‘ಹೋಗಿ ಬನ್ನಿ ಋತುಗಳೇ’ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅವರ ನಾಲ್ಕು ದಶಕದ ಕವಿತೆಗಳ ಸಂಕಲನ. ಈ ಕೃತಿಯನ್ನು ಲೇಖಕ ಕೆ.ವೈ. ನಾರಾಯಣಸ್ವಾಮಿ ಸಂಪಾದಿಸಿದ್ದು, ಕೆ. ರಾಜೇಂದ್ರ ಪ್ರಸಾದ್ ಸಹ ಸಂಪಾದಕರಾಗಿದ್ದಾರೆ. ಈ ಕೃತಿಗೆ ಲೇಖಕ, ಅನುವಾದಕ ಕೇಶವ ಮಳಗಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಶಿವಪ್ರಕಾಶರ ಕಾವ್ಯ ಮಿಲರೇಪ ಸಂಕಲನದಿಂದಲೂ ಪರಂಪರೆ ಮತ್ತು ಆಧುನಿಕತೆಗಳ ಸಂಘರ್ಷವನ್ನು ಸತತವಾಗಿ ಪ್ರಯತ್ನಿಸುತ್ತದೆ ಎಂದೇ ನನಗನ್ನಿಸುತ್ತದೆ. ಎರಡರ ಮುಖಾಮುಖಿಯಲ್ಲಿ ಹುಟ್ಟುವ ಹೊಸತನ್ನು ಹುಡುಕುವುದರಲ್ಲಿ ಅವರ ಕಾವ್ಯ ನಿರತವಾಗಿದೆ’ಎನ್ನುತ್ತಾರೆ ಕೇಶವ ಮಳಗಿ. ಜೊತೆಗೆ ಹಳೆಯದರ ಸ್ನೇಹದಲ್ಲಿರುವಾಗ ಎಚ್ಚರ, ಹೊಸತರ ಕುರಿತು ಕೊಂಚ ಸಂದೇಹದ ನಿಲುವು ಎಲ್ಲ ಅತ್ಯುತ್ತಮ ಲೇಖಕರು ಆರಿಸಿಕೊಳ್ಳುವ ವಿಧಾನವೇ ಆಗಿದೆ. ಇದನ್ನು ಇನ್ನಷ್ಟು ವಿವರಿಸುವುದಾದರೆ, ಶಿವಪ್ರಕಾಶರು ನವೋದಯ ಮತ್ತು ನವ್ಯ ಮತ್ತು ಆನಂತರದಲ್ಲಿ ಪಳಗಿದ ಭಾಷೆಯನ್ನು ಹೇಗೆ ಸೋಸಿ ತನ್ನದಾಗಿಸಿಕೊಳ್ಳಬೇಕು ಎಂಬುದರಲ್ಲಿ ಪರಿಣಿತರಾಗಿದ್ದಾರೆ. ಈ ಹೀರಿಕೊಳ್ಳುವಿಕೆ ಅವರಲ್ಲಿ ಹೊಸತನ್ನು ಹುಟ್ಟುಹಾಕುವ ಕಸುವನ್ನು ತುಂಬಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
‘ಹೋಗಿ ಬನ್ನಿ ಋತುಗಳೇ’ ಕೃತಿಯ ವಿಮರ್ಶೆ
ನನ್ನ ಎದೆಯಲಿ ಮಿಡಿವ ಎಲ್ಲ ಕವಿತೆಗಳೂನೂ
ಯಾಕೆ ಬರುವವು ಹೀಗೆ ಅಪೂರ್ಣವಾಗಿ?
ನನ್ನ ರಾಗಾದಿಗಳು ನಿಜಕೆ ಬಂದಾಗೆಲ್ಲ
ಯಾಕೆ ಕಾಣುವವು ಹೇಳು ವಿಕೃತವಾಗಿ?
ಮೇರೆಯಿಲ್ಲದೆ ಮೆರೆದ ಮೃತ್ಯುವಶ ಮುರೀದ
ಈಸಿನೋಡಲು ಆ ದಿವ್ಯ ಫಲವ
ಕಾಣಿಸಿದವು ಅಗೋ ಅಲ್ಲಿ ಇಗೋ ಇಲ್ಲಿ-
ಹೊನ್ನರಂಗಿನ ಸಣ್ಣಸಣ್ಣ ಕೀಟ.(ಅಮೃತಫಲ)
ಎಸ್.ಎಸ್.ಶಿವಪ್ರಕಾಶ್ ಅವರ 'ಅಮೃತಫಲ' ಎನ್ನುವ ಕವಿತೆಯಲ್ಲಿ ಬರುವ ಒಂದು ಪದ್ಯಭಾಗವಿದು. ಶಿವಪ್ರಕಾಶ್ ಅವರ 'ಹೋಗಿ ಬನ್ನಿ ಋತುಗಳೇ' ಎನ್ನುವ ಸಮಗ್ರ ಕಾವ್ಯ ಬಿಡುಗಡೆಯಾಗುತ್ತಿರುವ ಸ೦ದರ್ಭವಿದು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಈ ಮಹತ್ವದ ಕೃತಿಯನ್ನು ಅಂದವಾಗಿ ಪ್ರಕಟಿಸಿದೆ. ಒಬ್ಬ ಯಶಸ್ವಿ, ಕವಿ ನಾಲ್ಕು ದಶಕಗಳ ಕಾಲ ಪ್ರೀತಿಯಿಂದ, ಆತ್ಮವಿಶ್ವಾಸದಿಂದ, ತನ್ನ ಜೀವನಾನುಭವದ ನೋವು ನಲಿವು ಬೆರಗುಗಳೆಂಬ ಭಾವಬಂಧನಗಳನ್ನು ಒಟ್ಟಾರೆ ಓದುಗರ ಮುಂದೆ ತೆರೆದಿಡುವ ಅಭಿವ್ಯಕ್ತಿ ಕ್ರಮ ಸರಳವಾದದ್ದೇನಲ್ಲ. ಹಾಗೆ ನೋಡುವುದಾದರೆ ಪ್ರತಿಯೊಬ್ಬ ಕವಿಯೂ ಕಾಲದ ಕೂಸು ರೂಢಿಯಿಂದ ಬಂದ ಒಂಿದು ಖಚಿತವಾದ ಜೀವನ ವಿಧಾನವನ್ನು ಒಪ್ಪಿಕೊಂಡಿರುವಾಗಲೇ ಅದರಲ್ಲಿ ಅನುಮಾನ ಹುಟ್ಟಿಸುವಂತೆ ಇನ್ನೊಂದು ಜೀವನ ವಿಧಾನ ನಿಧಾನವಾಗಿ ಕಣ್ಣೆರೆಯುವುದು ಅಸಾಮಾನ್ಯರಿಗೆ ಮಾತ್ರ ಸಾಧ್ಯ. ನಮ್ಮೊಂದಿಗಿದ್ದ ನಮ್ಮಂತಾಗದೆ ತಮದೇ ಆದ ಜೀವನ , ನಂಬಿಕೆಗಳನ್ನು ಅದು ಬಂದಂತೆ ಸ್ವೀಕರಿಸಿ ಬದುಕುಬರಹಗಳನ್ನು ರೂಪಿಸಿಕೊಂಡರು ಎಚ್. ಎಸ್. ಶಿವಪ್ರಕಾಶ್. ಅಶಾಂತ ಸಂತನ ಹಾಗೆ, ತನ್ನಿಚ್ಛೆಯಂತೆ ತಿರುಗಿ ಅನುಭವದ ಮೂಟೆಯೇ ಆದ ಸರ್ವಜ್ಞನಂತೆ ದೇಶವಿದೇಶಗಳಲ್ಲಿ ಅಲೆದು ಈಗ ತವರುಭೂಮಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಈ ಪ್ರತಿಭಾಶಾಲಿಯಾದ ಕವಿ ಈಗ ತಮ್ಮ ಬದುಕು, ಚಿಂತನೆಗಳ ಸಾರವೇ ಆಗಿರುವ ಸಮಗ್ರ ಕಾವ್ಯವನ್ನು ಪ್ರಕಟಿಸುತ್ತಿರುವುದು ಕನ್ನಡದ, ಕಾವ್ಯಪ್ರೇಮಿಗಳ ಭಾಗ್ಯವೆಂದೇ ಹೇಳಬಹುದು.
ಮೇಲಿನ 'ಅಮೃತಫಲ' ಕವಿತೆಯಲ್ಲಿ ಕವಿಗಳೆಲ್ಲರೂ ತಮ್ಮ ತಮ್ಮ ಕವಿತೆಗಳನ್ನು ಪರಿಪೂರ್ಣವೆಂದು ಭಾವಿಸಿಕೊಳ್ಳಲಾಗದು. ಅದರಲ್ಲೂ ಕಣ್ಣಿಗೆ ಕಾಣದ ಯಾವುದೋ ಊನ, ಓರೆಕೋರ ಅಡಗಿಕೊಂಡಿರುತ್ತವೆ. ನಿಜದ ಕವಿ ಮಾತ್ರ ಆ ಲೋಪವನ್ನು ಕಂಡುಕೊಳ್ಳಬಲ್ಲ. ಸ್ವರ್ಗದ ಅಮೃತಫಲವೆ೦ಬೋ ಫಲದಲ್ಲೂ ಹೊನ್ನ ರ೦ಗಿನ ಸಣ್ಣಸಣ್ಣ ಕೀಟಗಳಿರುವುದಾದರೆ ಪರಿಪೂರ್ಣ ಎಂದುಕೊಳ್ಳುವ ನಮ್ಮ ಕೃತಿಯಲ್ಲಿ ಯಾಕೆ ಲೋಪದೋಷಗಳಿರಬಾರದು. ಈ ಅರಿವೇ ಕಾವ್ಯವೆಂಬ ಅಮೃತಫಲವನ್ನು ಬಿಡದೆ ರೋಧಿಸುತ್ತದೆ ಮತ್ತು ಅದನ್ನು ಪಡೆದೇ ತೀರುತ್ತದೆ. ಅಮೃತಫಲದಲ್ಲಿನ ಕೀಟಗಳು ಧರೆಯ ದ೦ದುಗದ ಮಿತಿಯನ್ನು, ನಿಸರ್ಗದತ್ತ ಸೀಮೆಗಳನ್ನು ದಾಟಲಾರನೆ೦ಬ ಅ೦ತಿಮ ವಾಕ್ಕುಗಳನ್ನು ಕವಿಯ ಮು೦ದೆ ಹರಡಿದರೂ ಅದೊಂದು ತಡೆಯಲ್ಲ, ಒಡೆದು ಸಾಗಬೇಕಾದ ಒಡ್ಡಾಗುತ್ತದೆ. ಯಾಕೆ ಮನುಷ್ಯನ ಮುಂದೆ ಇಂತಹ ಸವಾಲುಗಳಿವೆ. ಈ ಪ್ರಶ್ನೆಗೆ ಶಿವಪ್ರಕಾಶ್ ಹಲವು ರೀತಿ ಎದುರಾಗುತ್ತಾರೆ.ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಸ್ವಕೀಯ ಮತ್ತು ಪರಕೀಯತೆಯ ಹಲವು ಪ್ರಶ್ನೆಗಳನ್ನು ಈ ಕವಿಯ ಕಾವ್ಯ ಮೊದಲಿನಿಂದಲೂ ಎತ್ತುತ್ತಲೇ ಬಂದಿದೆ.
ನಿಜದ ಕವಿ ನಿರಂತರ ಅನ್ವೇಷಕ. ಹಲವು ಭೂಖಂಡಗಳನ್ನು ಸುತ್ತುತ್ತಲೇ ಅನುಭವ ಲೋಕವನ್ನು ವಿಸ್ತರಿಸಿಕೊಳ್ಳುವವನು. ತನ್ನದೇ ತೋಟದ ಹೂವುಗಳು ಅಂದವನ್ನು ತರ್ಕಕ್ಕೆ ಒಡ್ಡಬಲ್ಲವನು. ದೂರದಲ್ಲಿ ತೀರವಿದೆ ಎಂಬ ನಂಬಿಕೆಯಿಲ್ಲದಿದ್ದರೂ ತನ್ನ ದೋಣಿಯನ್ನು ನೀರಿಗೆ ತಳ್ಳುವ ನಾವಿಕನವನು. ಅವನು ಬೆಟ್ಟವನ್ನು ಹತ್ತಬಲ್ಲ, ಗಿಡಮರಗಳೊಂದಿಗೆ ಸಂವಾದಿಸಬಲ್ಲ, ಜೋಗಿ ಜಂಗಮರ ಜೊತೆ ಸಂಪರ್ಕದಲ್ಲಿ ಇರಬಲ್ಲ. ದೊಡ್ಡಣ್ಣಗಳು ನಿರ್ಮಿಸಿದ ಜಾಗತಿಕ ಮಾರ್ಕೆಟ್ನಲ್ಲಿ ತನ್ನ ತೋಟದ ಬೆಳೆಗೆ ತಾನೆ ಬೆಲೆಕಟ್ಟಬಲ್ಲ ರಸಗ್ರಾಹಿಯವನು. ತನ್ನ ಪಾಡನ್ನು ಎಲ್ಲರ ಹಾಡಾಗಿಸುವ, ತನ್ನ ಗೋಳನ್ನು ಕವಿತೆಯ ಗೀಳನ್ನಾಗಿಸಬಲ್ಲ, ಜನಸಾಮಾನ್ಯರ ಬದುಕನ್ನು ಲೀಲಾಜಾಲವಾಗಿ ಪ್ರವೇಶಿಸಬಲ್ಲ ಯಾತ್ರಿಕನವನು. ಹೀಗಾಗಿ ಶಿವಪ್ರಕಾಶ್ ಕಂಡರಸಿದ್ದಂತೆ ಕವಿಯೊಬ್ಬ ಹಟಮಾರಿ, ನತದೃಷ್ಟ ಯಾತ್ರಿಕ, ಗಂಧರ್ವಲೋಕ ಕೈಬೀಸಿ ಕರೆದರೂ ನರಕದೆಡೆಗೆ ಸಾಗುವುದೇ ಅವನ ಹಣೆಬರಹವಾಗಿದೆ. ಅವನ ಗುರಿ ಈಗಾಗಲೇ ಆಯ್ಕೆಯಾಗಿದ್ದರೂ ಬೇರೆಲ್ಲೋ ಹೋಗಿ ತಲುಪುವುದೇ ಅವನ ಕಾಯಕ. ಕಡಲ ಸೇರದ ನದಿಯ ಬೆನ್ನ ಹಿಂದೆ ಕವಿ ಕೆರೆಕುಂಟೆಗಳ ನಾಯಕನಾಗುವ ದುರ್ವಿಧಿಯನ್ನು ಸಹ ಬಲ್ಲವನು. ಹೀಗೆ ಕವಿಯ ಮತ್ತು ಅದು ಮೈತಳೆಯುವ ಕಾವ್ಯದ ಆಕೃತಿಯ ಬಗ್ಗೆ ಮುಕ್ತ ಮಾತುಕತೆಗಳಿಗೆ ಶಿವಪ್ರಕಾಶ್ ಮೇಲಿಂದಮೇಲೆ ಎದುರಾದಂತೆ ಇತರ ಕವಿಗಳು ಕಾವ್ಯ ಪರಂಪರೆಯಲ್ಲಿ ಎದುರಾದಂತಿಲ್ಲ. ಕವಿಯೂ ಕಾವ್ಯದ ಒಂದು ಭಾಗ ಎಂಬಂತೆ ಶಿವಪ್ರಕಾಶ್ ತಮ್ಮನ್ನು ಕ೦ಡುಕೊಳ್ಳುವುದು ಆತ್ಮನಿರ್ಭರತೆ ಎಂಬ ಮಾತಿಗೆ ಹತ್ತಿರವಾಗಿ ತೋರುತ್ತದೆ.
ನಾಲ್ಕು ದಶಕಗಳಿಂದಲೂ ನಿರಂತರವಾಗಿ ಕಾವ್ಯವೆಂಬ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕವಿಯ ಕಾವ್ಯದ ಬತ್ತದ ಸೆಲೆ'ಗಳ ಮರ್ಮ ಏನು ಎಂಬ ಪ್ರಶ್ನೆ ಗಂಭೀರವಾದದ್ದಾಗಿದೆ. ಅವರ ನಂತರ ಒಳ್ಳೆಯ ಕವಿಗಳೆನಿಸಿಕೊಂಡವರು ಯಾಕೆ ಈಗ ಬರೆಯುತ್ತಿಲ್ಲ? ಅವರ ಕಾವ್ಯದ ಸೆಲೆಗಳು ಬತ್ತಿಹೋದವೇ ಅಥವಾ ಹೊಸ ಕಾವ್ಯಭಿವ್ಯಕ್ತಿಗೆ ತಮ್ಮನ್ನು ತೆರೆದುಕೊಳ್ಳಲಾಗುತ್ತಿಲ್ಲವೇ- ಇವೆಲ್ಲ ಈಗ ಕಾಡುತ್ತಿರುವ ಪ್ರಶ್ನೆಗಳು, ಶಿವಪ್ರಕಾಶ ಸತತ ಕಾವ್ಯಭ್ಯಾಸಿ ಮತ್ತು ಕಾವೋದ್ಯೋಗಿ. ಅವರ ಕಾವ್ಯದಲ್ಲಿ ಈಗಲೂ ನಡೆಸುವ ಶೋಧಗಳು ಅಚ್ಚರಿ ಹುಟ್ಟಿಸುತ್ತವೆ. ಭಾಷಿಕವಾಗಿ ಅವರು ನಡೆಸುವ ಪ್ರಯೋಗಗಳು ಸಾಧು, ಆಸಾಧು ಎಂಬ ಪ್ರಶ್ನೆಗಳನ್ನು ಪಕ್ಕಕ್ಕಿಡುತ್ತವೆ. ಭಾಷಾಕ ಮವೊಂದನ್ನು ವಿಸ್ತರಿಸುವ ಸವಾಲನ್ನು ಈ ಕವಿತೆಗಳು ಅಲ್ಲಲ್ಲಿ ಎದುರುಗೊಳ್ಳುತ್ತವೆ. ಏಕಕಾಲಕ್ಕೆ ಅನುಭಾವೂ, ಸಾಧು ಸಂತತ್ವವೂ ಲೌಕಿಕದ ಆಸಕ್ತಿಯೂ ಅವರ ಕಾವ್ಯದಲ್ಲಿ ಮೈತಳೆಯುತ್ತದವೆ. ಲೌಕಿಕತೆಯ ಅನುಭಾವವನ್ನು ಏಕಕಾಲಕ್ಕೆ ಅವರ ಕವಿತೆಗಳು ಧಾರಣೆ ಮಾಡಿಕೊಳ್ಳುತ್ತವೆ. ಹೀಗಾಗಿ ಇಲ್ಲಿನ ಕವಿತೆಗಳು ಕಾಲಾತೀತವೂ, ಸೀಮಾತೀತವೂ ಆಗಿ ತೋರುತ್ತವೆ. ಅವರ ಕಾವ್ಯ ವ್ಯಾಪಕವಾದ ಜಗತ್ತನ್ನು ಒಳಗೊಂಡಿದ್ದು " ಒಂದು ಮರವನ್ನಲ್ಲ, ಹಲವು ಮರಗಳಿಂದಾದ ಕಾಡನ್ನು " ತನ್ನ ಗರ್ಭದಲ್ಲಿರಿಸಿಕೊಂಡಿದೆ. ಇಲ್ಲಿ ಸ್ವಕೀಯ, ಪರಕೀಯವಾದ ಜಗತ್ತು ನಿರಂತರವಾಗಿ ಘರ್ಷಿಸುತ್ತವೆ, ಒಡನಾಡುತ್ತವೆ, ಸಮಾನಾಂತರ ಮಾರ್ಗದಲ್ಲಿ ಚಲಿಸುತ್ತವೆ. ಹೀಗಾಗಿ ಇಲ್ಲಿ ಹಲವು ಹೂಗಳ ವಾಸನಾತೋಟವೊ೦ದು, ಹಲವು ನೆನಪುಗಳ ಲೋಕವೊಂದು ತನ್ನಷ್ಟಕ್ಕೆ ತಾನು ನಿರ್ಮಾಣವಾಗುತ್ತಿರುತ್ತದೆ. ದೂರದಿಂದಲೇ ಗ್ರಹಿಸುವವರಿಗೆ ಒಂದೊಂದು ಮರದ ಗಾತ್ರ ಎತ್ತರದಿಂದಷ್ಟೇ ದಕ್ಕಬಹುದು, ಅದರ ಒಟ್ಟ೦ದದ ಚಿತ್ರ ಲಭ್ಯವಾಗುವುದಿಲ್ಲ. ಶರಣರು, ತಮಿಳು ಕಾವ್ಯದ ಆಗಲಿ-ಪುಗಂ ಸಾಹಿತ್ಯ, ಸಂತರು, ಸೂಫಿಗಳು, ಭಿಕ್ಷುಗಳು - ಹೀಗೆ ಹಲವು ರೀತಿಯ ಹಲವು ಜಾತಿಗಳ ಹುಲಗೂರು ಸಂತೆಯೇ ಶಿವಪ್ರಕಾಶ್ ಅವರ ಕಾವ್ಯ.
ನಿರಂತರ ಅನ್ವೇಷಣಾ ಪ್ರವೃತ್ತಿಯೊ೦ದು ಇಡೀ ಸ೦ಕಲನಗಳ ಉದ್ದಕ್ಕೂ ಹರಿದಾಡುತ್ತದೆ. ಈಗಾಗಲೇ ಇರುವ ಸಿದಮಾರ್ಗಗಳನ್ನು ಬದಿಗಿರಿಸಿ ತಮ್ಮದೇ ಹಡುಕುಗಣ್ಣಿನ ಕಾಲುದಾರಿಗಳನ್ನಿಡಿದು ಆಜ್ಞಾತ ಜಗತ್ತಿನ ಸಂದಿಗೊಂದಿಗಳಲ್ಲಿ ಮರೆಯಾಗಿರುವ ಜಾನದ ಮೂಲಗಳನ್ನು ಬೆದಕಲಾರಂಭಿಸುತ್ತಾರೆ. ಸಮಗ, ಸ೦ಕಲನದ ಕವಿತೆಗಳನ್ನು ಓದಿದಾಗ ಹಲವು ಪ್ರಶ್ನೆಗಳು ಎದುರಾಗುತ್ತವೆ. ಕವಿತೆಗಳುದ್ದಕ್ಕೂ ಕವಿ ಏನನ್ನು ಶೋಧಿಸಹೊರಟಿದ್ದಾರೆ , ಇಂತಹ ಶೋಧದ ಗತವಾದರೂ ಇಂದಿನ ಸಂದರ್ಭದಲ್ಲಿ ಯಾಕೆ ಬೇಕು. ಆಧುನಿಕವಾಗಿ ವ್ಯಾಪಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳ, ವೈಜ್ಞಾನಿಕ ಚಿಂತನೆಗಳ ಕಾಲದಲ್ಲಿ ಅವರು ಯಾವ ಜಗತ್ತನ್ನು ನಮಗೆ ತೋರಿಸ ಹೊರಟಿದ್ದಾರೆ- ಇವೆಲ್ಲವೂ ಕವಿತೆಗಳನ್ನು ಓದುವಾಗ ಮೂಡುವ ಸಾಮಾನ್ಯ ಪ್ರಶ್ನೆಗಳು. ಈ ಕವಿ ಕಾಣದ ಕಾಡುಗಳಿಲ್ಲ, ಕಾಣದ ದರ್ಶನಗಳಿಲ್ಲ. ಕನ್ನಡದ ಭಾಷೆ, ಸಂಸ್ಕೃತಿ ಕಾಣದ ಎಲ್ಲ ದೇಶ ಭಾಷೆಗಳ ಅನುಭಾವಲೋಕದ ದರ್ಶನವನ್ನು ತಾನೂ ಉಂಡು ಪರರಿಗೆ ಹಂಚುತ್ತಾ ಬಂದಿದ್ದಾರೆ.
ಶಿವಪ್ರಕಾಶ್ ತಮ್ಮ ಭಾವಲೋಕವನ್ನು, ಉಪಮೆಗಳನ್ನು, ಪದಸಂಪತ್ತುಗಳನ್ನು ಮುರಿದುಕಟ್ಟುವ ನಿರಂತರ ಪ್ರಯೋಗಶೀಲ ಕವಿ, ಪದಗಳೊಂದಿಗೆ ಸಲೀಸಾಗಿ ಆಟವಾಡಬಲ್ಲ ಕವಿಗೆ ಪದಗಳೇ ಸಂಪತ್ತು. ಪದಕ್ಕೆ ಪದ ಹೊ೦ದುತ್ತಾ ದ್ವಿಗುಣಗೊಳ್ಳುತ್ತವೆ. ಪದಗಳು ಬಳಕೆಯಾದಷ್ಟೂ ಅರ್ಥಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ, ಅನುರಣನಗೊಳ್ಳುತ್ತಾ ಜೀಕಾಡುತ್ತವೆ. ಉದಾಹರಣೆಗೆ ಪ್ರಸಿದ್ಧವಾದ 'ಅಂಬಪಾಲಿ' ಕವಿತೆ ನೋಡಬಹುದು."ಏನಾಗಿತ್ತು ನೀನಾಗುವ ತನಕ, ನಿನ್ನ ನಿಯುವ ತನಕ, ನೀನಾಗುವ ತನಕ, ನಿಬರುವ ಮೊದಲು, ನಿನ್ನನಿತ್ತೆ ಬಳಿಕ - ಎಂಬ ಪದಗಳು, ಪದಾರ್ಥಗಳು ಅಪಾಲಿ ರಾಜನರ್ತಕಿಯಾಗಿ ವೇಸಾಲಿಗೆ ಬರುವ ಮೊದಲು, ಬ೦ದ ನ೦ತರ, ಒ೦ದು ಹೋದ ನಂತರ ಎಂಬ ಕಾಲದ ಪ್ರಶ್ನೆಗಳೊಂದಿಗೆ, ಅವಳು ಉಂಟು ಮಾಡಿದ ಸಂಚಲನವನ್ನು ನಿರ್ದೇಶಿಸುತ್ತವೆ. ಈ ಸಂಕಲನದೊಂದಿಗಿನ ಜೀಕುವಿಕೆಯಲ್ಲೇ ಅವಳ ಬಾಳಪುಟಗಳು ಬಿಚ್ಚಿಕೊಳ್ಳುತ್ತವೆ.
ಶಿವಪ್ರಕಾಶ್ ಅವರು ಕಾವ್ಯ ಬರೆಯಲಾರಂಭಿಸಿದ ವೇಳೆ ನವ್ಯದ ಮೊದಲ ತಲೆಮಾರಿನ ಕಾವ್ಯ ಹೆಚ್ಚುಕಡಿಮೆ ಮುಗಿದು ಎರಡನೆಯ ತಲೆಮಾರು ಬರೆಯಲಾರಂಭಿಸಿದ್ದರು. ಅಸಂಗತ ಜಗತ್ತಿನ ರೂಪಕಗಳು, ಪರಕೀಯ ಪ್ರಜ್ಞೆ, ಹೆಣ್ಣನ್ನು ಲೈಂಗಿಕ ಸಂಕೇತವನ್ನಾಗಿ ಬಳಸುವ ಕ್ರಮಗಳು ಚಾಲ್ತಿಯಲ್ಲಿದ್ದವು. ಶಿವಪ್ರಕಾಶ್ ತನ್ನದಲ್ಲದ ಈ ಪರಿಸರದ ಕಿರಿಕಿರಿಯಿಂದ ಹೊರಬರಲು ಕಂಡುಕೊಂಡ ಮಾರ್ಗವೆಂದರೆ ಬಾಲ್ಯದಿಂದಲೂ ಕ೦ಡು೦ಡು ಬೆಳೆದ ನಂಬಿಕೆ, ಅಪನಂಬಿಕೆಗಳ ಅನುಭಾವದ ಜಗತ್ತು. ಇರುವಿಕೆ, ಇಲ್ಲದಿರುವಿಕೆಗಳ ಆದಿಯಲ್ಲಿ ಇರಬಹುದಾದ ಅನೂಹ್ಯ ಜಗತ್ತಿನ ಅನುಭವಗಳ ಶೋಧನೆ ಇವರ ಕಾವ್ಯದ ಪ್ರಧಾನ ಧ್ವನಿಯಾಗಿದೆ.
ಸಿದ್ದರ, ಶರಣರ,ಸೂಫಿಗಳ, ಬೌದ್ಧ ಬಿಕ್ಷುಗಳ ಸಮೃದ್ಧ ಗುರುವಿನ ವಶವಾಗದೆ ಅನುಭಾವದ ಸಿದ್ದಿ ಅನುಭಾವ ಲೋಕದಲ್ಲಿ ಸಾದ್ಯವಿಲ್ಲ. ಈ ಅನುಭಾವಿಗಳ ಲೋಕದ ಒಳಗಿದ್ದು ಬರೆಯುವ ಕವಿತೆಗಳು ಕೇವಲ ಅನುಭಾವಿ ಕವಿತೆಗಳಾಗಿ ಉಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಹುಟ್ಟಿದ ಮಿಲರೇಪ, ನದಿಯ ನಾಡಿನಲ್ಲಿ, ಅನಲ್ ಹಕ್, ತುಕಾನ ಅಭಂಗಗಳು, ಅವಲೋಕಿತೇಶ್ವರಾ, ಶಂಸ್ ಇ ತಬ್ರಿಜ್, ಅವಂತಿಕ, ನಾಗರ್ಜುನ- ಈ ಮುಂತಾದ ಕವಿತೆಗಳನ್ನು ನೋಡಬಹುದು. ಈ ಅನುಭಾವ ಲೋಕದಲ್ಲಿ ದೈವಕ್ಕೆ, ಗುರುವಿಗೆ ಶರಣಾಗದೆ ಮುಕ್ತಿ ಅಥವಾ ಬಿಡುಗಡೆ ಎ೦ಬುದು ಸಾಧ್ಯವಿಲ್ಲ. ಈ ಹೊಸ ರೀತಿಯ ಕಾವ್ಯಮಾರ್ಗವನ್ನು ಹುಟ್ಟುಹಾಕಿದ ಶಿವಪ್ರಕಾಶ್ ಕೇವಲ ಕವಿಯಾಗದೆ ತಮ್ಮ ನಂತರ ನಿರ್ದಿಷ್ಟ ಕವಿ ಹಾಗೂ ಓದುಗ ಸಮುದಾಯವನ್ನು ಹುಟ್ಟುಹಾಕಿದ ಮಾರ್ಗನಿರ್ಮಾಪಕ ಕವಿ ಎನಿಸಿಕೊಂಡರು. ಕಾವ್ಯದಲ್ಲಿ ಹೊಸ ದಾರಿಯ ಹುಡುಕಾಟದಲ್ಲಿದ್ದ ಯುವ ಕವಿಗಳು ನೇರವಾಗಿ ಇವರ ಕಾವ್ಯ ಪ್ರಭಾವಕ್ಕೆ ಒಳಗಾದರು.
ಶಿವಪ್ರಕಾಶ್ ಜನಸಾಮಾನ್ಯರ ಕವಿಯಲ್ಲ. ತಮ್ಮನ್ನು ಜನಸಾಮಾನ್ಯರ ಕವಿಯೆ೦ದೇ ಹೇಳಿಕೊಂಡರೂ ಸಾಮಾನ್ಯ ಓದುಗರಿಗೆ ಸುಲಭವಾಗಿ ಅವರ ಕವಿತೆಗಳು ದಕ್ಕುವುದಿಲ್ಲ. ಇಲ್ಲಿನ ಕವಿತೆಗಳು ಲಕ್ಷಾರ್ಥ ಹಾಗೂ ದ್ವನ್ಯಾರ್ಥಗಳನ್ನು ಏಕಕಾಲಕ್ಕೆ ಒಳಗೊಳ್ಳುವುದರಿ೦ದ ಓದುಗರಿಗೆ ಕಾವ್ಯಪರಿಕರಗಳ ಕನಿಷ್ಠ ಪರಿಚಯವಿರಬೇಕಾಗುತ್ತದೆ. ಕಂಡು, ಕಾಣದೆ ಇರುವ ಮಠಮಾನ್ಯಗಳು, ದರ್ಗಾಗಳು, ಅನುಭಾವಿಗಳ ಶೋಧಗಳನ್ನು ನಡೆಸುತ್ತಲೇ ಅವುಗಳನ್ನು ಮಾನುಷವಾಗಿಸುವ ಕ್ರಮವೊಂದಿದ್ದು ಇಲ್ಲೆಲ್ಲಾ ಅಘೋಷಿತವಾದ ಬಂಡಾಯವೊಂದು ಎದ್ದು ಕಾಣುತ್ತದೆ.
ಜಾಗತಿಕಮಟ್ಟದಲ್ಲಿ ಓದುಗರ ಗುಂಪೊಂದನ್ನು ಪಡೆದಿರುವ ಕವಿ ಕಟ್ಟಹೊರಟಿರುವುದು ಮಾನವೀಯತೆಗೆ ಅಂಟಿಕೊಂಡಿರುವ ಕಾವ್ಯ ತಲ್ಲಣಗಳನ್ನು, ಸಮಾಜ ಹಾಗೂ ಧರ್ಮದ ಸಂಬಂಧಗಳು ಹಿಂದೆಂದಿಗಿಂತಲೂ ಹಳಸಿ ಹೋಗಿರುವುದರಿಂದ , ಧರ್ಮಪೀಠಗಳು ರಾಜಕಾರಣದ ಕೇಂದ್ರಗಳಾಗಿರುವುದರಿಂದ ಕವಿ ಹುಡುಕ ಹೊರಟಿರುವುದು ಮಲಿನಗೊಂಡ ಮಾರ್ಗಪರಂಪರೆಯ ಎದುರಿಗೆ ಸಣ್ಣಸಣ್ಣ ಮಟ್ಟದಲ್ಲಿ ಪ್ರವಹಿಸುವ ಚಿಂತನೆಗಳ ಧಾರೆಗಳನ್ನು. ಈ ಧಾರೆಗಳು ವರ್ಗಾತೀತವಾದವು, ಜಾತ್ಯಾತೀತವಾದವು ಆಗಿವೆ. ಇವು ಜಾಗತೀಕರಣದ ಸೆಳೆತಕ್ಕೆ ಒಳಗಾಗದೆ ಪವಿತ್ರವಾದ ಪರಂಪರೆಯ ಎದುರು ತಮ್ಮ ಮಲಿನಗೊಂಡ ಜಗತ್ತಿನಿಂದಲೇ ಎದ್ದು ನಿಂತಂತವು. ಇಂತಹ ಧಾರೆಗಳ ಬಗ್ಗೆ ಕವಿಗೆ ವಿಶೇಷವಾದ ಆಸಕ್ತಿ. ವೀರಶೈವ ಸಂಸ್ಕೃತಿಯಲ್ಲಿ ಕವಿ ಕಟ್ಟಹೊರಟಿರುವುದು ನೀಲಗಾರರ ಮಂಟೇಸ್ವಾಮಿ ಹಾಗೂ ಮಲೆ ಮಾದೇಶ್ವರರನ್ನು, ಕಾವ್ಯವಾಗಲಿ, ನಾಟಕವಾಗಲಿ ಕವಿ ಪ್ರಧಾನಧಾರೆಗೆ ಪರ್ಯಾಯವೊಂದನ್ನು ಕಂಡುಕೊಳ್ಳುವ ಕಡೆ ಗಮನ ವಹಿಸುತ್ತಾರೆ. ಕೇಂದ್ರದ ನಿರಾಕರಣ ಹಾಗೂ ಅದರ ಮರುರೂಪೀಕರಣ ಕವಿಯ ಮುಖ್ಯ ಉದ್ದೇಶ.
ತಾಯ್ತನದ ಆದಭಾವ 'ಸಮಗಾರ ಭೀಮವ್ವ' ನಂತಹ ಹೆಣ್ಣನ್ನು ಒಳಗೊಂಡಂತೆ ಇತ್ತಿಚೆಗಿನ ಸಂಕಲನದಲ್ಲಿನ "ತಾಯಂದಿರ ದಿವಸ' ದಂತಹ ಕತೆಯವರೆಗೆ ಮು೦ದುವರೆಯುತ್ತದೆ. ಈ ಭೀಮಪ್ಪನ ರೂಪಕ ತಾಯಿಯಾಗಿ, ಗೆಳತಿಯಾಗಿ, ಪೇಯಸಿಯಾಗಿ ಎಸ್ತರಿಸುತ್ತಾ ಹೋಗುತ್ತದೆ.
ಫಾತಿಮಾ,
ನನ್ನ ತಾಯಿಯ ಹಾಗೆ ನೀನೂ
ಮಕ್ಕಳ ಹೆತ್ತು ಹೊತ್ತು
ಗಂಡನಿಲ್ಲದ ನಿನ್ನ ಜಗತ್ತಲ್ಲಿ ಬೆಳೆಸಿ ಬಾಳಿಸಿದ್ದೀಯ
ಅವರೂ ತಂದೆ ತಾಯಿರಾಗುವ ಹಾಗೆ
ಕಟೆದು ನಿಲಿಸಿದ್ದೀಯ
ಇವತ್ತು ತಾಯಂದಿರ ದಿವಸ
ಅಳಿದುಹೋಗಲಿ
ಗಂಡಾಂತರಗಳ ಅಕರಾಳ ಇತಿಹಾಸ ಆಗಲಿ
ಅಣುಕಣವೂ ತಾಯಿಯರ ಹಾಸ- ವಿಕಾಸ (ತಾಯಂದಿರ ದಿವಸ)
ಶಿವಪ್ರಕಾಶ್ ಅವರ ಕವಿತೆಯಲ್ಲಿ ಹೆಣ್ಣು ಬಿಡಿಸಲಾಗದ ಒಂದು ನಿಗೂಢ, ಕೈ ದಕ್ಕದ ಅಮೃತಫಲ, ಸಿಕ್ಕರೂ ಕೈ ಜಾರುವುದೆಂಬ ಭೀತಿಯ ಸ್ವರೂಪವನ್ನೊಳಗೊಂಡಿದೆ. ಈ ಎಲ ಕೊಂಡಹಾಯುವ ಕವಿತೆಗಳು ಮರಳಿ, ಮರಳಿ ಇಲ್ಲಿ ಮೈತಳೆಯುತ್ತವೆ. ಹೀಗಾಗಿಯೇ ಇಲ್ಲಿನ ಶಿವಸ ರೂಪಿ ಗಂಡು ನಿರಂತರವಾಗಿ ಪಾರ್ವತಿಯೆ೦ಬ ಹೆಣ್ಣಿನ ಶೋಧದಲ್ಲಿ ತೊಡಗಿದವನಾಗಿದ್ದಾನೆ.
ಹೊಸಲೋಕಗಳನ್ನು ಕಾಲಾತೀತರಾಗಿ ತಮ್ಮ ಕಾವ್ಯಪ್ರೇಮಿಗಳಿಗೆ ಮೊಗೆಮೊಗೆದು ನೀಡುತ್ತಿರುವ ಕವಿ ಮತ್ತು ಅವನ ಕವಿತೆಗಳಿಗೆ ದಣಿವೆಂಬುದು ಇದೆಯೇ. ಕವಿ ಮತ್ತು ಕವಿತೆ ನಿಜದ ಓದುಗರೆದೆಯಲ್ಲಿ ಒಮ್ಮೆ ದಾಖಲಾದರೆ ಕೊನೆತನಕವೂ ಆ ನಂಟು ಅಳಿಯಲು ಸಾಧ್ಯವೇ? ಕಾವ್ಯ ಪ್ರಕಾರದಲ್ಲಿ ಇಷ್ಟು ದೀರ್ಘಕಾಲ ತಮ್ಮ ಕವಿತೆಗಳ ಮೈಮಾಟ ಹಾಗೂ ಅವುಗಳ ಯೌವನವನು ಕಾಪಾಡಿಕೊಂಡು ಬಂದಿರುವ ಕವಿಗಳು ಬೆರಳೆಣಿಕೆಯಷ್ಟು ಮಾತ್ರ. ಸಮಗ್ರ ಕವಿತೆಗಳ ಸಂಕಲನ "ಹೋಗಿ ಬನ್ನಿ ಋತುಗಳೇ" ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಶಿವಪ್ರಕಾಶ್ ಅವರಿಗೆ ಅಭಿನಂದನೆಗಳು
(ಕೃಪೆ; ಬರಹ; ಪುಪ್ಪ ಎಚ್. ಎಲ್)
©2024 Book Brahma Private Limited.