‘ಹರವಿದಷ್ಟು ರೆಕ್ಕೆಗಳು’ ಕೃತಿಯು ಅಶೋಕ ಹೊಸಮನಿ ಅವರ ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಚೆನ್ನಪ್ಪ ಕಟ್ಟಿ ಅವರು, ನುಡಿವ ನಾಲಗೆಗೆ ಅಘೋಷಿತ ತುರ್ತುಗಳು ದಿಗ್ಬಂಧನ ವಿಧಿಸಿದಾಗ ಅಂತರಂಗದ ಹಂಸೆಗಳು ರೆಕ್ಕೆ ಬಿಟ್ಟ ವೀಸಾದ ಹಂಗಿಲ್ಲದೆ ಹಾರಾಡತೊಡಗುತ್ತವೆ. ಕವಿಯಾಡುವ ಪದಗಳು ವಿದಾಯದ ಮೊಳೆ ಹೊಡೆಯಿಸಿಕೊಂಡು ಶವಪೆಟ್ಟಿಗೆಯಲ್ಲಿ ಬಂಧಿಯಾದಾಗ ಅವು ಮಣ್ಣಲ್ಲಿಯೇ ಕಣ್ಣು ತೆರೆವ ಬೀಜಗಳಾಗುತ್ತವೆ. ಹೃದಯದ ಚಿಗುರನ್ನು ಕತ್ತರಿಸುವ ದೊರೆ ನಮ್ಮನ್ನು ಆಳಲು ಬಂದಾಗ ಕತ್ತರಿಸಿದ ಜಾಗೆಯಲ್ಲಿಯೇ ಹೂವು ಕಾಯಿ ಹಣ್ಣುಗಳ ಕನಸುಗಳು ಚಿಗುರೊಡೆಯುತ್ತವೆ. ಉನ್ಮತ್ತ ಧರ್ಮದ ಬಾವುಟಗಳ ಗಾಢ ಕರಿನೆರಳು ನಮ್ಮ ಸುತ್ತಲೂ ಕವಿದಾಗ ಕಪ್ಪು ಬಣ್ಣದಲ್ಲಿಯೇ ಕಾಮನಬಿಲ್ಲು ಮೂಡಿಸುವ ಛಲ ಹುಟ್ಟಿಕೊಳ್ಳುತ್ತದೆ. ನೆತ್ತರು ಕುಡಿವ ಉದ್ಯಮಗಳು ವಿಜೃಂಭಿಸುವಾಗ ಅಲ್ಲಿಯೇ ಕರುಣೆಯ ಜೀವಜಲದ ಊಟಿ ಕೀಳುತ್ತದೆ. ಸತ್ಯದ ಮೇಲೆ ಎಗ್ಗಿಲ್ಲದೆ ಚೂರಿ ಇರಿತಗಳು ನಡೆದಿರುವಾಗ ಗಾಯಗಳಿಗೆ ಬಾಯಿ ಮೂಡಿ ಆವು ಹಾಡಲು ಪ್ರಾರಂಭಿಸುತ್ತವೆ. ವರ್ತಮಾನದ ಬೆಂಕಿಯಲ್ಲಿ ಮಾತುಗಳು ಬಿಟ್ಟು ಭೂವಿಯಾದಂತೆನಿಸಿದರೂ ಬೂದಿಯಿಂದಲೇ ಫೀನಿಕ್ಸ್ ಪಕ್ಷಿ ರೆಕ್ಕೆ ಬಡಿಯುತ್ತ ಹಾರಿ ಬರುತ್ತದೆ. ಯುವ ಕವಿ ಅಶೋಕ ಹೊಸಮನಿ ಅವರ 'ಹರವಿದಷ್ಟು ರೆಕ್ಕೆಗಳು' ಕವನ ಸಂಕಲನದಲ್ಲಿ ಯಾವುದೇ ಅಬ್ಬರವಿಲ್ಲದೆ ಇದೆಲ್ಲಾ ಸಾಧ್ಯವಾದದ್ದು ಕಾವ್ಯಕ್ಕಿರುವ ಧಾರಣ ಶಕ್ತಿಯಿಂದ ಅಶೋಕ ಅವರಿಗೆ ಚೀರಾಟದ ಅಭಿವ್ಯಕ್ತಿಗಿಂತ ತಲ್ಲಣ ಪ್ರಿಯವಾದುದು. ಮೌನವಾಗುವುದು. ಎಂದರೆ ರೂಪಕದಲ್ಲಿ ಮಾತನಾಡುವುದು. ನಂಜು, ಕುಡಿಯುತ್ತಲೆ ನಕ್ಷತ್ರಗಳನ್ನು ಮುಕ್ಕಳಿಸಿ ನಗಲು ರೂಪಕಗಳು ಸಹಕರಿಸುತ್ತದೆ. ಆತ್ಮಕ್ಕಂಟಿದ ಕೆಂಡದ ಮಾತುಗಳನ್ನು ಕೇಳುವವನ ಕಿವಿ ಸುಡದ ಹಾಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮೌನವಾಗಿರುತ್ತಲೇ ಸ್ಫೋಟಿಸುವ ಶಕ್ತಿ ಅವರ ಕಾವ್ಯಕ್ಕೆ ದಕ್ಕಿದೆ. ಅಶೋಕ ನಮ್ಮ ಮಧ್ಯದ ಭರವಸೆಯ ಕವಿಯಾಗಿದ್ದಾರೆ ಎಂದಿದ್ದಾರೆ.
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ. ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ. ...
READ MORE