'ಮೀನುಪೇಟೆಯ ತಿರುವು’ ರೇಣುಕಾ ಅವರ ಮೊದಲ ಕವನ ಸಂಕಲನ. ಹೊಸ ತಲೆಮಾರಿನ ಕವಯತ್ರಿಯ ಕವಿತೆಗಳು ಭರವಸೆ ಮೂಡಿಸುವಂತಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಈ ಕವಿತೆಗಳ ಬಗ್ಗೆ ಬೆನ್ನುಡಿಯಲ್ಲಿ ಜಿ.ಎನ್. ಮೋಹನ್ ಅವರು-
ಕವಿತೆಗಿದು ಕಾಲವಲ್ಲ ಎನ್ನುವ ಎಲ್ಲರೂ ರೇಣುಕಾಳ ಕವಿತೆಗಳಿಗೆ ಒರಗಿ ನಿಂತರೆ ಸಾಕು ಅದು ನಮ್ಮನ್ನು ಸಮುದ್ರದಂತೆ ಆವರಿಸಿಕೊಳ್ಳುತ್ತದೆ. ಈಗ ಈಕೆಯ ಕವಿತೆಗಳು ನಾನು 'ಹಚ್ಚಿಕೊಂಡ ಸಮುದ್ರ'. ಕಡಲ ಮೊರೆತವನ್ನು ಹಾಸಿಗೆ ಮಾಡಿಕೊಂಡು ವರ್ಷಾನುಗಟ್ಟಲೆ ಕಳೆದ ನನಗೆ ರೇಣುಕಾ ಕವಿತೆಗಳು ಬಿಟ್ಟುಕೊಡುವ ಅರ್ಥಗಳೇ ಬೇರೆ. ರೇಣುಕಾ ಕವಿತೆಗೆ ಸಮುದ್ರದ್ದೇ ಗುಣ, ಮೊರೆಯುತ್ತದೆ, ಬೊಜ್ಜಲಿಯುತ್ತದೆ, ಮುದ್ದಿಸುತ್ತದೆ, ತಲ್ಲಣಗೊಳ್ಳುತ್ತದೆ, ಅಷ್ಟೇ ಅಲ್ಲ ಕಳೆದುಹೋಗುತ್ತದೆ ತನಗೆ ತಾನೇ, ರೇಣುಕಾಗೆ ಕವಿತೆ ಎನ್ನುವುದು 'ಭತ್ತವೆಂಬ ಬಸಿಲಿಂದ ಹೊರಬರುವ ಹಾಲುಗಲ್ಲದ ಕೂಸು- ಅಕ್ಕಿ'ಯಂತೆ. ಮೀನುಪೇಟೆಯಲ್ಲಿ ಅಡ್ಡಾಡಿದವರಿಗೆ ಮಾತ್ರ ಗೊತ್ತು, ಅಲ್ಲಿಯೂ ಒಂದು ಹಾಡು ಇರುತ್ತದೆ ಎಂದು. ಹಾಗೆ ಮೀನುಪೇಟೆಯಲ್ಲಿ ಕಂಡ ಹಾಡು ರೇಣುಕಾ ರಮಾನಂದ, ಅವರ ಕವಿತೆಗಳು ನಿಮ್ಮನ್ನು ಒಂದೇ ಏಟಿಗೆ ಚಿತ್ ಮಾಡದಿದ್ದರೆ ಕೇಳಿ. ಹಾಗೆ ರೇಣುಕಾಗೆ ಹೇಳೋಣವೆಂದುಕೊಂಡರೆ ಅವರೇ ಬರೆದ ಹಾಗೆ ಆಕೆಯ 'ಊರಿನ ಶಂಖದ ಹುಳು ಇದನ್ನೆಲ್ಲಾ ನಂಬಲಿಕ್ಕಿಲ್ಲ...' ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು. ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ...
READ MOREಯುವಕವಿಗಳ ಪ್ರಥಮ ಸಂಕಲನ-2017