‘ಇರುವೆ ಮತ್ತು ಗೋಡೆ’ ಶಂಕರ್ ಸಿಹಿಮೊಗ್ಗೆ ಅವರ 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕವನ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಕೇಶವ ಮಳಗಿ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ ‘ಈಗಷ್ಟೇ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಹಸ್ತಪ್ರತಿಯನ್ನು ಸಂಕಲನದ ರೂಪದಲ್ಲಿ ಪ್ರಕಟಿಸುತ್ತಿರುವ ಶಂಕರ್ ಸಿಹಿಮೊಗ್ಗೆ ಅಪರಿಮಿತ ಕಾವ್ಯೋತ್ಸಾಹಿ ಮತ್ತು ಸಾಹಿತ್ಯೋಪಾಸಕ ತರುಣ. ಅವರ ಚುರುಕುತನ, ಬದುಕಿನ ಬಗ್ಗೆ ತೀವ್ರ ಸೆಳೆತ, ವಯೋಸಹಜ ಉಲ್ಲಾಸದಿಂದ ಹುಟ್ಟಿದ ಲವಲವಿಕೆ ಇಲ್ಲಿನ ಪ್ರತಿ ಕವಿತೆಯಲ್ಲೂ ಪ್ರತಿಫಲಿಸಿವೆ. ಬದುಕಿನ ಸಣ್ಣಪುಟ್ಟ ಸಂಗತಿ, ಸಂಬಂಧಗಳ ಮಾರ್ದವತೆಗಳು ಕವಿತೆಗಳನ್ನು ವ್ಯಾಪಿಸಿದಂತೆಯೇ ಸಮಾಜ, ಸಮಾಜದ ಓರೆಕೋರೆಗಳೂ ಸ್ಥಾನ ಪಡೆದಿವೆ. ಇನ್ನಷ್ಟು ಮಾಗಲು ಹಾತೊರೆಯುತ್ತಲೇ ಪೂರ್ವಸಿದ್ಧತೆಯ ಪರಿಶ್ರಮವೂ ಕಡಿಮೆಯೇನಿಲ್ಲ ಎಂದು ಈ ಕವಿತೆಗಳು ಹೇಳುವಂತಿವೆ. ಶಬ್ದಜಾಲವು ಕಾವ್ಯವಾಗುವ ನಿಟ್ಟಿನಲ್ಲಿದ್ದರೂ, ಈ ಸದ್ಯದ ಪದ್ಯ ಬಯಕೆ, ಕಣ್ಣೋಟ, ವಿಷಯ ವೈವಿಧ್ಯತೆಗಳು ಗಮನಾರ್ಹವಾಗಿದ್ದು, ಆಗುವಿಕೆ, ಮಾಗುವಿಕೆಗಾಗಿ ಕವಿಯ ಸತತ ಪ್ರಯತ್ನವನ್ನು ಎತ್ತಿ ತೋರಿಸುತ್ತವೆ. ಸಣ್ಣ ಸಂಗತಿ, ಸಂಬಂಧಗಳಂತೆಯೇ ಪ್ರಕೃತಿ, ಅದರಲ್ಲೂ ಮಲೆನಾಡು ಕವಿಯ ಭಾವದೀಪ್ತಿಯಾಗಿದೆ’ ಎಂದಿದ್ದಾರೆ ಕೇಶವ ಮಳಗಿ. ಜೊತೆಗೆ ಶಂಕರ್ ಸಿಹಿಮೊಗ್ಗೆಯವರಿಗೆ ಕಾವ್ಯಾಭಿವ್ಯಕ್ತಿ ಬರಿಯ ತೋರಿಕೆಯದಾಗಿಲ್ಲ, ಬದಲಿಗೆ, ತಮ್ಮ ಮನೋಧರ್ಮ, ಆಶಯಗಳನ್ನು ಅತ್ಯಂತ ಪ್ರಾಮಾಣಿಕ ನೆಲೆಯಲ್ಲಿ ತೆರೆದಿಡುವ ಮಾಧ್ಯಮವೂ ಆಗಿದೆ. ಈ ಗುಣವೇ ಅವರನ್ನು ಬಹು ದೂರ ನಡೆಸಬಲ್ಲುದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ತಂದೆ ಗೋವಿಂದರಾಜು, ತಾಯಿ ನಾಗಮ್ಮನವರು. ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವಾಗಲೇ ಡಿ.ವಿ.ಎಸ್. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ಈವರೆಗೆ ಸುಮಾರು ಹತ್ತಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ...
READ MORE