'ನನ್ನ ವಿಳಾಸ' ಮೊಹಮ್ಮದ್ ಅಜರುದ್ದೀನ್ ಅವರ ಕವನ ಸಂಕಲನ. ಮೊಹಮ್ಮದ್ ಅಜರುದ್ದೀನ್ ನನಗೆ ಕಳೆದ ಎರಡು ಮೂರು ವರ್ಷಗಳ ಪರಿಚಯ. ಸುಮಾರು 72 ಕವಿತೆಗಳನ್ನು ಒಳಗೊಂಡಿರುವ ಕವಿತೆಗಳ ಗುಚ್ಛ. ಇಲ್ಲಿ ಸಾಧಕರ ಸ್ಮರಣೆಯಿದೆ, ಪರಿಸರದ ಬಗ್ಗೆ ಕಾಳಜಿಯಿದೆ, ದೇಶ ಭಾಷೆಯ ಬಗ್ಗೆ ಅಭಿಮಾನವಿದೆ, ನಶ್ವರತೆಯ ಬಗ್ಗೆ ತವಕವಿದೆ, ಪ್ರೀತಿ, ಹೊಸತನ, ಹೊಸಹುರುಪು ಹೀಗೆ ವಿವಿಧ ಬಗೆಯ ಭಾವಾಭಿವ್ಯಕ್ತಿ ಇಡೀ ಕವನ ಸಂಕಲನದ ತುಂಬಾ ಹರಡಿಕೊಂಡಿದೆ. "ಬೆವರ ಹನಿ ಸುರಿಸಿ ದುಡಿಯುವವನು ನನಗೆ ನಗುವನ್ನು ಕಲಿಸಿದವನು ನಾನು ಬಿದ್ದಾಗ ಕೈ ಹಿಡಿದವನು ನನ್ನ ಬದುಕಿಗೆ ಅರ್ಥಕೊಟ್ಟವನೇ ನನ್ನ ಅಪ್ಪ" "ಮೊದಲು ನಡೆದಾಗ ನನಗೆ ನೀನು ಆಸರೆಯಾದೆ ತೊದಲನುಡಿ ಆರಂಭಿಸಿದಾಗ ನನ್ನ ಗುರುವಾದೆ ಚಂದಮಾಮನ ತೋರಿಸಿ ತುತ್ತು ಕೊಟ್ಟು ನನ್ನ ಹಸಿವನ್ನು ಮರೆಸಿದೆ ನನ್ನ ಜೀವನಕ್ಕೆ ಉಸಿರು ಕೊಟ್ಟವಳು ನನ್ನ ಜನ್ಮಧಾತೆ" ಎಂಬ ಎರಡು ವಿಭಿನ್ನ ಕವಿತೆಗಳಲ್ಲಿ ತಂದೆ ತಾಯಿಯನ್ನ ಬಹಳ ವಿನಯವಾಗಿ ನೆನೆದಿರುವ ಕವಿ, ತನಗೆ ತನ್ನ ತಂದೆ-ತಾಯಿಯ ಬಗೆಗೆ ಎಷ್ಟು ಗೌರವವಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ‘ತಾಯಿಯೇ ನನ್ನ ದೇವರು' ಎಂಬ ಇವರ ಮತ್ತೊಂದು ಕವಿತೆಯನ್ನು ಅವಲೋಕಿಸಿದಾಗ ಇದು ಅಕ್ಷರಶಃ ಸತ್ಯವೆನಿಸುತ್ತದೆ. ಮನುಷ್ಯ ಎಷ್ಟೇ ದೊಡ್ಡವನಾದರೂ ತಂದೆತಾಯಿಯ ಮುಂದೆ ತುಂಬಾ ಸಣ್ಣವನೇ ಅಲ್ಲವೆ? ಮುಂದೆ ನಾಡುಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಕುರಿತು ಬರೆದ ‘ಕೆಂಪೇಗೌಡ' ಎಂಬ ಕವಿತೆಯಲ್ಲಿ ಬೆಂಗಳೂರಿನ ಇಂದಿನ ಸ್ಥಿತಿಗತಿಯ ಬಗ್ಗೆ ಕವಿ ವ್ಯಂಗವಾಡಿದ್ದಾರೆ. "ನೀವು ಕಟ್ಟಿದ್ದೀರಿ ನೂರಾರು ಕೆರೆ-ತೊರೆ ಅವುಗಳನ್ನು ಮುಚ್ಚಿ ನಾವು ಮಾಡಿದ್ದೇವೆ ಕಾಂಪ್ಲೆಕ್ಸುಗಳ" ಎಂದಿರುವ ಕವಿ ಕವಿತೆಯ ಕೊನೆಯಲ್ಲಿ "ಕೆಂಪೇಗೌಡರ ಬಳಿ ಕ್ಷಮೆ ಕೇಳಿರುವುದು ವಿಶೇಷ". ಮುಂದಿನ ಕವಿತೆಯೊಂದರಲ್ಲಿ ಮಹಾತ್ಮ ಗಾಂಧಿಯನ್ನು ಸ್ಮರಿಸಿರುವ ಅಜರುದ್ದೀನ್ "ನನಗೂ ಸ್ಪೂರ್ತಿ ಗಾಂಧಿಯು" ಎಂದಿದ್ದಾರೆ. ‘ಯೋಧರಿಗೆ ಸಲಾಂ' ಎಂಬ ಕವಿತೆಯಲ್ಲಿ ಯೋಧರನ್ನು, "ಉಳುವನು ರೈತನು" ಎಂಬ ಕವಿತೆಯಲ್ಲಿ ಅನ್ನಧಾತರನ್ನು ನೆನೆದಿರುವ ಕವಿ, ಮೈಸೂರಿನ ಸೊಬಗಿನ ಬಗ್ಗೆಯೂ ಬರೆದಿದ್ದಾರೆ. ದಸರಾ ವೈಭವದ ನಾಡು ಕಲೆ ಸಂಸ್ಕೃತಿಯ ಬೀಡು ರಾಜವಂಶದ ಪರಂಪರೆಯ ಊರು ಇದುವೇ ನಮ್ಮ ಹೆಮ್ಮೆಯ ಮೈಸೂರು” ಒಟ್ಟಾರೆಯಾಗಿ ಇಲ್ಲಿನ ಕವಿತೆಗಳು ಅವರ ಮನದಾಳದ ಮಾತುಗಳಾಗಿವೆ.
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು. ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ ...
READ MORE