ಕವಿ ಬಾಗೂರು ಮಾರ್ಕಾಂಡೇಯ ಅವರ ಕವನ ಸಂಕಲನ-ಕಾರೇಮುಳ್ಳು. 75 ಕವಿತೆಗಳಿದ್ದು, ಪ್ರೀತಿ ಪ್ರೇಮ, ಪ್ರಕೃತಿ ಮತ್ತು ಸಾಮಾಜಿಕ ಹಿತಚಿಂತನೆಯನ್ನು ಒಳಗೊಂಡಿವೆ. ಸಂಗೀತ ನಿರ್ದೇಶಕರು ಹಾಗೂ ಗಾಯಕರಿಂದ ಶ್ರಮದಿಂದ ಇಲ್ಲಿಯ ಬಹುತೇಕ ಕವಿತೆಗಳು ಹಾಡುಗಳಾಗಿ ಸಾಹಿತ್ಯಾಸಕ್ತರ ಗಮನ ಸೆಳೆದಿವೆ. ಬಹುತೇಕ ಕವಿತೆಗಳ ಭಾವಕ್ಕೆ ತಕ್ಕಂತೆ ಚಿತ್ರಗಳನ್ನು ಚಿತ್ರಿಸಿದ್ದು, ಕವಿತೆಗಳ ಅರ್ಥವಂತಿಕೆ ಹೆಚ್ಚಿಸಿದೆ.
‘..ಅರೆತೆರೆದ ಕಣ್ಣಿಂದ ಅಚೀಚೆ ನೋಡುತ್ತಾ ಮತ್ತೆ ನಿದ್ದೆಗೆ ಜಾರುತ್ತಾಳೆ ಮುದ್ದಿನ ಮಗಳು ನಿದ್ದೆಯಲ್ಲೂ ಅರ್ಧ ಕೆನ್ನೆ ಮೇಲೇರಿಸಿ ನಕ್ಕು ಇನ್ನರೆಕ್ಷಣದಲ್ಲೇ ಹಣೆಗಂಟಿಟ್ಟು ಅಳುತ್ತಾಳೆ ಬಿಕ್ಕು..’.. ಮತ್ತೊಂದು ಕವಿತೆಯಲ್ಲಿ‘ ಭಾಷೆಯ ಸೊಬಗಿನ ಪಾಂಡಿತ್ಯದ ಕಾವ್ಯ ಸಾಲುಗಳಂತಲ್ಲ ಮಳೆ ಯೌವ್ವನಿಗನಿಗೆ ಇನಿದನಿಯ ಇನಿಯಳ ಕೈಬಳೆಯ ಸದ್ದಿನಂತಲ್ಲ ಮಳೆ ಭುವಿಯೊಡಲ ಮೊಳಕೆಗಣ್ಣಿಗೆ ನುಣ್ಣಗೆ ಸಣ್ಣಗೆ ಕಣ್ಣ ಹಿತಕೆ ಸುರಿಯುತ್ತಿದ್ದ ಮಳೆ... ’ ಹೀಗೆ ಕವಿತೆಗಳು ಅನೇಕ ನವಭಾವಗಳನ್ನು ಪ್ರತಿಧ್ವನಿಸುವ ಕವಿತೆಗಳು ಈ ಸಂಕಲನದಲ್ಲಿವೆ.
ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ, ಚೈತ್ರ ಚೆಲುವು, ಸುವರ್ಣಪುತ್ಥಳಿ, ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...
READ MORE