೆಯನ್ನ ಮೂರುನಾಲ್ಕು ಸಾಲುಗಳ ಪದ್ಯಗಳಲ್ಲಿ ಅದ್ಭುತವಾಗಿ ಕಟ್ಟಿಕೊಡುತ್ತಿದ್ದ ಲಂಕೇಶ್ ನೀಲು ಎಂಬ ಹೆಸರಿನಲ್ಲಿ ಕಾವ್ಯ ರಚಿಸುತ್ತಿದ್ದರು. ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಮಜಲನ್ನು ಸೃಷ್ಟಿಸಿದ ನೀಲು ಕಾವ್ಯ ಹದಿಹರೆಯದವರಿಂದ ಹಿರಿಜೀವಗಳಿಗೂ ನೆಚ್ಚಿನ ಕಾವ್ಯ ಪ್ರಕಾರವಾಗಿ ಮುಂದುವರೆಯುತ್ತಲೇ ಇದೆ. ಪ್ರಾಸಗಳ ಹಂಗಿಗೆ ಸಿಕ್ಕಿ ಒದ್ದಾಡುತ್ತಿರುವವರು ನೀಲು ಪದ್ಯವನ್ನು ಓದಲೇಬೇಕು. ಪುಸ್ತಕ ಮುಗಿಸುವಷ್ಟರಲ್ಲಿ ನೀಲುವಿನ ನಶೆಯಲ್ಲಿ ಪ್ರಾಸ ಕಣ್ಣಿಗೆ ಕಾಣಿಸದಷ್ಟು ಓಡಿ ಹೋಗಿರುತ್ತದೆ. ವೈಯಕ್ತಿಕವಾಗಿ ಪ್ರಾಸವಿಲ್ಲದೇ ಕವಿತೆಯನ್ನು ಕೇವಲ ಅದರ ವಸ್ತುವಿನಿಂದಲೇ ಪರಿಣಾಮಕಾರಿಯಾಗಿ ಹೇಳಬಲ್ಲ ಸವಾಲನ್ನು ನಿಭಾಯಿಸುವುದನ್ನು ನೀಲುಕಾವ್ಯ ಹೇಳಿಕೊಟ್ಟದ್ದು ಸುಳ್ಳಲ್ಲ.
ಅನೇಕ ಪದ್ಯಗಳಲ್ಲಿ ಕವಿಗೆ ದಕ್ಕಿದಷ್ಟು ಸಾಕ್ಷಾತ್ಕಾರ ನಮಗೆ ಆ ಕ್ಷಣಕ್ಕೆ ಸಿಗುವುದಿಲ್ಲ ಎಂಬುದು ಓದುಗನಾಗಿ ನಾನೂ ಬೆಳೆಯಬೇಕು ಮತ್ತು ಮಾಗಬೇಕು ಎಂಬುದಕ್ಕೆ ಸಾಕ್ಷಿಯಷ್ಟೇ! ಈ ಕ್ಷಣಕ್ಕೆ ದಕ್ಕದ ಅನೇಕ ಹನಿಗಳ ಹೊಳವು ಮತ್ತೆ ಸ್ವಲ್ಪ ಹೊತ್ತಿನ ನಂತರ ಬೇರೆಯದೇ ರೀತಿಯಲ್ಲಿ ದೊರಕುವುದು ತುಟಿಯಂಚಿನಲ್ಲಿ ನಗೆಯ ಮೂಡಿಸದೇ ಇರಲಾರದು. ಅನೇಕ ವಿಷಯಗಳನ್ನು ಇದಕ್ಕಿಂತ ಸೂಕ್ಷ್ಮವಾಗಿ ಹೇಳಲು ಸಾಧ್ಯವೇ ಇಲ್ಲ ಅನಿಸುವಷ್ಟರ ಮಟ್ಟಿಗೆ ಹೆಚ್ಚೆಂದರೆ ಏಳೆಂಟು ಪದಗಳಲ್ಲಿ ಕಟ್ಟಿಕೊಡುವುದು ನೀಲು ಕಾವ್ಯದ ಹೆಗ್ಗಳಿಕೆ. ಕೆಲವು ಪದ್ಯಗಳಲ್ಲಿ ದೈಹಿಕ ಸುಖದ ಮತ್ತು ಪ್ರೇಮದ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಹೇಳಿದರೆ, ಇನ್ನು ಕೆಲವುಗಳಲ್ಲಿ ದೀರ್ಘ ಕಾಲದ ನಾಟಕೀಯ ಪ್ರೇಮದ ಬಗೆಗಿನ ವ್ಯಂಗ್ಯವಿದೆ.
ಪ್ರತೀ ಕವಿತೆಗಳು ಪುಟ್ಟದಾಗಿರುವುದರಿಂದ ಒಂದೇ ಬಾರಿ ಮುಗಿಸಿ ಎತ್ತಿಡದೇ ಸಮಯವಿದ್ದಾಗಲೆಲ್ಲ ಓದಬಹುದು. ಚಿಕ್ಕ ಮಕ್ಕಳು ಪೆಪ್ಪರಮೆಂಟನ್ನು ಚೀಪಿದಂತೆಯೇ ನೀಲುಕಾವ್ಯವನ್ನು ಒಂದೊಂದಾಗಿ ಅಸ್ವಾದಿಸಬಹುದು. ಪ್ರಕೃತಿಯಾಗಿ, ಗಂಡನಾಗಿ, ಹೆಂಡತಿಯಾಗಿ, ಯುವಕನಾಗಿ, ಪೋಲಿಯಾಗಿ, ತುಂಟನಾಗಿ, ಮಗುವಾಗಿ, ಪ್ರಾಣಿ ಪಕ್ಷಿಗಳಾಗಿ ಎಲ್ಲ ಭಾವಗಳನ್ನು ಅಕ್ಷರಗಳನ್ನಾಗಿಸುತ್ತ ನಗಿಸುತ್ತ ತನ್ನೊಡನೆ ಕೊಂಡೊಯ್ಯುವ ನೀಲುವಿನತ್ತ ಪ್ರೀತಿ ಒಮ್ಮೆಯಾದರೂ ಹುಟ್ಟದೆ ಇರಲಾರದು.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE