'ಅಂಬಿಕಾತನಯದತ್ತರಿಗೆ ೫೦ ತುಂಬಿದಾಗ ಕಾವ್ಯ ಪ್ರೇಮಿಗಳಿಂದ ಸಾರ್ವಜನಿಕ ಸತ್ಕಾರ ಸಿಕ್ಕಿತು. ಆಗ ಅವರನ್ನು ಅಭಿನಂದಿಸಿ ಮಾತಾಡಿದವರು ಕವನ ರಚಿಸಿ ಹಾಡಿದವರು 'ವರಕವಿ' ಎಂದು ಮನದುಂಬಿ ಕರೆದರು. 'ಕವಿವರ ಎಂಬ ಅಭಿನಂದನ ಪುಸ್ತಕವೂ ಆಗ ಬಂತು. ಅಂದಿನಿಂದ ಬೇಂದ್ರೆ ಕುರಿತ ಮೆಚ್ಚುಗೆ, ಪ್ರಶಂಸೆಗಳು ಪತ್ರಿಕೆಗಳಲ್ಲಿ ಅಭಿನಂದನ ಗ್ರಂಥಗಳಲ್ಲಿ ಬಿಡಿಬಿಡಿಯಾಗಿ ಬಂದೇ ಬಂದವು. ೧೯೭೪ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರಾಪ್ತವಾದಾಗ ಅಭಿನಂದನ ರೂಪದಲ್ಲಿ ಮತ್ತು ೧೯೮೧ರಲ್ಲಿ ಬೇಂದ್ರೆಯವರು ತೀರಿಕೊಂಡಾಗ ಶ್ರದ್ದಾಂಜಲಿ ರೂಪದಲ್ಲಿ ಕವನಗಳು ಬಂದವು. ಅವುಗಳನ್ನು ಶೋಧಿಸಿ ಒಂದೆಡೆ ಮರುಪ್ರಕಾಶಿಸುವ ಈ ಕೃತಿಯ ೮೬ ಕವನಗಳು 'ಅಂಬಿಕಾತನಯದತ್ತ'ರ ಹಿರಿಮೆ-ಗರಿಮೆಯನ್ನು ಸಹೃದಯರೆದುರು ತೆರೆದಿಡುತ್ತದೆ. ಗೋಕಾಕ, ಚಂ.ಪಾ., ನಾಡಿಗ, ಎಚ್.ಎಸ್.ವಿ., ಮಧುರಚೆನ್ನ, ಚೆನ್ನವೀರ ಕಣವಿ, ಆರ್.ಸಿ.ಹಿರೇಮಠ, ಕೆ.ಎಸ್.ಶರ್ಮಾ, ಡಿ.ಎಸ್.ಕರ್ಕಿ, ದಿನಕರ ದೇಸಾಯಿ, ಕೀರ್ತಿನಾಥ ಕುರ್ತಕೋಟಿ, ವಿಷ್ಣು ನಾಯಕ, ಪರಾಂಜಪೆ, ವಿಜಯಕಾಂತ ಪಾಟೀಲ, ಮಹಮದ ಅಲಿ ಗೋಗೇರಿ ಮುಂತಾದ ೮೬ ಕವಿಗಳು ವರಕವಿಗೆ ಸಲ್ಲಿಸಿದ ಗೌರವ ಪ್ರಶಂಸೆರೂಪದ ಕವನಗಳು ಇಲ್ಲಿವೆ.