ಜವುಗು- ಮುದಲ್ ವಿಜಯ್ ಅವರ ನಾಲ್ಕನೆ ಕವನ ಸಂಕಲನ. ಮಾತೃಭಾಷೆ ತಮಿಳಾದರೂ ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿರುವ ಮುದಲ್ ವಿಜಯ್ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಅರಳುತ್ತಿರುವ ಪ್ರತಿಭೆ. ಕಾವ್ಯ ಪರಂಪರೆಯ ಸ್ವರೂಪ, ವಿಷಯ, ಪ್ರಕಾರ ಮತ್ತು ಆಶಯಗಳನ್ನು ಆಳವಾಗಿ ಅಧ್ಯಯನ ಮಾಡಿದ ಕವಿಯಿಂದಲೇ ಒಂದು ಉತ್ತಮ ಕಾವ್ಯವನ್ನು ರಚಿಸಲು ಸಾಧ್ಯ. ಅದೇ ರೀತಿ ತಾವು ರಚಿಸಿದ ಕಾವ್ಯವನ್ನು ಶ್ರೇಷ್ಠವೆಂದು ಪರಿಗಣಿಸುವ ಉದಯೋನ್ಮುಖ ಕವಿಗಳು ತಮ್ಮ ಬದುಕಿನ ಸುತ್ತಲೂ ನಡೆಯುವ ವಿಚಾರಗಳ ಬಗ್ಗೆ ಪ್ರಜ್ಞೆ ಇಲ್ಲದವರಾಗುತ್ತಾರೆ ಮತ್ತು ಸಹಜವಾಗಿಯೇ ಅವರ ಕವಿತಾ ಪಾಂಡಿತ್ಯ ಮರೆಯಾಗಿ ಬಿಡುತ್ತದೆ. ನಾನು ಕಂಡಂತೆ, ಮುದಲ್ ವಿಜಯ್ ತಾವು ಬರೆದಿರುವ ಕವಿತೆಗಳ ಬಗ್ಗೆ ಎಂದಿಗೂ ಅಂಧಾಭಿಮಾನ ಇಟ್ಟುಕೊಂಡವರಲ್ಲ.
ಜೀವನವನ್ನು ನೋಡಿದ ವಿಭಿನ್ನ ದೃಷ್ಟಿಯು ಕವಿಯ ಬರವಣಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗುತ್ತದೆ. ಈ ನಿಟ್ಟಿನಲ್ಲಿ ಮುದಲ್ ವಿಜಯ್ ಕೂಡ ತಾವು ಕಂಡುಂಡ ಅನುಭವಗಳನ್ನೇ ಕವಿತೆಗಳನ್ನಾಗಿಸಿದ ಸಂದರ್ಭಗಳೂ ಇವೆ. ಅಂತಹ ಕೆಲವು ಕವಿತೆಗಳು ಭಾವಗೀತೆಗಳಾಗಿ ಹೊರಹೊಮ್ಮಿ ಜನಮನವನ್ನು ತಲುಪಿರುವುದು ಸಂತೋಷ ಪಡತಕ್ಕದ್ದು. ಸಾಧಕರು ಸಾಧನೆ ಮಾಡುವುದನ್ನು ಎಂದಿಗೂ ನಿಲ್ಲಿಸಬಾರದು. ತಾವು ಮಾಡಿದ ಸಾಧನೆಯನ್ನು ನೆನೆದು ಅಟ್ಟಕ್ಕೇರಲೂ ಬಾರದು. ಇದನ್ನು ಮನಗಂಡಿರುವ ಮುದಲ್ ವಿಜಯ್ ಅವರು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉತ್ತಮ ಕೊಡುಗೆಯನ್ನು ನೀಡಬಲ್ಲ ಕವಿ. ಸುಮಾರು ಅರವತ್ತೆಂಟು ಕವಿತೆಗಳಿರುವ 'ಜವುಗು' ಎನ್ನುವ ಈ ಕವನ ಸಂಕಲನದ ಶೀರ್ಷಿಕೆ ಔಚಿತ್ಯಪೂರ್ಣವಾಗಿದೆ.
ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. ...
READ MORE