‘ಮೊನಾಲೀಸಾ’ ಜಿ.ಎಸ್. ಶಿವಪ್ರಸಾದ್ ಅವರ ಕವನ ಸಂಕಲನವಾಗಿದೆ. ಸಮಕಾಲೀನ ಸಂದರ್ಭದ ಚಲನೆಗಳನ್ನು ಪ್ರಶ್ನಿಸುವ ಹಲವಾರು ಕವಿತೆಗಳು ಈ ಸಂಕಲನದಲ್ಲಿದೆ. ವರ್ತಮಾನದ ಸಮಾಜವು ಹಲವು ಬದಲಾವಣೆಗಳಿಗೆ ಒಳಗಾಗಿದೆ, ಒಳಗಾಗುತ್ತಲಿದೆ, ಒಳಗಾಗಲೇಬೇಕು. ಪ್ರಗತಿಯ ಹೆಸರಿನಲ್ಲಿ ಹಲವು ವಿಚ್ಛಿದ್ರಕಾರಕ ಸಂಗತಿಗಳನ್ನು ಚರಿತ್ರೆಯ ಹೊಸ ಅಧ್ಯಯನ ಕ್ರಮವೆಂಬಂತೆ ಬಿಂಬಿಸಲಾಗುತ್ತದೆ. ಬರಿಯ ಬಿಂಬಿಸುವಿಕೆ ಮಾತ್ರವಲ್ಲ ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ನಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯನೊಬ್ಬನಿಗೆ ಆಗುವ ದಿಗ್ಭ್ರಮೆಗಳು ಇಲ್ಲಿನ ಹಲವು ಕವಿತೆಗಳಲ್ಲಿವೆ. ಇಲ್ಲಿ ಏಕಕಾಲಕ್ಕೆ ಕವಿಯ ಹಾಗೂ ಓದುಗರ ಚಿಂತನೆಗಳಾಗಿಯೂ ಸಂಧಿಸುತ್ತವೆ.
monalisaa- ವರ್ತಮಾನದ ಜಗತ್ತಿನಲ್ಲಿ ಬದುಕುತ್ತಾ ಅದರ ಕಟುವಾಸ್ತವವನ್ನು ಅರಗಿಸಿಕೊಳ್ಳಲಾರದ, ನಂಬಲಾಗದ ಅಸಹಾಯಕ ಸಂಕಟಗಳು ಇಲ್ಲಿವೆ. ಈ ಸಂಕಟಗಳಿಗೆ ಕಾರಣವಾಗಿರುವ ವ್ಯವಸ್ಥೆಯನ್ನು ಪ್ರಶ್ನಿಸುವುದರ ಜೊತೆಗೆ ಕವಿಯೇ ಹೇಳುವಂತೆ ಬಂಡಾಯ ಮನೋಭಾವವಿದೆ. ಒಟ್ಟಾರೆಯಾಗಿ ಇಲ್ಲಿ ಕವಿಗೆ ನಮ್ಮ ಆಲೋಚನಾ ಕ್ರಮಗಳಲ್ಲಿ ಮೂಡಿರುವ ಧಾರ್ಮಿಕ, ರಾಜಕೀಯ ಆರ್ಥಿಕ ಆಲೋಚನಾ ವಿಧಗಳಲ್ಲಿನ ಬಿರುಕುಗಳು, ಅಸಮಾನತೆಗಳು, ಅಲ್ಪಸಂಖ್ಯಾತರ ಬಗೆಗಿನ ನಿಲುವುಗಳು, ಅತಿಯಾದ ಜಾತಿವಾದ ಮತ್ತು ರಾಷ್ಟ್ರ ಪ್ರೇಮ, ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ, ನೈತಿಕ ಪ್ರಜ್ಞೆಯನ್ನು ಕಾಡಬೇಕಾದ ವಿಚಾರಗಳು ತೀವ್ರವಾಗಿ ಕಾಡಿವೆ. ಇಂತಹ ವಿಚಾರಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ನೈತಿಕ ಸಾಮಾಜಿಕ ಜವಾಬ್ದಾರಿ ಕವಿಗಳಿಗೆ ಬೇಕಾಗಿದೆ ಎನ್ನುವ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಸಂಕಲನದಲ್ಲಿನ ಕವಿತೆಗಳನ್ನು ನಾವು ಗ್ರಹಿಸುವ ಅಗತ್ಯವಿದೆ.
ಸಾಹಿತಿ, ಲೇಖಕ, ಡಾ. ಜಿ.ಎಸ್.ಶಿವಪ್ರಸಾದ್ ಅವರು ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರರು. ಸದ್ಯ, ಇಂಗ್ಲೆಂಡಿನ ಚೆಸ್ಟರ್ ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು. ಇಂಗ್ಲೆಂಡಿನಲ್ಲಿ ‘ಕನ್ನಡ ಬಳಗದ ವೇದಿಕೆ’ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ‘ದಕ್ಷಿಣ ಅಮೆರಿಕಾ ಒಂದು ಸುತ್ತು’ (ಪ್ರವಾಸ ಕಥನ), ಇಂಗ್ಲೆಂಡಿನಲ್ಲಿ ಕನ್ನಡಿಗ (ಕನ್ನಡ-ಇಂಗ್ಲಿಷ್ ಕವನಗಳ ಸಂಕಲನ) ಹಾಗೂ ಪಯಣ (ಕಾದಂಬರಿ) . ...
READ MORE