ಬಿಜಾಪುರ ಜಿಲ್ಲೆಯಿಂದ ಹೊರ ಬಂದಿರುವ ಅಲಿಯ ಪ್ರತಿ ಕವಿತೆಗಳಲ್ಲೂ ಉತ್ತರಕರ್ನಾಟಕದ ಸೊಗಡಿವೆ. "ಸಿಜರಿನಿಗಿಂತ ಸಹಜ ಹೆರಿಗೆ ಸುಂದರವಾದದ್ದು. ಇಲ್ಲಿಯ ಯಾವ ಕವಿತೆಯನ್ನೂ ನಾನು ತಿಣುಕಿ ತಿಣುಕಿ ಸಿಜರಿನ ಮಾಡಿಸಿಕೊಂಡು ಹತ್ತಿಲ್ಲ...." ಎಂದು ಬರೆಯುವ ಕವಿಯ ಮುಗ್ಧತೆ ಮತ್ತು ಅವರು ಬಳಸುವ ಮಣ್ಣಿಂದ ಎದ್ದ ಹಸಿ ಭಾಷೆಯೇ ಇಲ್ಲಿನ ಹೆಗ್ಗಳಿಕೆ. "ಹನಿಮೂನ ಮಾಡಿದಾಂಗ ಕನಸ ಕಾಣತೈತಿ...” ಬೀದಿಯ ನಾಯಿ ಮತ್ತು ಶ್ರೀಮಂತರ ಮನೆಯ ನಾಯಿಯನ್ನು ರೂಪಕವಾಗಿಟ್ಟುಕೊಂಡು, ಮನುಷ್ಯನ ಸಹಜೆ ಸಂತೋಷ ಮತ್ತು ಶ್ರೀಮಂತಿಕೆಯ ಕೃತಕ ವೈಭವಗಳನ್ನು ಕವಿ ಅಣಕಿಸುತ್ತಾರೆ. ಪ್ಯಾಟಿ ಮಾಡತೈತಿ ಡೌಲ ಸುಣ್ಣದ ನೀರ ಆಗೇತಿ ಹಾಲ ಹಳ್ಳಿಯ ಬದುಕು ರಿಯಲ್ಲ "ಪ್ಯಾಟಿಯ ಬದುಕು ಬರಿ ರೀಲ...” ಎಂದು ಕವಿ ಹಳ್ಳಿಯ ತಾಜಾತನವನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಬಳಸುವ ತಾಜಾ ಭಾಷೆ ಕವಿತೆಯ ಸಹಜ ನಡೆಗೆ ಪೂರಕವಾಗಿದೆ. ಇಲ್ಲಿನ ಭಾಷೆಯ ಸೊಗಡೇ ಕವಿತೆಯ ಲಾಲಿತ್ಯ ಮತ್ತು ಅಂತಸ್ಸತ್ವವಾಗಿದೆ. ನವೋದಯದ ಪ್ರಭಾವ ಕವಿತೆಗಳ ಮೇಲೆ ದಟ್ಟವಾಗಿದೆ. ಆದರೆ ಇಲ್ಲಿನ ಕವಿತೆಗಳು ಆ ರಮ್ಯತೆಯಲ್ಲಿ ಕೊಚ್ಚಿಕೊಂಡು ಹೋಗಿಲ್ಲ. ವರ್ತಮಾನದ ಬೇರನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ವಾಸ್ತವಕ್ಕೆ ಮುಖಾಮುಖಿಯಾಗುವ ಹಲವು ಕವಿತೆಗಳು ನಮ್ಮನ್ನು ತಟ್ಟುತ್ತವೆ. ದೇಶಪ್ರೇಮ, ವಿಡಂಬನೆ, ಪ್ರಕೃತಿ ಪ್ರೇಮ ಎಲ್ಲವನ್ನೂ ಕವಿ ಇಲ್ಲಿ ಕವಿತೆಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ.