‘ಮುಗಿದ ಹಾಡಿನ ಖಾಲಿರಾಗ’ ಹಿರಿಯ ಲೇಖಕ ಜಿ.ಪಿ. ಬಸವರಾಜು ಅವರ ಕವಿತೆಗಳ ಸಂಕಲನ. ಈ ಕೃತಿಗೆ ಖ್ಯಾತ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ ಗೆಳೆಯ ಜಿ.ಪಿ. ಬಸವರಾಜು ಅವರ ಬರವಣಿಗೆಯ ಮುಖ್ಯ ಲಕ್ಷಣವೆಂದರೆ ಸಂವಹನ ಸ್ಪಷ್ಟತೆ, ಮತ್ತೆ ಕೆಲವು ಹಳೆಯ ಕವಿತೆಗಳು ಇಲ್ಲಿವೆ, ಸಂಸ್ಕೃತಿ ಚಿಂತನೆ, ಸಮಕಾಲೀನ ಬದುಕಿನ ಘಟನೆಗಳಿಗೆ ಪ್ರತಿಕ್ರಿಯೆ, ಸುತ್ತಲಿನ ಘಟನೆಗಳನ್ನು ಕುರಿತು ನೋವು, ವಿಷಾದ, ಕೋಪ, ಕಾಣುವ ಲೋಕದ ವರ್ಣನೆ ಹೀಗೆ ಇಲ್ಲಿನ ರಚನೆಗಳಲ್ಲಿ ವೈವಿದ್ಯವಿದೆ ಎನ್ನುತ್ತಾರೆ ನಾಗಭೂಷಣ. ಹಾಗೇ ಜಿ.ಪಿ. ಬಸವರಾಜು ಅವರ ಈ ಏಳನೆಯ ಸಂಕಲನ ಅವರ ನೋಟದಲ್ಲಿ ಆಗುತ್ತಿರುವ ಸೂಕ್ಷ್ಮವಾದ ಬದಲಾವಣೆಯನ್ನು ಸೂಚಿಸುವಂತಿದೆ. ರಾಜಕೀಯ, ಅಧ್ಯಾತ್ಮ, ಚರಿತ್ರೆ, ಇಂಥ ಹಣೆಪಟ್ಟಿಗಳೆಲ್ಲ ಕೃತಕವಾದವು, ಹಣೆಪಟ್ಟಿ ಸೂಚಿಸುವ ಹಾಗೆ ಬದುಕಿನಲ್ಲಿ ಯಾವುದೂ ಪ್ರತ್ಯೇಕವಲ್ಲ, ಬದುಕನ್ನು ನೋಡಿ ಅರಿಯುವುದು ಮುಖ್ಯ ಅನ್ನುವ ನಿಲುವು ಇಲ್ಲಿ ರೂಪು ಪಡೆಯುತ್ತಿದೆ. ನಾನು ಯಾರು ಅನ್ನುವ ತಾತ್ವಿಕವೆಂದು ಭಾವಿಸಲಾಗುವ ಪ್ರಶ್ನೆ ಈ ಸಂಕಲನದಲ್ಲಿರುವ ‘ಗುರುತು ಕೇಳುತ್ತಾರೆ’ ಯಲ್ಲಿ ಗಾಢವಾದ ರಾಜಕೀಯ ಪ್ರಜ್ಞೆಯೂ ಆಗುತ್ತದೆ. ಅಲ್ಲಮನನ್ನು ಕುರಿತ ರಚನೆ ಸೀಮಿತ ವ್ಯಕ್ತಿತ್ವವನ್ನು ತೊರೆದು ನಿರಾಳವಾಗಲಾರದ ಆಧುನಿಕ ತಳತಮವನ್ನು ಸೂಚಿಸುತ್ತದೆ. ದಂಡಿನ ದಾರಿ ಮತ್ತು ಕಲ್ಯಾಣವನ್ನು ಕುರಿತ ರಚನೆಗಳಲ್ಲಿ ಕನ್ನಡದ ಸಂಸ್ಕೃತಿಯ ಪ್ರಮುಖ ಘಟ್ಟವನ್ನು ಚಿತ್ರಣದೊಂದಿಗೆ ನಾಡಿನ ಚರಿತ್ರೆ, ಆದರ್ಶ, ಕನಸುಗಳ ನೇಯ್ಗೆ ರೂಪುಗೊಂಡಿದೆ. ಸಂಕಲನದ ಮೊದಲಿನಲ್ಲಿ ಬರುವ ತಾವೋ, ಅಲ್ಲಮ, ಕಲ್ಯಾಣ ಕುರಿತ ರಚನೆಗಳು, ದೇವರನ್ನು ಕುರಿತ ಕವಿತಾ ಗುಚ್ಛ ಇವು ಕರೋನಾ ಪೀಡನೆಗೆ ಒಳಗಾದ ದುಷ್ಟ ರಾಜಕೀಯದಿಂದ ನರಳುವ ಲೋಕಕ್ಕೆ ಚೌಕಟ್ಟನ್ನು ತೊಡಿಸಿದಂತಿವೆ. ಕರೋನಾ ನಮ್ಮ ಬದುಕಿನ ಕರಾಳತೆಗೆ ಒಡ್ಡಿದ ಪ್ರತಿಮೆಯಾಗಿದೆ. ವರ್ಣನೆ ವಿಡಂಬನೆ, ಆಕ್ರೋಶ, ವ್ಯಂಗ್ಯಗಳ ಜೊತೆಗೇ ನಿರಾಳ ಬದುಕಿನ ಹಂಬಲ, ಆದರ್ಶಗಳೂ ಇವೆ. ಬಸವರಾಜು ಅವರು ಕಟ್ಟಿಕೊಳ್ಳುತ್ತಿರುವ ಕಾವ್ಯಲೋಕದ ತಾತ್ವಿಕತೆಯನ್ನು ವ್ಯಕ್ತಪಡಿಸಲು ಮುಗಿದ ಹಾಡಿನ ಖಾಲಿ ರಾಗ ಸಂಕಲನದ ರಚನೆಗಳು ಹವಣಿಸುತ್ತಿವೆ ಎಂದು ಓ.ಎಲ್. ನಾಗಭೂಷಣ ಸ್ವಾಮಿ ಹೇಳಿದ್ದಾರೆ.
ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್ಎಸ್ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...
READ MORE