ಕವಿ ಅಂಕುರ್ ಬೆಟಗೇರಿ ಅವರ ಎರಡನೇ ಕವನ ಸಂಕಲನ ’ಇದರ ಹೆಸರು’. ಪದ್ಯದಿಂದ ಪದ್ಯಕ್ಕೆ ಅತ್ಯಂತ ವಿಭಿನ್ನ ರೀತಿಯಲ್ಲಿ ಸಾಲುಬೆಸೆಯುವ ಅಂಕುರ್ ಬೆಟಗೇರಿ, ಹೃದಯದೊಂದಿಗೆ ಸಂವಾದಿಸಬಲ್ಲ ಕವಿಯಾಗಿ ಅಂಕುರ್ ಬೆಟಗೇರಿ.
‘ಕಂಡದ್ದನ್ನು ಹೇಳುವುದು ಅಲ್ಲ
ಹೇಳುತ್ತಲೇ ಕಾಣುವುದು’..
‘ನೀವು ತೆರೆದಷ್ಟು ಹೆಸರು ಕಾಣಿಸುತ್ತದೆ
ಅದೇನನ್ನು ಹೆಸರಿಸಲು ಪ್ರಯತ್ನಿಸುತ್ತಿದೆಯೋ ಅದನ್ನು’..
ಇಂತಹ ಸಾಲುಗಳನ್ನು ಬರೆವ ಕವಿ, ನಗರದ ಕವಿಗಳು ಎನ್ನುವ ಪದ್ಯದಲ್ಲಿರುವ ಐರನಿಯನ್ನು ಮೂಡಿಸಬಲ್ಲ, ಖುಷಿಯ ಸೃಜನಶಕ್ತಿ ತಿಳಿದ ಕವಿ ಭರವಸೆ ಹುಟ್ಟಿಸುತ್ತಾರೆ. ಅವರ ವೈಚಾರಿಕತೆಯ ಸ್ವಷ್ಟತೆಯ ಮೂಲಕ, ಅವರು ಬಯಸುವ ಗಹನತೆ ಮೂಲಕ. ಇವರ ಕಾವ್ಯದಲ್ಲಿ ನಾವು ಕಂಡುಕೇಳರಿಯದ ಚಿತ್ರಗಳಿವೆ. ಆನೆ ಸೊಂಡಿಲಾದ ಜರಿ, ಮಧ್ಯರಾತ್ರಿ-3, ನಮ್ಮನ್ನು ಅಚ್ಚರಿಗೊಳಿಸಿ ತಾನು ಹೇಳುವುದು ನಮಗೆ ಕಾಣುವಂತೆ ಮಾಡುವ ಕಾವ್ಯದ ಉಪಾಯಗಳಿವೆ. ಅನುವಾದದಲ್ಲಿ ಭಾಷೆ ಕಳೆದುಹೋದಾಗ ಕಾವ್ಯ ಉಳಿಯುವುದು ಎನ್ನುತ್ತಾರೆ. ಆದರೆ ಅನುವಾದಕ್ಕೆ ಸಿಗಲಾರದ್ದು ಕಾವ್ಯ ಎನ್ನಬಹುದು. ಆದರೆ ಈ ಕವಿ ತಮ್ಮ ಅನುವಾದಗಳಲ್ಲೂ ಕಾವ್ಯವನ್ನು ಸೃಷ್ಟಿಸಬಲ್ಲರು. ಇದರ ಹೆಸರು ಸಂಕಲನದಲ್ಲಿ ಹಲವು ಉತ್ಕೃಷ್ಟವೆನ್ನಬಹುದಾದ ಅನುವಾದಗಳಿವೆ. ಆದರೆ ರಿಲ್ಕ್ ನನ್ನು ಇನ್ನೂ ಆಳವಾಗಿ ಅವನ ವಿಸ್ಮಯಕಾರಿಯಾದ ಲಯದಲ್ಲೂ ಇವರು ಹಿಡಿಯುವುದು ಬಾಕಿ ಇದೆ ಎನ್ನುತ್ತಾರೆ ಮುನ್ನುಡಿ ಬರೆದಿರುವ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ. ಬರ್ಟೋಲ್ಟ್ ಬ್ರೆಕ್ಟ್ ನಂತಹ ಕವಿ-ವೈಚಾರಿಕರಿಗೆ ದಕ್ಕುವ ಕವಿ-ಇವರಿಗೂ ದಕ್ಕಿದ್ದಾನೆ. ನೆರೂಡನ ಇವರ ಅನುವಾದಗಳೂ ಆ ಕವಿಯಲ್ಲೇ ಅನುವಾದಗೊಳ್ಳಬಲ್ಲ ಭಾಷೆಯ ಪಾರದರ್ಶಕತೆಯಲ್ಲಿ ಇವೆ. ಮುಖ್ಯವಾಗಿ ಅಂಕುರ್ ಬೆಟಗೇರಿಯವರ ‘ಇದರ ಹೆಸರು’ ಸಂಕಲನ ಕನ್ನಡ ಕಾವ್ಯಲೋಕಕ್ಕೆ ಇನ್ನೂ ಎತ್ತರಕ್ಕೂ, ಆಳಕ್ಕೂ, ಹೃದಯ ಸಂವಾದಕ್ಕೂ ಬೆಳೆಯಬಲ್ಲ ಕವಿಯೊಬ್ಬನನ್ನು ಪರಿಚಯಿಸುತ್ತದೆ.
ಅಂಕುರ ಬೆಟಗೇರಿ ಅವರು ಸದ್ಯ ದೆಹಲಿ ವಿಶ್ವವಿದ್ಯಾಲಯದ ಭಾರತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಅದಕ್ಕಿಂತ ಮುಂಚೆ ಅಂಕುರ ಬೆಟಗೇರಿ ಅವರು ಸಾಹಿತ್ಯ ಅಕಾಡೆಮಿಯ ’ಇಂಡಿಯನ್ ಲಿಟರೇಚರ್’ ನಿಯತ ಕಾಲಿಕದ ಸಂಪಾದಕರಾಗಿದ್ದರು. ದೆಹಲಿ ಐಐಟಿಯಲ್ಲಿ ಅಧ್ಯಯನ ಮಾಡಿರುವ ಅಂಕುರ ಅವರು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದರು. ಕ್ರೈಸ್ಟ ವಿಶ್ವವಿದ್ಯಾಲಯದಲ್ಲಿ ಓದಿರುವ ಅವರು ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ (ಎಂ.ಎಸ್ಸಿ) ಪದವಿ ಪಡೆದಿದ್ದಾರೆ. ...
READ MORE