ಕಾಡ ಕುಸುಮ- ಎಂ.ನವೀನ್ ಕುಮಾರ್ ತೀರ್ಥಹಳ್ಳಿಯವರ ಕವನ ಸಂಕಲನ.
ಶಿವಮೊಗ್ಗದ ಸಂವೇದನೆಯೆ ಹೀಗೆ ಸೂಜಿಗಲ್ಲಿನ ಹಾಗೆ, ಇಲ್ಲಿ ಮಂಜು, ಮೋಡ, ಕಾಡು, ಕಣಿವೆ, ಗಿಡ, ಮರ, ವಾದ, ಸಂವಾದಗಳ ಸುರಿಮಳೆಯೇ ಸಿಗುತ್ತದೆ. ಇಲ್ಲಾ ಚಳುವಳಿಗೆ ಕರೆಯುತ್ತದೆ. ಸಂಸ್ಕೃತಿಯಲ್ಲಿ ಸಮಾವೇಶಗೊಳಿಸುತ್ತದೆ. ಇಂತಹ ಭಾಗ್ಯದಲ್ಲಿ ನವೀನ್ ಕುಮಾರ್ ಅವರು ಕವಿಯ ಪಾಲು ಪಡೆದಿರುವದು ವಿಶೇಷ. “ಕಾಡ ಕುಸುಮ” ನವೀನ್ ಕುಮಾರ್ ಅವರ ಎರಡನೇ ಕವನ ಸಂಕಲನ. ಇಲ್ಲಿನ 83 ಕವಿತೆಗಳು ತೊಂಬತ್ತರ ದಶಕದಲ್ಲಿ ಬರೆದವು. ಈ ಕಾಡಿನ ಹೂಗಳು ಹತ್ತು ವರ್ಷಗಳ ಹಿಂದೆಯೇ ಹುಟ್ಟಿವೆ. ಇಷ್ಟು ವರ್ಷವಾದರೂ ಇವು ನಾಡಿಗೆ ಬಂದಿರಲಿಲ್ಲ. ಕಾರಣ ಇವು ಕಾಡ-ಕುಸುಮಗಳು. ನವೀನ್ಕುಮಾರ್ ಮೂಲತಃ ಮಲೆನಾಡಿನ ಕವಿ. ಸಹಜವಾಗಿಯೇ ಮಲೆನಾಡಿನ ವಸ್ತು ಇಲ್ಲಿ ಮತ್ತೆ ಮತ್ತೆ, ಮಾತಾಡಿವೆ. ಕವಿ ಕುವೆಂಪು ಕಂಡ ಮಲೆನಾಡೆ ಬೇರೆ. ಇತ್ತೀಚಿನ ಎಲ್ಲಾ ಕವಿಗಳು ಕಂಡ ಮಲೆನಾಡೆ ಬೇರೆ. ದಟ್ಟ ಕಾನನ ಕಡಿಮೆಯಾಗಿದೆ. ಮೋಡ ಮರೆಯಾಗಿದೆ. ಆದರೂ ಕವಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಂತವರ ಸಾಲಿನಲ್ಲಿ ನಮ್ಮ ನವೀನ್ ಕುಮಾರ್ ಒಬ್ಬರು.