’ಕಾದಂಬಿನಿಯವರ ಕವನಗಳನ್ನು ಹಿಡಿದು ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ ಪ್ರೀತಿ ಪ್ರೇಮದ ಏಳು ಬಗೆಗಳಿಗೆ ಯಾವಾವ ಕವನ ಹೊಂದಿಕೊಳ್ಳುತ್ತದೆ? ಎಂದು ತಾಳೆ ಮಾಡುವುದು ಪೆದ್ದುತನ. ಏಕೆಂದರೆ ಪ್ರಾಚೀನ ಗ್ರೀಕರ ಸಪ್ತಪ್ರೀತಿಯ ನಿರೂಪಣೆಯೇ ಅಂತರ್ ಸಂಬಂಧ ಮತ್ತು ಕ್ರಮಪರಿಣಾಮ ಪ್ರಕ್ರಿಯೆಯನ್ನು ಹೊಂದಿದ್ದು ಪ್ರತ್ಯೇಕ ಘಟ್ಟಗಳ ಅವಸ್ಥೆ ಎಂಬುದನ್ನು ನಿರಾಕರಿಸುತ್ತದೆ. ಇಲ್ಲಿನ ಕವನಗಳು ಏಳುಬಣ್ಣ ಸೇರಿ ಬಿಳಿಯಬಣ್ಣ ಆದಂತೆ ಸಂಕೀರ್ಣ ಅರ್ಥಪಟಲವನ್ನು ಒಳಗೊಂಡಿದ್ದು , ನಿಜಸಹೃದಯರೆಂಬ ಪ್ರಿಸಂ ನಲ್ಲಿ ಹಾಯುವ ಬೆಳಕಿನ ಕಿರಣಗಳಂತಿವೆ. ಇವನ್ನು ವಿಮರ್ಶೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ವಿವರಿಸಲಾಗದು’ ಎಂದು ’ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕುರಿತು ಒಂದೆಡೆ ಹೇಳಿಕೊಂಡಿದ್ದಾರೆ ವಿಮರ್ಶಕ ಚಂದ್ರಶೇಖರ ನಂಗಲಿ.
ಪ್ರೀತಿ ಪ್ರೇಮದ ಪಲುಕುಗಳನ್ನು ಹೇಳುತ್ತಲೇ ಅಲ್ಲಿಂದ ಆಳಕ್ಕೆ ಜಿಗಿಯುವ, ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆಗೆ ತುಡಿಯುವ ಹಂಬಲ ಇಲ್ಲಿನ ಕವನಗಳಿಗೆ ಇದೆ. ಅಮಾನವೀಯತೆಯನ್ನು, ಪ್ರಸ್ತುತ ಹೆಣ್ಣಿಗೆ ಆಗುತ್ತಿರುವ ಅನ್ಯಾಯವನ್ನು ಥಟ್ಟನೆ ಮನಮುಟ್ಟುವಂತೆ ಹೇಳಬಲ್ಲರು ಕಾದಂಬಿನಿ. ಕಥುವಾ ಅತ್ಯಾಚಾರದಂತಹ ವಿಚಾರವನ್ನು ಅವರೆಷ್ಟು ತೀಕ್ಷ್ಣವಾಗಿ ಅಕ್ಷರಗಳ ಮೂಲಕ ವಿರೋಧಿಸಿದ್ದಾರೆ ಮತ್ತು ಆ ಕವಿತೆ ಹೇಗೆ ಕಲಾತ್ಮಕತೆಯಿಂದಲೂ ಗಮನ ಸೆಳೆಯುತ್ತದೆ ಎಂಬುದನ್ನು ಅರಿಯಲು ಸಂಕಲನವನ್ನು ಓದಲೇಬೇಕು.
ಕಾದಂಬನಿ ರಾವಿ ಅವರು ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸವಾಗಿರುವ ಇವರು ಬಿಡುವಿನ ವೇಳೆಯಲ್ಲಿ ಓದು-ಬರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಕಾದಂಬಿನಿ ಅವರ ಹಲವು ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’, ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಅವರ ಪ್ರಕಟಿತ ಕಾವ್ಯಸಂಕಲನಗಳು. ...
READ MOREಕಲ್ಲೆದೆಯ ಮೇಲೆ ಕೂತ ಹಕ್ಕಿ- ಕನೆಕ್ಟ್ ಕನ್ನಡ
ಹಲಗೆ ಮತ್ತು ಮೆದುಬೆರಳು' ಸಂಕಲನದ ಮೂಲಕ ಕನ್ನಡದ ಪದ್ಯ ಜಗತ್ತಿನ ಗಮನ ಸೆಳೆದಿದ್ದ ಕಾದಂಬಿನಿ, ಎರಡನೇ ಸಂಕಲನದಲ್ಲಿ ಇನ್ನಷ್ಟು ಭರವಸೆಯ ಬೀಜಗಳನ್ನು ಬಿತ್ತಿದ್ದಾರೆ.
'ಶವಕೆ ಗಂಧವನು ಪೂಸಬೇಡಿ
ಅಡಿಗಡಿಗೂ ನೊಂದಿದ್ದ ಕಂಬನಿಯಲಿ ಮಿಂದಿದ್ದೆ
ನೀರಿಂದೆನ್ನಶವನ ಮೀಯಿಸಬೇಡಿ' ಎನ್ನುವ ಸಾಲುಗಳು ಹಿಡಿದುನಿಲ್ಲಿಸುತ್ತವೆ. ’ವಿಪರೀತದ ದೇಶಭಕ್ತಿ ಮತ್ತು ಲೆಕ್ಕಾಚಾರ'ದ ಈ ಕಾಲಘಟ್ಟದಲ್ಲಿ ತಮಗೆ ಮತ್ತು ತಮ್ಮ ಕವಿತೆಗಳಿಗೆ ಎದುರಾದ ಬಿಕ್ಕಟ್ಟುಗಳಿಗೆ ಕಾದಂಬಿನಿ ಮುಖಾಮುಖಿಯಾಗಿದ್ದಾರೆ.
15 ಡಿಸೆಂಬರ್ 2019
ಕೃಪೆ : ವಿಜಯ ಕರ್ನಾಟಕ