ಮಧ್ಯಮಾವತಿ

Author : ಪೂರ್ಣಿಮಾ ಸುರೇಶ್

Pages 134

₹ 120.00




Year of Publication: 2022
Published by: ವಿಕಾಸ ಪ್ರಕಾಶನ
Address: ಬೆಂಗಳೂರು
Phone: 9900095204

Synopsys

‘ಮಧ್ಯಮಾವತಿ’ ಕೃತಿಯು ಲೇಖಕಿ ಪೂರ್ಣಿಮಾ ಸುರೇಶ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಹಿನ್ನೋಟ ಬರೆದಿರುವ ಕೆ. ತಿರುಮಲೇಶ್ ಅವರು, ಈ ಸಂಕಲನದ ಮೊದಲ ಕವಿತೆಯ ಬೇಲಿಯನ್ನು ನೀವು ದಾಟಿ ಬಂದರೆ ನಿಮಗೆ ಸಿಗುವುದು ‘ಕಳ್ಳಬೆಕ್ಕು’. ಬೆಕ್ಕಿನ ಕುರಿತಾಗಿ ನಾನು ಇದುವರೆಗೆ ಓದಿದ ಕವಿತೆಗಳಲ್ಲಿ ಅತ್ಯಂತ ವಿಶಿಷ್ಟವಾದ ಕವಿತೆ. ಅದು ಯಾಕೋ ಬೆಕ್ಕು ಎಂದರೆ ಕವಿಗಳಿಗೆ ಇಷ್ಟ. ಅವರಿಗೆ ಅದೊಂದು ಮಿಸ್ಟೀಕ್. ಹುಲಿಯಾಗುವುದು ತಪ್ಪಿ ಬೆಕ್ಕು ಬೆಕ್ಕಾಯಿತು ಎನ್ನುವ ಜನಪ್ರಿಯ ಕಲ್ಪನೆಯೊಂದಿದೆ. ಆ ಕೊರಗಿನಿಂದ ಅದು ಈಗಲೂ ನರಳುತ್ತಿದೆಯಂತೆ. ಕೊರಗು ಯಾಕೋ ತಿಳಿಯದು. ಬೆಕ್ಕನ್ನು ಯಾರೂ ಬೇಟೆಯಾಡಿ ಕೊಲ್ಲುವುದಿಲ್ಲ. ಕಳ್ಳಬೆಕ್ಕಿಗೆ ಒಂದು ಛಡಿ ಕೊಟ್ಟರೂ ಕೊಡಬಹುದು, ಅದೂ ಹಿಡಿಸೂಡಿಯಿಂದ. ಅಂಥ ಪೆಟ್ಟೆಂದರೆ ಅದಕ್ಕೆ ಚಾಮರ ಬೀಸಿದ ಹಾಗೆ. ಮೊನ್ರೋನದು ಟೇಬಲಿನ ಕೆಳಗೆ ಸಿಗುತ್ತೋ ಇಲ್ಲವೋ ಎಂಬ ಆತಂಕದಿಂದ ಹಾಲಿಗೆ ಕಾಯುವ ಸಾಧು ಬೆಕ್ಕಾದರೆ ಪೂರ್ಣಿಮಾರದು ದಶಾವತಾರಿ ಕಳ್ಳಬೆಕ್ಕು. ಅದಕ್ಕೆ ಒಂದು ಸ್ಥಿರ ಮನೆ ಎಂದಿಲ್ಲ, ಎಲ್ಲಿ ನುಗ್ಗಿದರೆ ಅಲ್ಲೆ ಮನೆ. ಉಳಿದಂತೆ ಊರು ಕೇರಿಯೇ ಅದರ ಕ್ಷೇತ್ರ. ಸಿಕ್ಕ ಮನೆ ಕೇವಲ ‘ಹೆಳೆಗೆ; ಸಿಕ್ಕಲ್ಲಿ ನುಗ್ಗಿ ಸಿಕ್ಕಿದ್ದನ್ನು ಪಟಾಯಿಸುತ್ತದೆ. ಮನೆಯೊಡತಿಯ ಮೈಮೇಲೆ ಹಾರಿ ಗಾಯ ಮಾಡುತ್ತದೆ, ತಾನೂ ಎಲ್ಲೆಲ್ಲಿಂದಲೋ ಗಾಯ ಮಾಡಿಸಿಕೊಳ್ಳುತ್ತದೆ. ತುಪ್ಪುಳದ ಮಿದು ಪಾದ; ಆದರೆ ಇದರಿಂದ ಹರಿತವಾದ ನಖಗಳು ಬೇಕೆಂದಾಗ ಹೊರಬರಬಹುದು. ಕವಿತೆ ಇದರ ಹಾವಿನಂತಹ ಪಾದವನ್ನು ವರ್ಣಿಸುತ್ತದೆ. ಮೊದಲಿಗೆ ನಾನು ಇಲ್ಲಿ ‘ಹೂವಿನಂತಹ ಬಾಲ’ ಎಂದು ಓದಿದೆ, ಓದಿ ಆಹಾ ಎಂದುಕೊಳ್ಳುವಷ್ಟರಲ್ಲಿ ಅದು ‘ಹಾವಿನಂತಹ ಬಾಲ’ವಾಗಿ ಮಾರ್ಪಟ್ಟಿತು. ಏನೆಂದರೆ ಯಾವ ರೂಪಕಕ್ಕೂ ಒದಗುವ ಮಾಯಾರೂಪಿ ಬೆಕ್ಕು ಇದು. ಹೋಯಿತು ಎಂದುಕೊಂಡರೆ, ಒಂದೆರಡು ದಿನ ಕಳೆದು ಎದುರು ದಂಡೆಯ ಮೇಲೆ ತಪಸ್ವಿಯಂತೆ ಕುಳಿತಿದೆ! ಈ ಚಿತ್ರ ಮನೋಜ್ಞವಾಗಿದ್ದು ಕಪಟ ಮಾರ್ಜಾಲವನ್ನು ಒಂದು ಬಗೆಯ ನಿಷ್ಕಪಟಿಯನ್ನಾಗಿ ಮಾಡಿ ನಮಗೆ ಆತ್ಮೀಯವಾಗಿಸುತ್ತದೆ ಎನ್ನುತ್ತಾರೆ. ‘ಇಬ್ಬನಿ’ ಒಂದು ರೂಪಕ-ಯಾವುದಕ್ಕೆ ಎಂದು ವಿವರಿಸಿದರೆ ಅದು ಮಾಯವಾಗುವ ಹಾಗಿದೆ. ಅಭಿಸಾರಕತ್ವ? ನಿಷೇಧವೊಂದನ್ನು ಉಲ್ಲಂಘಿಸುವ ತುಡಿತ? ಮನಸ್ಸೇ ಒಂದು ಇಬ್ಬನಿ. ಮನಸ್ಸು ಆ ಒಂದು ಸ್ಥಿತಿಯಲ್ಲಿ ಸ್ಥಿರವಾಗಿ ಇರುವುದೂ ಇಲ್ಲ. ಚಂಚಲ. ಸರಿಯುತ್ತಲೇ ಇರುತ್ತದೆ. ಇಲ್ಲಿಯ ಆರಂಭದ ವಾಕ್ಯವನ್ನು ಗಮನಿಸಿ: ಮೊಲೆ ತೊಟ್ಟು ಬಾಯೊಳಗೆ. ಕಣ್ಣನು ಅರೆ ಮುಚ್ಚಿ ಸ್ವಪ್ನಲೋಕದ ಗಡಿಯಲಿ ವಿಹರಿಸುತಿಹ ಎದೆಗಂಟಿದ ಕಂದನ ಮುಗ್ಧ ಸುಖ ಸೆಳೆದು ನಿಧಾನವಾಗಿ... ಸದ್ದಾಗದ ಹೆಜ್ಜೆಯಲಿ ಅರೆಬೆಳಕಿನಲಿ ಕೈಗೆಟಕಿದ ಲೆಗಿಂಗ್ಸ್ ಕುರ್ತಾ ಎಳೆದು ತಂಬಿಗೆ ನೀರ ಅವಸರದಲಿ ಎರೆದು ಉಡುಪಿನೊಳಗೆ ತನ್ನನು ತುಂಬಿಸಿ... ಸ್ಕೂಟಿ ಚಾಲೂ ಮಾಡಿ ಧಾವಿಸುತ್ತಾಳೆ ‘ಧಾವಿಸುತ್ತಾಳೆ’ ಎನ್ನುವಲ್ಲಿ ಕೊನೆಯಾಗುವ ಅರ್ಧವಾಕ್ಯಗಳ ಸರಣಿ ಒಂದರ ಮೇಲೊಂದರಂತೆ ತರಾತುರಿಯಲ್ಲಿ ನಡೆಯುವ (ತಾನು ಕುರ್ತಾವನ್ನು ಒಳಹೊರಗಾಗಿ ತೊಟ್ಟುಕೊಂಡಿದ್ದೇನೆ ಎನ್ನುವುದೂ ಅವಳಿಗೆ ಗೊತ್ತಾಗುವುದು ತಡವಾಗಿ) ದೈನಂದಿನ ಕ್ರಿಯೆಗಳನ್ನು ಸೂಚಿಸುತ್ತದೆ. ಇದೊಂದು ಯಾಂತ್ರಿಕ ಜೀವನ- ಜೀವನ ಇರುವುದೇ ಹಾಗೆ ಎಂಬ ಅನಿವಾರ್ಯತೆ. ಈ ಒತ್ತಡದ ನಡುವೆಯೂ ಒಂದು ನವಿರಾದ ಹಿತದ ಸುಳಿಯಿದೆ: ‘ಅವನು’! ಅವನು ಅವಳನ್ನು ಕಾಣಲು ಕಾದಿರುತ್ತಾನೆ, ಅದಕ್ಕಿಂತ ಹೆಚ್ಚಿನ ಯಾವ ಅಪೇಕ್ಷೆಯೂ ಇಲ್ಲದೆ. ‘ವೃತ್ತದೊಳಗೆ ಎತ್ತಿಟ್ಟ’ ಅವಳ ಪಾದ ಅವನಿಗೆ ಪುಳಕ ತರುತ್ತದೆ ಎಂದಿದ್ದಾರೆ. ಪೂರ್ಣಿಮಾರ ಕವಿತೆಗಳಲ್ಲಿ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಆದರೂ ಎಲ್ಲವೂ ವಿಶಿಷ್ಟವಾಗಿ ಕಾಣಿಸುತ್ತಾರೆ. ಕವಿ ರೂಪಕಪ್ರಿಯರೂ ಹೌದು. ಅವು ಕೂಡ ಅನನ್ಯ ರೀತಿಯಲ್ಲಿ ಬರುತ್ತವೆ. ‘ಪಾತ್ರ ಪರಿಚಯ’ ಇಡಿಯಾಗಿ ಕೋಟೆ ಕೊತ್ತಲ, ಯುದ್ಧ, ಆಯುಧಗಳು ಇತ್ಯಾದಿ ರೂಪಕಗಳಿಂದ ತುಂಬಿದೆ. ಇದರ ಆರಂಭದ ಸಾಲುಗಳೇ ಆಕರ್ಷಕವಾಗಿವೆ ಎನ್ನುತ್ತಾರೆ.

 

About the Author

ಪೂರ್ಣಿಮಾ ಸುರೇಶ್

ಲೇಖಕಿ, ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕದ ಬಿ ಗ್ರೇಡ್ ಕಲಾವಿದೆಯೂ ಆಗಿದ್ದಾರೆ. ಸಂಘಟಕಿ ಹಾಗೂ ನಿರೂಪಕಿಯಾಗಿರುವ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವರ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಪ್ರಶಸ್ತಿಗಳು : ಗ್ಲೋಬಲ್ ಸಿನಿ ...

READ MORE

Reviews

‘ಮಧ್ಯಮಾವತಿ’ ಕೃತಿಯ ವಿಮರ್ಶೆ

ಈ ಕವನಸಂಕಲನದಲ್ಲಿ, ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಅಂತರಂಗದ ‘ಅವನು’ ಬಹಳಷ್ಟು ಪ್ರಶ್ನೆ ಕೇಳುತ್ತಾನೆ. ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ. ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ. ಹಾಗೆಂದು ಇಲ್ಲಿ ರೂಪಕಗಳ ಮೂಲಕ ಮಾತನಾಡುವ ಕವಿತೆಗಳು ಎಲ್ಲವನ್ನೂ ಬಿಟ್ಟುಕೊಡಲೂ ತಯಾರಿಲ್ಲ.ಪೂರ್ಣಿಮಾ ಸುರೇಶ್‍ ಹೊಸಕವನ ಸಂಕಲನ ‘ಮಧ್ಯಮಾವತಿ’ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ.

ವೃತ್ತದೊಳಗೆ ಎತ್ತಿಟ್ಟ ಪಾದ,ಇದ್ದೂ ಇರಲಾಗದ ಯಾವುದೋ ಚಡಪಡಿಕೆ,ಮೀರುವಿಕೆಯಲ್ಲಿನ ದ್ವಂದ್ವ,ಒಂದರೆಕ್ಷಣ ಚಂಚಲಗೊಳ್ಳುವ ಚಿತ್ತ ಮತ್ತು ತೀವ್ರವಾಗಿ ಸೆಳೆಯುವ ಬದುಕಿನ ಕವಿತೆ ‘ಅವನು’.

ಬದುಕಿನ ಯಾಂತ್ರಿಕತೆಯ ನಡುವೆಯೂ ಬದುಕಲು ಅಗತ್ಯವಾದ ನಶೆಯಂತೆ,ನವಿರಾದ ಕನಸಿನಂತೆ,ಅವನಂತೆ ಯಾವುದೋ ಒಂದಕ್ಕೆ ಮನಸ್ಸು ಉತ್ಕಟವಾಗಿ ತುಡಿಯುತ್ತದೆ. ಭಾವಕ್ಕೆ, ಬದುಕಿಗೆ ಪ್ರಾಮಾಣಿಕರಾಗುವ ಕೆಚ್ಚಿರುವವರಲ್ಲಿ, ಆರೋಪಿತ ನೀತಿಗಳನ್ನು ಧಿಕ್ಕರಿಸುವ ತೀವ್ರತೆ ಇರುವವರಲ್ಲಿ ಎರಡೂ ಹೆಜ್ಜೆ ವೃತ್ತದಿಂದ ನೆಗೆದು ಬದುಕು ಕವಿತೆಯಾಗುತ್ತದೆ.

ಮತ್ತು ಈ ಸೆಳೆತ
ಅರಿವಿಗೆ ನಿಲುಕದ
ಆಧ್ಯಾತ್ಮ

ಅನ್ನುತ್ತಲೇ ಕವಿತೆಗಳಿಗೆ ಮುಖಾಮುಖಿಯಾಗುತ್ತಾರೆ ಕವಯತ್ರಿ ಪೂರ್ಣಿಮಾ ಸುರೇಶ್.ಸಂಬಂಧಗಳಲ್ಲಿನ ಸಂಕೀರ್ಣತೆಯನ್ನು ತನ್ನ ಕವಿತೆಗಳಲ್ಲಿ ನಿರಂತರವಾಗಿ ಶೋಧಿಸುತ್ತಾ,ತನ್ನನ್ನು ತನಗೆ ಮುಖಾಮುಖಿಯಾಗಿಸುತ್ತಾ,ಒಳಗೆ ಸಿಕ್ಕಿದ ಅವನನ್ನು ಹೊರಗೂ ಹುಡುಕುತ್ತಾ ಮತ್ತು ಆ ಅನುಭವಗಳನ್ನು ನಮ್ಮೊಳಗೂ ದಾಟಿಸುತ್ತಾ ಕವಿತೆಯ ಜೊತೆಯಲ್ಲಿ ಖಾಸಗಿ ಮಾತುಕತೆ ನಡೆಸುತ್ತಾರೆ.ಮಧ್ಯಮಾವತಿ ಇಂತಹ ದಟ್ಟ ಅನುಭವಗಳ ಕವಿತೆಗಳ‌ ಕಟ್ಟು.

ಅಕಾಲದ ಮಳೆ ನಿನ್ನೆ
ನನ್ನೆದುರು ಅಚಾನಕ ನಿಂತ
ಅಚ್ಚರಿ ನೋಡಿದೆ

ಎಂದೋ ಸುರಿದಿದ್ದ ಅಕಾಲದ ಮಳೆ ಮನದ ಮೂಲೆಯಲ್ಲೆಲ್ಲೋ ನಿರಂತರವಾಗಿ ಸುರಿಯುತ್ತಲೇ ಇತ್ತು.ಬಹುಶಃ ಮುಂದೆ ಕೂಡಾ.ಈ‌ ಒಂದು ಭೇಟಿ ಸಾಧ್ಯವಾಗದೇ ಇರುತ್ತಿದ್ದರೆ! ಅವನು ಮಾತಾಡುತ್ತಿದ್ದರೆ ಅವನೊಳಗೆ ಮಲಗಿದ ನನ್ನದೇ ನೆರಳನ್ನು ಹುಡುಕುವ ಪ್ರಯತ್ನ ಮಾಡುತ್ತಲೇ ಇದ್ದೆ.

ನೆರಳು ಅವನೊಳಗೆ ಇಳಿದಿರುವಾಗ
ನನ್ನದೇನು ಮಾತು?
ಅವನು ಉಳಿದೇಹೋದ
ನೆರಳ ತಬ್ಬುವ ಕಾಯಕ
ಈಗ.

‘ಅವನ ಹಿಂದೆ ಸುತ್ತಿಬಂದ ನನ್ನ ಅಕ್ಷರಗಳು ದಣಿದಿವೆ.ಅವನ ಪಾದಗಳ ಅಚ್ಚಿನಲ್ಲಿ ನನ್ನ ಪಾದಗಳನ್ನು ಇಟ್ಟು ನೋಡುತ್ತೇನೆ ಪದೇಪದೇ. ಇಲ್ಲ ನನ್ನ ಪಾದಗಳು ಹೊಂದುತ್ತಿಲ್ಲ. ಈ ನನ್ನ ಪಾದಗಳು ಬೆಳೆಯುವುದಿಲ್ಲ.ಅವನ ಸೇರುವಲ್ಲಿ ಈಗಿರುವುದು ದಣಿವಷ್ಟೇ. ಸುಮ್ಮನೆ ಸುತ್ತಿ ಸುತ್ತಿ ಬರುವ ದಣಿವು. ಅವನು ಸಿಗದ ಬೇಸರ. ನಿರೀಕ್ಷೆಯ ಕಣ್ಣುಗಳ ಕುತೂಹಲ ಇನ್ನೂ ತೀರಿಲ್ಲ’ ಎನ್ನುವ ಕವಿತೆ ಸಾಲುಗಳು. ಆದರೂ ಎಂದಾದರೂ ಒಮ್ಮೆ

ಅವನ ಪ್ರೀತಿಯ ಮುದ್ರೆಯುಂಗುರದ
ಮೊಹರು ಹೊತ್ತು
ಹಿಂತಿರುಗುವ ನನ್ನ ಅಕ್ಷರಗಳ‌
ನಿರೀಕ್ಷೆಯಲ್ಲಿ

ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಬಹಳಷ್ಟು ಪ್ರಶ್ನೆ ಕೇಳುತ್ತಾನೆ.ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ.ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ.

ನನಗೆ ನಂಬಿಕೆ ಇದೆ ಅಗಣಿತ ನಾಳೆಗಳಲ್ಲಿ
ಋತುಸ್ನಾನ ಮುಗಿಸಿ
ಇಲ್ಲೇ ನಿಂದಿರುವೆ

ಪದಗಳು ನೆಲದಾಳಕ್ಕಿಳಿದು ಮಾಸು ಕಳಚಿ ಅಂಡ ಛಿದ್ರವಾಗಿದೆ.ಆದರೆ ನಿರೀಕ್ಷೆಯ ಕಡಲಿನ್ನೂ ಬತ್ತಿಲ್ಲ.ಅಕ್ಷರಗಳು ಮತ್ತೆ ಮಗದೊಮ್ಮೆ ಶಬ್ದಗಳಾಗುವ ಮಾಸದ ಫಲಕ್ಕಾಗಿ.ಈ ತಿಂಗಳಾದರೂ ನಿಲ್ಲುವ, ಗರ್ಭಕಟ್ಟುವ ನಿರೀಕ್ಷೆಯಲ್ಲಿಯೇ

 ಈ ಬಾರಿ ಒಂದಿಷ್ಟು ಸನಿಹ ಬಾ
ಆತುಕೊಳ್ಳಲಿ ಬಿಂಬ
ಪರಿಮಳದ ತಂತು ಎದೆಯಿಂದ ಎದೆಗೆ
ಹೆಣ್ಣಾಗುವೆ

ಅನ್ನುತ್ತಾ ಹತ್ತಿರ ಕರೆಯುತ್ತಾಳೆ. ಈ ಕರೆಯಲ್ಲಿಯೇ ಒಂದು ಉತ್ಕಟವಾದ ಪ್ರಾರ್ಥನೆ ಇದೆ. ‘ಈ ಸಲವಾದರೂ..’ ಅನ್ನುವ ನಿರೀಕ್ಷೆ ಇದೆ.

ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆ
ವಾಸ್ತವದ ಹೆಣ್ಣುಗಳ,ನಿಜದ ತೊಡೆಳ,ಆತ್ಮ
ಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲುಗಳ

ಅಂತ ಅಡಿಗರು ಪ್ರಾರ್ಥಿಸಿದ ಹಾಗೆ. ಒಳ್ಳೆಯ ಕಾವ್ಯ ಮೂಡಿಬರಬೇಕಾದರೆ ಅಷ್ಟೇ ಉತ್ಕಟವಾದ ಅಭಿವ್ಯಕ್ತಿಯ ಅನುಭವ ಬೇಕು. ಅದು ಅರಗದಂಥ ಕಚ್ಚಾ ಗಾಳಿಗೀಳುಗಳು ಕಾಗದ ಮೇಲೆಲ್ಲಾ ಕಾರಿಕೊಂಡಂತೆ ಅಲ್ಲ. ಈ ಅರಿವು ಅರೆಹೊರೆದ ಮೊಟ್ಟೆ,ದೊರೆ; ಚಿಪ್ಪೊಡೆದು ಬರಲಿ ಪರಿಪೂರ್ಣಾವತಾರಿ ವಿನಾತಾಪುತ್ರ. ಕವಿಮನದ ಕಾಯುವಿಕೆಯ ತಪದಲ್ಲಿ ಚಿತ್ತ ಹುತ್ತಗಟ್ಟಿದರೆ ಮಾತ್ರ ಪೂರ್ಣವತಾರಿ ಕವಿತೆ ಹುಟ್ಟುವುದು ಮತ್ತು ಅದು ಸಾರ್ಥಕ ಕವಿತೆ ಅನ್ನಿಸಿಕೊಳ್ಳುವುದು ಕವಿಯ ಎಚ್ಚರದಲ್ಲಿ.ಅಡಿಗರು ಹೇಳಿದಂತೆ; ತಕ್ಕ ತೊಡೆ ನಡುವೆ ಧಾತುಸ್ಖಲನದೆಚ್ಚರವ!

ಇಲ್ಲಿಯೂ ಕವಯತ್ರಿ ಕೇಳಿಕೊಳ್ಳುವುದರಲ್ಲಿ ಬಹಳಷ್ಟು ಸಾಮ್ಯವಿದೆ. ತಕ್ಕ ಸಮಯಕ್ಕಾಗಿ ಕಾಯುವ ಎಚ್ಚರವಿದೆ. ನಿರೀಕ್ಷೆ ಇದೆ: ಹತಾಶೆಯ ನಡುವೆಯೂ ಒಂದು ಪರಿಪೂರ್ಣ ಅವತಾರಕ್ಕಾಗಿ.

ನಡೆಯಲಿ ಒಂದು ಸೀಮಂತ
ಓಕುಲಿ ಚೆಲ್ಲಾಡಲಿ ಮನದ ಹೊಸ್ತಿಲಲ್ಲಿ
ಹಡೆಯುವೆ ಮುದ್ದು ಕವನ.
ಇಲ್ಲವೇ?ಇದ್ದೇ ಇದೆ ಕೆಂಪು ಸ್ನಾನ.

ರೂಪಕಗಳ ಮೂಲಕ ಮಾತಾಡುವ ಕವಿತೆಗಳು ಎಲ್ಲಾ ಅರ್ಥಗಳನ್ನು ಬಿಟ್ಟುಕೊಡುವುದಿಲ್ಲವಾದರೂ ಬೊಗಸೆಗೆ ಸಿಕ್ಕಿದ್ದನ್ನು ಹಿಡಿಯುತ್ತಾ ಹೋದರೆ ಕವಿತೆ ಕಡಲಾಗುತ್ತದೆ. ಓದಿ‌ ಮುಗಿದ ನಂತರವೂ ಮನದೊಳಗೆ ಯಾವುದೋ ಒಂದು ಅಪೂರ್ಣ ಚಿತ್ರ ಕಾಡುತ್ತಲೇ ಇರುತ್ತದೆ.ಅಂತಹ ಹಲವಾರು ಕವಿತೆಗಳು ಈ ಸಂಕಲನದಲ್ಲಿವೆ.

ಯಾವುದೋ ಕ್ಷಣದಲ್ಲಿ ಮನೆಯೊಳಗೆ ಕಳ್ಳಬೆಕ್ಕೊಂದು ನುಗ್ಗಿದೆ. ಅದಕ್ಕೆ ನಾನು ಹೆದರಿದ ಹಾಗೆ ಅದೂ ನನ್ನನ್ನು ನೋಡಿ ಹೆದರಿ ಓಡುತ್ತದೆ.

ಒಂದಿಷ್ಟೂ ಸದ್ದುಗದ್ದಲವಿಲ್ಲ
ಒಳಹೊಕ್ಕು ಅಡ್ಡಾಡುತ್ತದೆ
ವರಾಂಡ,ಅಡುಗೆಮನೆ,ಖಾಸಗಿಕೋಣೆ
ದೇವರಮನೆಯನ್ನೂ ಬಿಟ್ಟಿಲ್ಲ

ಅನ್ನುವಾಗ ಬೆಕ್ಕು ನುಗ್ಗಿದ ಮನೆ ಯಾವುದು? ತನ್ನ ಖಾಸಗಿ ಕೋಣೆಯೊಳಗೂ ನುಗ್ಗಿದ್ದು ಹೌದಾ? ಅದು ಬರಿಯ ಬೆಕ್ಕು ಮಾತ್ರನಾ? ಅನ್ನುವ ದ್ವಂದ್ವಗಳಲ್ಲಿ ಕವಿತೆ ಬೆಳೆಯುತ್ತದೆ. ಬೆಕ್ಕು ನೋಡಲು ಅಂದ.ರಾತ್ರಿ ಮುಚ್ಚಿದ ಕೋಣೆಯಲ್ಲಿ ಒಬ್ಬಳೇ ಅದಕೆ ಎದುರಾಗಬೇಡ.ಅದರೊಳಗೆ ಆಕ್ರಮನದ ಗುಣವಿದೆ. ಅಂತ ಕೇಳಿದ‌ ಮಾತು ಎದೆಯೊಳಗೆ ಕೂತು ಈಗ ಬೆಕ್ಕಿನ ನೆರಳೂ ಭಯ ಹುಟ್ಟಿಸುತ್ತದೆ.ಮತ್ತು ಕವಿತೆ ಸ್ತ್ರೀವಾದಿ ನೆಲೆಗಳಿಗೆ ಹೊರಳುತ್ತೆ. ಬೆಕ್ಕು ಗಂಡಾಗಿ ತೋರಲು ಶುರುವಾಗುವುದು ಕವಿತೆಯ ಇನ್ನೊಂದು ಹಂತ. ಆದರೆ ಅದು ಒಂದು ಹಲ್ಲಿ,ಇಲಿ,ಜಿರಳೆಯನ್ನೂ ಹಿಡಿದ ಕುರುಹುಗಳಿಲ್ಲ.ಆದರೂ ಅವ್ಯಕ್ತ ಭಯ;ಅದಕ್ಕಿರುವ ಸಾಧ್ಯತೆಗಳನ್ನು ಕಂಡು,ಮೃದು ತುಪ್ಪಳದ ಪಾದದಿಂದ ಚಿಗುರುವ ನಖಗಳನ್ನು ಕಂಡು.

ಇದೇ ಭಾವ ಮಾಯೆ ಕವಿತೆಯಲ್ಲಿ ಇನ್ನೂ ಗಾಢವಾಗಿ ಚಿತ್ರಿಸಿದ್ದಾರೆ ಅಂತ ನನಗನ್ನಿಸುತ್ತೆ.

ಊರ ಗಂಡುಗಳಿಗೆಲ್ಲ
ಇವಳ ದೇವರಾಗುವ ಗರ್ಜು

ಅನ್ನುತ್ತಾ ತೆರೆದುಕೊಳ್ಳುವ ಕವಿತೆ ದೇವದಾಸಿ ಪದ್ಧತಿಯ ಕುರಿತಾಗಿ ವಿಶ್ಲೇಷಿಸುತ್ತದೆ.ಈ ಹುಡುಗಿ ಹೇಗಿದ್ದರೂ,ಎಂದಾದರೊಂದು ದಿನ ತನಗೆ ದಕ್ಕಲೇಬೇಕಾದವಳು ಅನ್ನುವ ಹಕ್ಕಿನ ನಿಲುವು ಊರ ಎಲ್ಲಾ ಗಂಡುಗಳದ್ದು. ನಿಮ್ಮಮ್ಮ,ಅಜ್ಜಿ ಎಲ್ಲರೂ ದೇವರ ಬಲಬದಿಯ ಹೆಣ್ಣುಗಳಾಗಿದ್ದವರು ಅನ್ನುತ್ತಲೇ ಈ ಹುಡುಗಿ ಆ ಪದ್ಧತಿಯನ್ನು ಅನುಸರಿಸದಿದ್ದರೂ ಸುಲಭವಾಗಿ ದಕ್ಕುವ ಹೆಣ್ಣು ಅನ್ನುವ ಭಾವವೇ ಬಹುತೇಕ ಎಲ್ಲರದ್ದು. ಊರ ಗಂಡುಗಳ ಇಣುಕುವ,ಕರೆಯುವ ಗರ್ಜಿನ ನೋಟವ ಎದುರಿಸಲಾಗದೇ

ಬೆಪ್ಪುಗೊಂಡ ಹುಡುಗಿ
ದೇಗುಲದ ಹೊರಗೆ
ಪತಾಕೆಗಳ ಕಳಚಿಟ್ಟು
ಬತ್ತಲಾಗಿ ನಿಂತ ರಥವನೂ
ಅದರೆದುರು ಹೂಂಕರಿಸುತ
ಧೂಳೆಬ್ಬಿಸುವ ಹೋರಿಯನೂ ಕಂಡು
ಚಿತ್ರವಾಗಿದ್ದಾಳೆ; ವಿಚಿತ್ರವಾಗಿದ್ದಾಳೆ.

ಅನ್ನುವಲ್ಲಿ ಕವಿತೆ ಕೊನೆಯಾಗುತ್ತದೆ. ನನಗೆ ಪತಾಕೆಗಳ ಕಳಚಿ ಬೆತ್ತಲಾದ ರಥದಲ್ಲಿ ಪದ್ಧತಿ ತೊರೆದು ಹೊರಟ ಹುಡುಗಿಯೂ, ಹೂಂಕರಿಸುವ ಹೋರಿಯ ಕಣ್ಣಿನಲ್ಲಿ ಊರ ಗಂಡುಗಳ ನೋಟ ಕಂಡಂತಾಗಿ ಕವಿತೆ ಮತ್ತಷ್ಟು ಅರ್ಥಗಳಿಗೆ ತೆರೆದುಕೊಂಡಿತು.

ಬದುಕಿನ ಯಾಂತ್ರಿಕತೆಯ ನಡುವೆಯೂ ಬದುಕಲು ಅಗತ್ಯವಾದ ನಶೆಯಂತೆ,ನವಿರಾದ ಕನಸಿನಂತೆ,ಅವನಂತೆ ಯಾವುದೋ ಒಂದಕ್ಕೆ ಮನಸ್ಸು ಉತ್ಕಟವಾಗಿ ತುಡಿಯುತ್ತದೆ. ಭಾವಕ್ಕೆ, ಬದುಕಿಗೆ ಪ್ರಾಮಾಣಿಕರಾಗುವ ಕೆಚ್ಚಿರುವವರಲ್ಲಿ, ಆರೋಪಿತ ನೀತಿಗಳನ್ನು ಧಿಕ್ಕರಿಸುವ ತೀವ್ರತೆ ಇರುವವರಲ್ಲಿ ಎರಡೂ ಹೆಜ್ಜೆ ವೃತ್ತದಿಂದ ನೆಗೆದು ಬದುಕು ಕವಿತೆಯಾಗುತ್ತದೆ.

ಎಲ್ಲಾ ಇದ್ದೂ ಸಪ್ಪೆಯಾಗಿಬಿಡಬಹುದಾದ ಬದುಕಿನ ನಿಜವಾದ ರುಚಿ ಯಾವುದರಲ್ಲಿದೆ?ಯಾರನ್ನೋ ನೆಚ್ಚಿಕೊಂಡು ಬದುಕಿನ ಸಾರವನ್ನೆಲ್ಲಾ ಅವರ ಜೊತೆಯಲ್ಲಿ ಹೀರಿಕೊಂಡೆ ಅನ್ನುವಾಗ ಹೌದಾ? ಅಥವಾ ಹಾಗಂದುಕೊಂಡದ್ದು ಮಾತ್ರ,ಇದಲ್ಲ ನಿಜವಾದ ಬದುಕಿನ ಸ್ವಾದ ಅನ್ನುವ ಕೀಟವೊಂದು ಕೊರೆಯಲು ತೊಡಗಿದಾಗ ಬದುಕು ಮಗ್ಗುಲು ಬದಲಾಯಿಸುತ್ತದೆ. ಇನ್ನೇನೋ ರುಚಿಗೆ ಹಂಬಲಿಸುತ್ತದೆ. ಯಾವುದನ್ನು ಹೇಗೆ ಯಾವ ಹದದಲ್ಲಿ ಬೆರೆಸಬೇಕು? ನಾವು ಕಂಡುಂಡ ನೋವು ನಲಿವು ಬದುಕಿನ ನಿಜವಾದ ಸ್ವಾದವಲ್ಲವೆ? ಅಥವಾ ಕೆ.ಎಸ್.ಎನ್ ಹೇಳುವ ಹಾಗೆ, ನೋವು ನಲಿವುಗಳಾಚೆ ಇದೆ ಚೆಲುವು ಅಂದುಕೊಂಡು ಅದರಾಚೆಗಿನ ಸತ್ಯವನ್ನು ಹುಡುಕಬೇಕಾ?

ಸಿಹಿ,ಉಪ್ಪು,ಹುಳಿ,ಖಾರ
ಅದರಾಚೆ ಇರಬಹುದೇ ರುಚಿ?
ಯಾವ ಹದದಲಿ
ಏನು ಬೆರೆಸಬೇಕು?
ರುಚಿ ಒಡಲನ್ನು ಹೇಗೆ ಮುಟ್ಟಬೇಕು?
ಹಸಿದ ಬೆಂಕಿಯಿದೆ
ಬೇಯಬೇಕು ಕಾಯ ತರಕಾರಿ
ಕೊನೆಗೆ ಉಣ್ಣಲು ತುಸುವಾದರೂ
ತಣಿಯಲೇಬೇಕು.

ಇಲ್ಲಿ‌ ಬದುಕಿಗೆ ಸದಾ ಬೆರೆಸಬೇಕು ಒಂದಕ್ಕೆ ಇನ್ನೊಂದು ಆಗದೇ ಇರುವಂತೆ ರುಚಿಯ ಏಕತಾನತೆ. ಖಾರ ಹೆಚ್ಚಾದರೆ ಹುಳಿ ಅಥವಾ ಚಿಟಿಕೆ ಸಕ್ಕರೆ.ಹಸಿದ ಬೆಂಕಿಯಿದೆ. ಬೇಯಬೇಕು ಕಾಯ ತರಕಾರಿ. ದೇಹವೆನ್ನುವ ತರಕಾರಿ ಬೇಯಬೇಕು, ಬೆಂದು ಹದವಾಗಬೇಕು. ಉಣ್ಣಲು ತುಸುವಾದರೂ ತಣಿಯಲೇಬೇಕು. ತಿಮ್ಮಗುರು ಹೇಳಿದಂತೆ,

ಕಾವಿರದೆ ಪಕ್ವವಿಹ ಜೀವವಿಳೆಯೊಳಿರದು
ನೋವೆಲ್ಲ ಪಾವಕವೋ – ಮಂಕುತಿಮ್ಮ

ಅಕ್ಕ ತಾನು ಮದುವೆಯಾದ ಗಂಡನನ್ನು ತೊರೆದು ಚೆನ್ನಮಲ್ಲಿಕಾರ್ಜುನನನ್ನು ತನ್ನ ನಲ್ಲ ಎಂದೂ, ಅವನನ್ನೇ ಬಯಸಿ ಬಯಲಾದವಳು.ದೇವರನ್ನು ತನ್ನ ಸಾಂಗತ್ಯಕ್ಕಾಗಿ ಬಯಸಿದವಳು.ಇಲ್ಲೂ ಕವಯತ್ರಿ ತನಗೆ ಎಟುಕಲಾರದ ದೇವರ ಪಟ್ಟಕ್ಕಿಂತ ಜೊತಜೊತೆಗೆ ನಡೆವ,ಜೀವಸ್ಪಂದನೆಯ ಸಖನಾಗಿ ದೇವರನ್ನು ಅಥವಾ ತನಗೆ ಎಟುಕಲಾರದಷ್ಟು ದೂರದ ಎತ್ತರದ ದೇವರ ಪಟ್ಟಕ್ಕೇರಿದ ತನ್ನವನನ್ನು ಬಯಸುತಿದ್ದಾಳೆ.

ಬಯಲ ಹೊಗಲಾರೆ
ಹೊಸಿಲೊಳಗೆ ಭಜಿಸಲಾರೆ
ಹೇಳು,ನೀನು ಯಾಕಾದೆ ದೇವರು?

ನಿನ್ನನ್ನು ಕಾಣಲು ಬಯಲಿಗೆ ಬರಲು ಕಾಲಿಗೆ ನೂರು ಬೇಡಿಗಳಿವೆ.ಅವುಗಳನ್ನೆಲ್ಲಾ ಹೇಗೆ ಕಿತ್ತು ಬರಲಿ? ಒಳಗೇ ನಿನ್ನ ಭಜಿಸುತ್ತಾ ಇಲ್ಲದ ಸುಖವ ಆರೋಪಿಸಿಕೊಂಡು ಇರಲಾರೆ.ಬೇಡಿಕೆಗಳೆಲ್ಲಾ ಬಾಗಿಲಾಚೆಯೇ ಕಾಯಲಿ,ಅದಕ್ಕೆ ಬೇಕಾದಷ್ಟು ಸಮಯವಿದೆ.ಬೇಡಿಕೆ ಹೊತ್ತು ಬಂದವರೂ ಕಾದಾರು.ಆದರೆ ನನ್ನಲ್ಲಿ ಬೇಡಿಕೆಗಳಿಲ್ಲ.ಈ ಬೇಡಿಯನ್ನೊಂದು ಕಳಚಿಟ್ಟರೆ ನಾನೂ ನೀನೂ ಬೇರೆಯಲ್ಲ.ಆದರೆ ಅವನು ಅಷ್ಟು ಸುಲಭಕ್ಕೆ ದಕ್ಕುವನೆ?

ಹೇಳೇ, ಭಕ್ತರ ನಡುವೆ
ಸಿಲುಕಿದವನನ್ನು ಏಕಾಂತಕ್ಕೆ
ಎಬ್ಬಿಸುವವರು ಯಾರು?

ಕವಿತೆ ಓದಿದ ನಂತರ ನನ್ನನ್ನು ಕಾಡುವ ಪ್ರಶ್ನೆಗಳಲ್ಲಿ ಇದೂ ಒಂದು. ನನ್ನ ಅಗತ್ಯಕ್ಕೆ ನನ್ನ ಸಾಂಗತ್ಯಕ್ಕೆ ಅವನನ್ನು ಲೋಕಾಂತದಿಂದ ನನ್ನ ಏಕಾಂತಕ್ಕೆ ಕರೆಯುವುದು ಹೇಗೆ?

ದೇವರನ್ನು ಪ್ರೀತಿಸುವುದು ಸುಲಭವಲ್ಲ
ಕಲ್ಲು ಕರಗುವ ಸಮಯಕೆ ಕಾಯಬೇಕು
ದೀಪದ ಬಿಸಿ ತಂಪಾಗಬೇಕು
ಅಭಿಷೇಕದ ಜಿಗುಟು
ಸಡಿಲವಾಗಬೇಕು
ಆರತಿ ಹೊಗೆ ನಿವಾಳಿಸಬೇಕು
ಅವನ ಕಣ್ಣಲ್ಲಿ ಬಣ್ಣದ ಹಕ್ಕಿ
ಗೂಡುಕಟ್ಟುವುದೇ
ಕಾಯಬೇಕು
ಮತ್ತೂ ಕಾಯಬೇಕು

ಈ ಸಾಲುಗಳು ಕಟ್ಟಿಕೊಡುವ ಅನುಭವ ಮೂಡಿಸುವ ಅನೂಹ್ಯ ವಿಸ್ಮಯ ಈ ಕವಿತೆಯ ಶಕ್ತಿ.ಸಾರ್ಥಕತೆ.ಕಲ್ಲು ಕರಗುವ ಸಮಯಕ್ಕೆ ಕಾಯಬೇಕು.ಭಾವಕಲ್ಲಾಗಿ ನಿಂತ ದೇವರನ್ನು ಕರಗಿಸುವ ವಿಧಾನಗಳನ್ನು ಅರಿಯಬೇಕು.ಆರತಿಯ ಬಿಸಿ,ಅಭಿಷೇಕದ ತಂಪು,ಕೊಡುವ ನೈವೇದ್ಯ ಅಷ್ಟೇನಾ? ಒಪ್ಪಿಸಿಕೊಳ್ಳಬೇಕು.ಎಲ್ಲವನ್ನೂ ತೊರೆದು ಬಯಲಾಗಬೇಕು.ಅಲ್ಲಿಯತನಕ ಕಾಯಬೇಕು. ಅಡಿಗರ ಕವಿತೆಯ ಒಂದು ಸಾಲು ನೆನಪಾಗುತ್ತೆ ಮತ್ತೆ…

ಅನಾಥನಾಗದೆ ನಾಥ ದೊರೆವನೇ? ಸೇಂದ್ರಿಯದ ನಾತ ನೀಗದೆ ಅತೀಂದ್ರಿಯದ ನಿಷ್ಕಂಪ ದೀಪ?

ಶಬ್ದದೊಳಗಣ ನಿಶ್ಯಬ್ದದಂತೆ ಅಂತ ಕವಿತೆಯನ್ನು ವ್ಯಾಖ್ಯಾನಿಸುವವರಿದ್ದಾರೆ.”ಎಂಥ ಸಾಲಂಕೃತ ಛಂದೋಬದ್ಧ ಶಬ್ದಪುಂಜವೇ ಆಗಲಿ ಅದು, ಅದರೊಳಗಣ ಈ ನಿಶ್ಯಬ್ದವನ್ನು ಅಂದರೆ ಅನಿರ್ವಾಚ್ಯವನ್ನು ಕೇಳಿಸುವುದಕ್ಕೆ ಸಮರ್ಥವಾದರೆ ಮಾತ್ರ ಅದು ಕವಿತೆಯೆನ್ನಿಸಿಕೊಂಡೀತು” ಅಂತ ಹೇಳುವ ಪು.ತಿ.ನ.ರ ಮಾತಿನಲ್ಲಿ ನನಗೆ ಹೆಚ್ಚಿನ‌ ನಂಬಿಕೆ.ಅಲ್ಲದೇ, ಅರ್ಥವಾದಂತೆ ಅನ್ನಿಸಿ ದೂರವೇ ಉಳಿದುಬಿಡುವ,ಇಲ್ಲದ ಅರ್ಥಗಳನ್ನು ಆರೋಪಿಸಿಬಿಡುವ,ಇರುವ ಅರ್ಥಗಳು ಸುಲಭಕ್ಕೆ ಅನುಭವಕ್ಕೆ ಬಾರದಂತಿರುವ ಈ ಕವಿತೆ ಅನ್ನುವುದು ನಡುವಯಸ್ಸಿನಂತೆಯೇ ತೀರದ ದ್ವಂದ್ವ ಅಂತ ಎಷ್ಟೋ ಸಲ‌ ನನಗೆ ಅನ್ನಿಸಿಬಿಟ್ಟಿದೆ.

ನಡು ದಾಟಿದ ನಡೆ
ಕದವಿನ್ನೆಷ್ಟು ದೂರ
ತೆವಳಲಾಗದ ಭಾರ

ಅನ್ನುತ್ತಾ ಕವಯತ್ರಿ ನಡುವಯಸ್ಸಿಗೆ ಕವಿತೆಯನ್ನು ಮುಖಾಮುಖಿಯಾಗಿಸಿದ ರೀತಿ ಖುಷಿಕೊಡುತ್ತದೆ.ಇನ್ನೂ ಒಳಗೆ ಬೆಚ್ಚಗೆ ಇರುವವರು ಯಾರು? ಒಳಗೇ ಇದ್ದವರು ಅಂತ ತೋರುತ್ತಾ ಹೊರಗೆ ಉಳಿದವರೆಷ್ಟು? ಯಾರನ್ನು ನೆಚ್ಚಿ ಈ ಬದುಕನ್ನು ಬದುಕುವುದು? ಎಲ್ಲಾ ಯೋಚನೆಗಳನ್ನು ಮೀರಿ ಬದುಕು ಸಾಗುತ್ತದೆ.ಒಟ್ಟಾಗಿ ಬದುಕು ಕಟ್ಟಬೇಕು ಅನ್ನುವ ಕನಸುಗಳನ್ನೆಲ್ಲಾ ಬುಡಮೇಲಾಗಿಸಿ ಇಬ್ಬರ ಬದುಕೂ ಸಮನಾಂತರವಾಗಿಯೇ ಸಾಗಿ ಬದುಕಿನ ಮಧ್ಯಾಹ್ನ ಕಳೆದ ಕಾಲದಲ್ಲಿ ಮತ್ತೆ ಭೇಟಿಯಾಗಿಸುತ್ತದೆ.ಹೊರಗಿನ ಮಾತುಗಳ‌ ಸಾಮ್ರಾಜ್ಯದಲ್ಲಿ ಅಂತರಂಗವನ್ನು ತೆರೆದು ಒಬ್ಬರನೊಬ್ಬರನ್ನು ಭೇಟಿ ಮಾಡಿಸುವ ಇರಾದೆ ಇಬ್ಬರಲ್ಲೂ ಮೂಡುವುದಿಲ್ಲ.ಈ ನಡುವಯಸ್ಸಿಗೆ ಅಂತಹ ದ್ವಂದ್ವ.

ನನ್ನೊಳಗಿನ ಅವಳ
ನಿನ್ನೊಳಗಿನ ಅವನ
ಭೇಟಿಯಾಗಿಸದಿರು

ಒಳಗಿನ ಮತ್ತು ಹೊರಗಿನ ಪ್ರಪಂಚ ವಿಭಿನ್ನವಾದ ನೆಲೆಗಳಲ್ಲಿ ತೆರೆದುಕೊಳ್ಳುವ ಸಮಯವದು.ಬಾಗಿಲನ್ನು ತೆರೆಯುವುದಕ್ಕೂ ಮುಚ್ಚುವುದಕ್ಕೂ ರೂಪಕವಾಗಿ ಬಳಸಿದ ಬಗೆಗೆ ಬೆರಗೊಂದು ನಮ್ಮಲ್ಲಿ ಉಳಿದುಬಿಡುತ್ತದೆ.

ಹೊರಹೋದರೇ…
ಒಳಗೇ ಇರುವರೇ
ಈ ಬಾಗಿಲನ್ನೇನು ಮಾಡಲಿ?

ಪ್ರೇಮ ಪಕ್ವವಾಗುವ ಕಾಲವೇ? ಕಾಮ ತನ್ನ ಉತ್ಕಟತೆಯನ್ನು ಮರೆತು ಶಾಂತ ನದಿಯಾಗಿ ಹರಿಯುವ ಪರಿವರ್ತನೆಯ ಕಾಲವೇ? ಕಾಯದ ಅವಶ್ಯಕತೆಗಳು ಬೇರೆಯೇ ಆಗಿ ಗೋಚರಿಸುವ ಕಾಲವೇ? ಒಲವಿನ ಸುಖ ಇನ್ನೇನೋ ಇರಬೇಕು ಅಂತನ್ನಿಸಿ ಕಾಯದಾಚೆಗೂ ಘಮವನ್ನು ಅರಸುವ ಕಾಲವೇ ಈ ನಡುಹರೆಯ?

ಈ ನಡುಹರೆಯ ಹೀಗೆ
ಇರದುದನ್ನು ಇದೆ ಅನ್ನಿಸುವ
ಹಸಿವಿನ ಸಂಧಿಕಾಲ!

ಸಂಬಂಧಗಳು ಬಲು ಸೂಕ್ಷ್ಮದ ನೇಯ್ಗೆ.ಜತನದಿಂದ ಕಾಪಿಟ್ಟುಕೊಳ್ಳಬೇಕಾದ ಜವಾಬ್ದಾರಿ ಇಬ್ಬರದ್ದು ಕೂಡಾ.ಬಿ.ಆರ್.ಲಕ್ಷ್ಮಣರಾವ್ ಅವರ ಒಂದು ಕವಿತೆ ದಾಂಪತ್ಯದ ಈ ಸೂಕ್ಷ್ಮಗಳನ್ನು ಬಹಳ ಚೆನ್ನಾಗಿ ಅಭಿವ್ಯಕ್ತಿಸುತ್ತದೆ.ನನ್ನ ನಿನ್ನ ಪ್ರೀತಿ ಅಪ್ಪಟವಾದ ಚಿನ್ನವೇ ಆಗಿರಬಹುದು.ಆದರೆ ಮೆರುಗು ಕೊಡದೇ ಹೋದರೆ ಆ ಪ್ರೀತಿಯೂ ಹೊಸದಾಗಿ ಉಳಿಯುವುದಿಲ್ಲ.ಬಹಳ ಬೇಗನೇ ಮಾಸಿ ಹೋಗುತ್ತದೆ.ಅವರು ಹೇಳುವ ಈ ಮೆರುಗು ಅಸಲಿಗೆ ಏನು? ಒಬ್ಬರಿಗೊಬ್ಬರು ಆಗುವ,ಜವಾಬ್ದಾರಿಗಳನ್ನು ಹಂಚಿಕೊಳ್ಳುವ, ಸಣ್ಣಪುಟ್ಟ ವಿಷಯಗಳನ್ನೆಲ್ಲಾ ಬೆಟ್ಟ ಮಾಡದೇ ನಗುವನ್ನು ಸದಾ ಉಳಿಸಿಕೊಳ್ಳುವ ಇಬ್ಬರೂ ನಿಭಾಯಿಸಬೇಕಾದ ಪುಟ್ಟಪುಟ್ಟ ಪ್ರೀತಿಯ ಜವಾಬ್ದಾರಿಗಳು.

ಮನೆಯ ತಲೆಬಾಗಿಲಲ್ಲಿ
ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲನೀನೂ ಕಾರಣ

ಅನ್ನುವುದನ್ನು ಅರ್ಥಮಾಡಿಕೊಂಡರೆ ಸಂಬಂಧದ ಭಾವ ಸದಾ ಹೊಸ ಸೀಸೆಯೊಳಿರುವ ಹಳೆಯ ಮಧುವಿನಂತೆ ಉತ್ಕಟವಾಗಿರುತ್ತದೆ.ಆ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು.ಪ್ರೀತಿ ಇಲ್ಲದ ಮೇಲೆ ಮತ್ತೆ ಹೂವು ಅರಳೀತು ಹೇಗೆ? ಮೆರುಗು ಕೊಡಲು ಮರೆತ ಸಂಬಂಧಗಳ ನಡುವೆ ಸಂಶಯದ ನೊಣವೊಂದು ನುಗ್ಗಿ ಕಿರಿಕಿರಿ ಶುರುವಾಗುತ್ತದೆ.ಇದನ್ನು ಬಹಳ ಸಶಕ್ತವಾಗಿ ಅಭಿವ್ಯಕ್ತಿಸಿದೆ ಒಳಕೋಣೆಗೆ ನುಗ್ಗಿದ ನೊಣ ಅನ್ನುವ ಕವಿತೆ.ನೊಣ ಮನೆಗೆ ಬಂದದ್ದರ ಬಗೆಗೆ ತಕರಾರುಗಳಿಲ್ಲ ಕವಿಗೆ.ತಕರಾರೇನಿದ್ದರೂ ಅದು ನಮ್ಮ ಖಾಸಗಿ ಕೋಣೆಯೊಳಗೇ ಬೀಡುಬಿಟ್ಟಿರುವ ಕುರಿತಾಗಿ.

ಎಗ್ಗಿಲ್ಲದೆ ಮಂಚ ಸುತ್ತಿ
ಹೊದಿಕೆ ಸ್ಪರ್ಶಿಸಿ
ದಂಪತಿ ದಿಂಬಿನ ಕಂಪು ಮೂಸಿ
ಹಾರುತ್ತಿತ್ತು.

ಅಲ್ಲಿಯ ತನಕ ಅದು ಬಂದದ್ದಾದರೂ ಹೇಗೆ? ಸಣ್ಣ ಸುಳಿವೂ ಸಿಗದೆ? ಬೆಳಕು ಹಚ್ಚಿ ಹುಡುಕಾಡಿದೆವು…ಅಂದರೆ ಅಲ್ಲಿಯತನಕ ಕತ್ತಲು ಇತ್ತೇ? ಯಾವ ಕತ್ತಲು? ಒಬ್ಬರನೊಬ್ಬರು ಅರಿಯದ ಕತ್ತಲು? ಮೆರುಗು ಕೊಡಲು ಮರೆತ ಮಾಸಲು ಕತ್ತಲು? ಬೆಳಕಲ್ಲಿ ಮುಖ ನೋಡಿಕೊಳ್ಳುವುದಕ್ಕೂ ಧೈರ್ಯ ಬೇಕು.

ಎಲ್ಲ ನಿನ್ನಿಂದಲೇ…
ಮೊದಲು ಹೊರಹಾಕು

ಆರೋಪ! ತೋರಣ ಒಣಗಿದ್ದು ನಿನ್ನಿಂದಲೇ ಅನ್ನುವ ಆರೋಪ.ಈ ನೊಣ ಅಷ್ಟು ಸುಲಭಕ್ಕೆ ಹೊರಹೋಗುವ ಯಕಶ್ಚಿತ್ ಅಲ್ಲ.ಇಬ್ಬರೂ ಸೇರಬೇಕು.ಅಕ್ಷಯ ಪಾತ್ರೆಯಲ್ಲ ದಾಂಪತ್ಯದ ನಲಿವು; ತಂದು ತುಂಬಬೇಕು ನಾವೇ ಪ್ರತಿಸಲವೂ!ಅದಿಲ್ಲದೇ ಹೋದರೆ ಮತ್ತೆ ಮತ್ತೆ ಗತಿ ಬದಲಿಸುತ್ತಾ ಹಾರುತ್ತಾ,ನಡುವೆ ಕಣ್ಣಮುಚ್ಚಾಲೆ ಆಡುತ್ತಲೇ ಉಳಿದೇಹೋಗುತ್ತದೆ ಈ ನೊಣ!

“ಮರದಿಂದ ನಿಸೂರಾಗಿ ಕಳಚಿ ಬೀಳುವಾಗಲೆ ಗಾಳಿಯ ಅಲೆಗೆ ತುಸುವೇ ಸಿಕ್ಕಿ ನಿರ್ಗಮನವನು ನರ್ತಿಸುವ ಎಲೆಯಂಥ ಕವಿತೆ” ಅನ್ನುತ್ತಾರೆ ಜಯಂತ್ ಕಾಯ್ಕಿಣಿ.ನಿರ್ಗಮನಕ್ಕೂ ನರ್ತನದ ಮೂಲಕ ಬೀಳ್ಕೊಡುಗೆಯ ಅನುಭವವನ್ನು ಕವಿತೆ ಕಟ್ಟಿಕೊಡುತ್ತದೆ.ಕವಿತೆ ಆ ಕ್ಷಣದ ಧ್ಯಾನ. ಓದುವಾಗ ಆ ಎಲೆಯ ನರ್ತನ ಕಣ್ಣಿಗೆ ಕಟ್ಟಿದರೆ ಕವಿತೆ ದಕ್ಕುತ್ತದೆ. ಇಲ್ಲದಿದ್ದರೆ ಎಲೆಯೊಂದು ಉದುರುತ್ತದೆ.
ಎಲೆ ಮತ್ತು ಗಾಳಿಯ ರೂಪಕ ಈ ಸಂಕಲನದಲ್ಲಿಯೂ ಬಹಳ ಗಾಢವಾಗಿದೆ.

ನರೆತ ಎಲೆ ನರಳುತಿದೆ
ಕೊಂಬೆಯ ಮೋಹದಲಿ
ಇಳಿಸು ಬಾ

ಅಂತ ಗಾಳಿಗೆ ಕರೆ ಕೊಡುತ್ತಾರೆ.ಯಾಕೆಂದರೆ ಗಾಳಿ ಯಾವುದನ್ನೂ ಮರೆಯದ ಮಮತಾಮಯಿ.ಇನ್ನೂ ಅಂಟಿಕೊಂಡಿರುವ ಮೋಹವನ್ನು ಕಳಚಿ ಬಿಡುಗಡೆಗೆ ದಾರಿ ತೋರಿಸುತ್ತದೆ.ಕಳಚಿ ಬೀಳುವ ಎಲೆಯನ್ನೂ ಮುಕ್ತಿಯ ಖುಷಿಯಲ್ಲಿ ನರ್ತಿಸುವಂತೆ ಮಾಡುತ್ತದೆ.

ಹೆಣ್ಣಿನ‌ ಬದುಕು ಬಹಳ ಸಂಕೀರ್ಣವಾದದ್ದು.ಅದು ಹೊರ ಜಗತ್ತಿನ ಮುಖಾಮುಖಿಯಾಗಲಿ ಅಥವಾ ಅವಳ ಖಾಸಗಿ ಒಳಜಗತ್ತಿನ ಅಗತ್ಯಗಳಾಗಲಿ.ಅಷ್ಟು ಸುಲಭವಾಗಿ ತೆರೆದುಕೊಳ್ಳದಷ್ಟು ಬೇಡಿಗಳಿವೆ.ಎಲ್ಲವನ್ನೂ ಹೇಳಿ ಹಗುರವಾಗುವುದು ಅಷ್ಟು ಸುಲಭವಲ್ಲ ಅವಳಿಗೆ.ಹಾಗಾಗಿಯೇ ಮಾತು ಮತ್ತು ಕೃತಿ ಅಡ್ಡಗೋಡೆಯ ಮೇಲಿಟ್ಟ ದೀಪವಾಗುವುದು ಅವಳ ಪಾಲಿನ ಅನಿವಾರ್ಯತೆ.

ಎರಡು ದ್ರುವಗಳ ನಡುವೆ
ಅವಳು ಭೂಮಧ್ಯರೇಖೆ

ಅನ್ನುವ ಸಾಲುಗಳು ಅವಳನ್ನು ಸರಿಯಾಗಿ ವಿಶ್ಲೇಷಿಸಿಸುತ್ತವೆ.ಒಳಗೆ ಹುಟ್ಟಿದವರೇ ಹೊರಗೂ ಸಿಗುವಂತಿದ್ದರೆ? ಅಷ್ಟು ಸುಲಭವೇ? ಹಾಗಾಗಿಯೇ ಇಲ್ಲಿ ಅವಳ ಅವನು ದೇವರಾಗುತ್ತಾನೆ.ಹೆಣ್ಣು ಮತ್ತೆ ಮತ್ತೆ ಅಕ್ಕನಾಗುತ್ತಾಳೆ.ಅವಳು ಎರಡು ದ್ರುವಗಳ‌ ನಡುವೆ ಭೂಮಧ್ಯ ರೇಖೆಯಾಗುತ್ತಾಳೆ ಅದಕ್ಕಾಗಿಯೇ ಅವಳು ಮಧ್ಯಮಾವತಿ! 
ಇಷ್ಟು ಹೇಳಿಯೂ ಎಲ್ಲವನ್ನೂ ಕವಿತೆಯಾಗಿಸಲು ಸಾಧ್ಯವಾಗಲಿಲ್ಲ ಅನ್ನುವ ಎಚ್ಚರವೂ ಕವಿಗಿದೆ.ಅದಕ್ಕೆ ಸಾಕ್ಷಿಯಾಗಿ,

ಕ್ಷಮಿಸಿ,
ದಯವಿಟ್ಟು ಅವನನ್ನು
ನನಗಾಗಿ ಬಿಟ್ಟುಬಿಡಿ
ಅವನು
ಕವಿತೆಯ ಪದಗಳಿಗೆ ಸಿಗುವುದಿಲ್ಲ.

ಸಂಕಲನ ಓದಿ ನಿರುಮ್ಮಳನಾಗಿ ಕೂತ ಕ್ಷಣಕ್ಕೆ ಉಳಿಯುವ ಭಾವವಿಷ್ಟೇ

 (ಕೃಪೆ : ಕೆಂಡಸಂಪಿಗೆ)

‘ಮಧ್ಯಮಾವತಿ’ ಕೆಂಡಸಂಪಿಗೆ

---

 

 

Related Books