ಕವಿ ಮಂಡಲಗಿರಿ ಪ್ರಸನ್ನ ಅವರ ಮೊದಲ ಕವನ ಸಂಕಲನ-ಕನಸು ಅರಳುವ ಆಸೆ. ಸಂಕಲನದಲ್ಲಿ 40 ಕವಿತೆಗಳಿವೆ. ‘ಕಾರ್ಮಿಕರ ಗೋಳು ಅರಣ್ಯ ರೋಧನ, ಮಾಲೀಕನ ಸುಖ ನಿತ್ಯ ನೂತನ (ಕರುಳು ಕರಗುವ ಹಾಡು...)’ ಇಂತಹ ಸಾಲುಗಳ ಮೂಲಕ ಭರವಸೆಯ ಕವಿಯಾಗಿ ಗುರುತಿಸಿಕೊಂಡಿದ್ದ ಮಂಡಲಗಿರಿ ಪ್ರಸನ್ನ, ವೃತ್ತಿಯಿಂದಾಗಿ ಸಿಮೆಂಟ್ ನಗರಿ ಶಹಾಬಾದದಲ್ಲಿದ್ದು(ಕಲಬುರಗಿ ಜಿಲ್ಲೆ), ಅಲ್ಲಿಯ ಕಾರ್ಮಿಕರ ಬದುಕನ್ನು ಕಣ್ಣಾರೆ ಕಂಡು, ಅದನ್ನೇ ತಮ್ಮ ಕಾವ್ಯದ ಜೀವಾಳವಾಗಿರಿಸಿ, ಸಾಹಿತ್ಯಕ ವಲಯದಲ್ಲಿ ಛಾಪು ಮೂಡಿಸಿದವರು.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ಸರಜೂ ಕಾಟ್ಕರ್ ‘ಸ್ಪಷ್ಟ ವಿಚಾರ ಹಾಗೂ ಶಬ್ದಗಳ ಹಿತಮಿತ ಬಳಕೆಯಿಂದ ಒಂದು ಸನ್ನಿವೇಶವನ್ನು ಕಾವ್ಯವಾಗಿಸುವ ಕಲೆ ಕವಿಗೆ ಸಿದ್ಧಿಸಿದೆ ಎಂದು ಪ್ರಶಂಸಿಸಿದ್ದಾರೆ. ಪ್ರೀತಿ-ಪ್ರೇಮದ ಸೆಳೆತಕ್ಕೆ ಸಿಕ್ಕ ಈ ಕವಿ ‘ಇಂದಿಗೂ ಮುಂದಿನ ಜನ್ಮವೇನಾದರೂ ಇದ್ದರೆ ಅವಳು ಗಂಡಾಗಿ, ನಾನು ಹೆಣ್ಣಾಗಿ, ಗಂಡಿಗೂ ನೋವಿರುತ್ತದೆ ಎನ್ನುವುದನ್ನು ತೋರಿಸಬೇಕೆಂದುಕೊಂಡಿದ್ದೇನೆ ’ (ಕವನ-ಗಂಡಿಗೂ ನೋವಿದೆ) ಎನ್ನುವ ಮೂಲಕ ಗಂಡುಗಳ ಪರ ಪ್ರಬಲವಾಗಿ ವಾದಿಸುವ ಹಠಕ್ಕೆ ಕಾವ್ಯದ ಸ್ಪರ್ಶ ನೀಡಿದ್ದುಇಲ್ಲಿಯ ವಿಶಿಷ್ಟತೆ. ಇದೇ ರೀತಿಯ ಕವನಗಳು ಓದುಗರಿಗೆ ಮುದ ನೀಡುತ್ತವೆ, ಚಿಂತನೆಯನ್ನು ಹುರಿದುಂಬಿಸುತ್ತವೆ. ಸಮಕಾಲೀನ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವಂತೆ ಪ್ರೇರೇಪಿಸುತ್ತವೆ.
ರಂಗಭೂಮಿ, ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಒಲವು ಇರುವ ಮಂಡಲಗಿರಿ ಪ್ರಸನ್ನ 1963 ರ ಅಕ್ಟೋಬರ್ 18 ರಂದು ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಜನಿಸಿದರು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ಕನಸು ಅರಳುವ ಆಸೆ (2000), ಅಮ್ಮ ರೆಕ್ಕೆ ಹಚ್ಚು (2003), ನಿನ್ನಂತಾಗಬೇಕು ಬುದ್ಧ (2016) - ಕವನ ಸಂಕಲನ. ‘ಏಳು ಮಕ್ಕಳ ನಾಟಕಗಳು’ (2016) - ಮಕ್ಕಳ ನಾಟಕಗಳು. ಪದರಗಲ್ಲು, ಕವಿರಾಜ - ಸ್ಮರಣೆ ಸಂಚಿಕೆ ಸಂಪಾದಿತ ಕೃತಿಗಳು. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ಧಾರೆ. ಅವರ ...
READ MORE