ಕವಿ ಮಹೇಶ ನಾವಳ್ಳಿ ಅವರ ಎರಡನೇ ಕವನ ಸಂಕಲನ-ಇತಿಹಾಸ. ಪ್ರೇಮದ ಉತ್ಕಟ ಹಾಗೂ ತೀವ್ರ ಭಾವಗಳಿರುವ ಸಂಕಲನವಿದು. ಪ್ರೇಮಬಂಧದಲ್ಲಿ ಭಾವ ಹಳೆಯದಾಗುತ್ತಾ ಹೋದ ಹಾಗೆ ಅದರ ಹೊಳವು ಮತ್ತಷ್ಟು ಹೊಳೆಯುತ್ತದೆ. ಆಗ ಅದರ ಇತಿಹಾಸ ಬೇಸರವಾಗದು. ಕವಿತೆಯಲ್ಲಿ ಕವಿ ಹೇಳಿರುವಂತೆ ‘ ಸೂರ್ಯ ತನ್ನ ಪೂರ್ವ ದಿಕ್ಕನ್ನು ಬದಲಿಸಬಹುದು; ಆದರೆ, ನಿನ್ನ ಬಗ್ಗೆ ನನಗಿರುವ ಆರಾಧನಾ ಭಾವ ಬದಲಾಗದು’ ಎಂಬ ಹಾಗೆ ನವೀಕರಣಗೊಳ್ಳುತ್ತದೆ. ಕವಿ ಮಗದೊಮ್ಮೆ ಅದೇ ಪ್ರೇಮದ ವಿರಹದಲ್ಲಿ ಹೀಗೆ ಬೆಂದು ಹೋಗುತ್ತಾನೆ ‘ ಜೊತೆಯಾಗಿ ಉಣ್ಣುವಾಸೆ ನನಗೆ ನೀನು ಬರಲಿಲ್ಲ..ರಾತ್ರಿಯ ತಂಪಿಗೂ ಆರದ ನನ್ನೊಳಗಿನ ಬೆಂಕಿಯನ್ನು ನಂದಿಸಲಾದರೂ ಬರಬೇಕಿತ್ತು. ....ಸುಂದರ ವಾಗ್ದಾನವನ್ನು ನೆರವೇರಿಸಲು ನಿನ್ನಿಂದ ಸಾಧ್ಯವಾಗದಿದ್ದರೆ ಇಂಥ ಕೆಲಸಕ್ಕೆ ಮನಸೇಕೆ ಹಾಕಿದೆ’ ಎಂದೂ ಪ್ರಶ್ನಿಸಿ ಭಾವದ ನವೀಕೃಣವಾಗುತ್ತಲೇ ಇರುತ್ತದೆ.
ಪ್ರೇಮಲೋಕವನ್ನೇ ಜೀವಂತವಾಗಿಡುವ ಸಾಲುಗಳ ಪೈಕಿ ‘ನಿನ್ನೊಲವಿನ ತಾರೆ ನನ್ನೆದೆಗೆ ಇಳಿಯುವುದಾದರೆ ಕಾವ್ಯದಲ್ಲಿ ಕಾಣುವ ಬದುಕಿನ ಸುಂದರ ಸಾಲುಗಳನ್ನು ನಾನು ನಂಬುತ್ತೇನೆ. ಕನಸುಗಳ ಹೆಣೆಯುತ್ತೇನೆ. ನೀ ಖಂಡಿತ ನೆನಪಿಡು...ನನ್ನ ಹಂಬಲ ಕೇವಳ ಭಾವನೆಯಲ್ಲ; ಬದುಕಿನ ಹಾಡು’ ಇಂತಹ ಸುಂದರ ಹಾಗೂ ಭಾವನಾತ್ಮಕ ಸಾಲುಗಳನ್ನು ಒಡಲಲ್ಲಿಟ್ಟುಕೊಂಡ ಸುಮಾರು 109 ಕವಿತೆಗಳಿರುವ ಸಂಕಲನವಿದು.
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಮಹೇಶ ನಾವಳ್ಳಿ ಅವರು ಮೂಲತಃ ಕವಿಗಳು. ಸಂಗಾತಿ ಅವರ ಮೊದಲ ಕವನ ಸಂಕಲನ. ನಂತರದ್ದು-ಇತಿಹಾಸ. ಈ ಎರಡೂ ಕವನ ಸಂಕಲನಗಳ ಜೀವಾಳವೇ -ಪ್ರೇಮದ. ಸರಳ ನಿವೇದನೆಯೊಂದಿಗೆ ಪ್ರೇಮ ಉತ್ಕಟ ಭಾವನೆಗಳ ಅಭಿವ್ಯಕ್ತಿ, ವಿರಹದ ತೀವ್ರತೆ, ಆಕಾಶವೇ ಮಿತಿಯಾಗಿಸಿಕೊಂಡ ಆಶಯಗಳು, ಪದಗಳ ಸುಂದರ ಹಂದರವಾಗಿವೆ -ಈ ಕವನ ಸಂಕಲನಗಳು. ...
READ MORE