ಹರನೆಂಬುದೇ ಸತ್ಯ

Author : ಕೃಷ್ಣಮೂರ್ತಿ ಹನೂರು

Pages 160

₹ 100.00




Year of Publication: 2021
Published by: ಲೋಹಿಯಾ ಪ್ರಕಾಶನ
Address: # ಕ್ಷಿತಿಜ, ಕಪ್ಪಗಲ್ಲು ರಸ್ತೆ, ಬಳ್ಳಾರಿ-583103
Phone: 9900750549

Synopsys

ಕೃಷ್ಣಮೂರ್ತಿ ಹನೂರು ಅವರ ಕೃತಿ-ಹರನೆಂಬುದೇ ಸತ್ಯ.ಹಳೆಗನ್ನಡ ಕಾವ್ಯಗಳನ್ನು ಕುರಿತು ಹೊಸ ನೋಟಗಳು ಎಂಬ ಉಪಶೀರ್ಷಿಕೆಯಡಿಯ ಈ ಕೃತಿಯಲ್ಲಿ ಆದಿಪುರಾಣ-ಕಾವ್ಯಬಂಧದ ನೆಲೆಗಳು, ಯುದ್ಧೋನ್ಮಾದ:ಪುಲ್ಯರುಳುಗಳ ಮಾರುಕಟ್ಟೆ, ಕಬ್ಬಿಣದ ಕತ್ತಿ, ಅದರದೇ ತಂತಿ, ‘ನಿಮ್ಮ ಕೆಪಿಂಗೆನ್ನ ಶಿರ ಸರಿಯೇ’, ಹರನೆಂಬುದೇ ಸತ್ಯ, ~ಊರದ ಚೇಳಿನ ಏರದ ಬೇನೆಯಲ್ಲಿ’, ಜಂಗಮ ಜನಾರ್ದನರ ಮಹಾಕವಿ, ನಂಭಿಯಣ್ಣನ ಕಥಾನಕ: ಇತರ ಮೂಲಗಳಲ್ಲಿ, ‘ಜಗದೋಳುಪಕಾರಿಯಾದವನು’ , ದಾಸ ಸಾಹಿತ್ಯ: ಅನುಸಂಧಾನ, ರಾಮಾಯಣದ ಮರು ಹುಟ್ಟು..ಹೀಗೆ ಒಟ್ಟು 11 ಲೇಖನಗಳನ್ನು ಸಂಕಲಿಸಿದೆ. ಮಯೂರ ಮಾಸಪತ್ರಿಕೆಯಲ್ಲಿ ‘ನಿಚ್ಚಂ ಪೊಸತು’  ಮಾಲಿಕೆಯಡಿ ಸರಣಿ ರೂಪದಲ್ಲಿ ಪ್ರಕಟವಾಗಿವೆ.

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಎಚ್. ದಂಡಪ್ಪ ‘ಇಲ್ಲಿಯ ಎಲ್ಲ ಬರಹಗಳಲ್ಲಿ ದೇಶಿ ಚಿಂತನೆಗಳನ್ನು ಕನ್ನಡ ಸಂಸ್ಕೃತಿಯ ಮುಖ್ಯ ಚಿಂತನಧಾರೆಗೆ ಅನ್ವಯಿಸಿ ಅಧ್ಯಯನ ಮಾಡಿರುವ ವಿದ್ವತ್ಪೂರ್ಣ ಕ್ರಮವೊಂದು ಕಂಡು ಬರುತ್ತದೆ. ಅದಕ್ಕೆ ಪೂರಕವಾಗಿ ಜನಪದ ಪುರಾಣಗಳು,ಧರ್ಮ, ತತ್ವಶಾಸ್ತ್ರ, ಚರಿತ್ರೆಯನ್ನು ಅವಶ್ಯಕತೆಗೆ ಅನುಗುಣವಾಗಿ ಅನುಸಂಧಾನಗೊಳೀಸಿ ಕಾವ್ಯದ ಒಳನೋಟಗಳನ್ನು ಶೋಭಿಸುತ್ತಾರೆ. ಹಿಂದಿನ ಕಾವ್ಯಗಳನ್ನು ಇಂದು ಏಕೆ ಓದಬೇಕು ಎಂಬುದು ಮನವರಿಕೆಯಾಗುತ್ತದೆ. ಯಾವ ವಾದಗಳಿಗೂ ಕಟ್ಟು ಬೀಳದೆ ಸಂಯವಮದಿಂದ ಕನ್ನಡ ಪರಂಪರೆಯ ಅವಶ್ಯಕತೆಗಳಿಗೆ ಅನುಗುಣವಾಗಿ ತಾತ್ವಿಕ ವಿಚಾರಗಳನ್ನು ಶೋಭಿಸುವ ಕ್ರಮ ಹನೂರರ ಈ ಕೃತಿಯ ಲೇಖನಗಳಲ್ಲಿ ಹಾಸುಹೊಕ್ಕಾಗಿದೆ, ಜೊತೆಗೆ, ಈ ಬರಹಗಳು ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಿಕೊಳ್ಳುವ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ಕಾರ್ಯನಿರ್ಹಸಿದ್ದಾರೆ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ಆಫ್ ...

READ MORE

Reviews

’ಹರನೆಂಬುದು ಸತ್ಯ’ ಕೃತಿಯ ವಿಮರ್ಶೆ

 ಈ ಹೊತ್ತಿಗೆಯು ಕನ್ನಡ ಕಾವ್ಯ ಪರಂಪರೆಯನ್ನು ಕುರಿತ ಹನ್ನೊಂದು ಬರಹಗಳನ್ನು ಒಳಗೊಂಡಿದೆ. ಇಲ್ಲಿಯ ಒಂದೊಂದು ಬರಹವು ಕೂಡ ಕನ್ನಡ ಕಾವ್ಯ ಪರಂಪರೆಯ ವೈಶಿಷ್ಟ್ಯವನ್ನು ಪ್ರಕಟಿಸುವ ಇರಾದೆಯನ್ನು ಹೊಂದಿವೆ. ಕಥನ ಬಗೆಗಳು ಮತ್ತು ಮಾದರಿಗಳು ಮೈದಾಳಿದ ವಿನ್ಯಾಸಗಳನ್ನು ಈ ಬರಹಗಳು ಪ್ರಕಟಿಸುತ್ತವೆ. ಚರಿತ್ರೆ ಮತ್ತು ಪುರಾಣಗಳ ನಡುವಣ ನಂಟಸ್ತಿಕೆಯನ್ನು ಅರಿಯುವುದಕ್ಕೂ ಬೇಕಾಗುವ ಕುರುಹುಗಳನ್ನು ಯಥೇಚ್ಛವಾಗಿ ಪ್ರತೀ ಲೇಖನದಲ್ಲಿ ಕಾಣುತ್ತೇವೆ. ಕನ್ನಡ ಸಾಹಿತ್ಯ ಸನ್ನಿವೇಶದಲ್ಲಿ ಬಳಸುವ 'ನಿರೂಪಣೆ' ಎನ್ನುವ ಪರಿಕಲ್ಪನೆಗೆ ಸಾಟಿಯಾಗಿ ಇಂಗ್ಲೀಷ್‌ನ 'ಡಿಸ್ಕೋರ್ಸ್' ಎಂಬ ಪರಿಕಲ್ಪನೆಯನ್ನು ಬಳಸುವುದಾದರೆ, (ಹಳಗನ್ನಡ) ಕನ್ನಡ ಕಾವ್ಯಗಳ ಮೂಲಕ ಪಡೆಯುವ ತಿಳಿವು ಬದುಕಿನ ಡಿಸ್ಕೋರ್ಸ್ ಆಗಿಯೇ ನಮಗೆ ಲಭ್ಯವಾಗುತ್ತದೆ. ಅಂದರೆ ಕವಿಗಳು 'ಭಕ್ತಿ' ಮತ್ತು 'ಭವ' ಎಂಬ ನಿಲುವುಗಳನ್ನು ತಿರುಗು ಮುರುಗು ಮಾಡಿದ ಬದುಕಿನ ವೈರುಧ್ಯಗಳನ್ನು ನಿಚ್ಚಳಗೊಳಿಸುವ ನೆಲೆಗಳಾಗಿ ಕಾಣುತ್ತವೆ. ಬದುಕಿನ ಸಾರ್ಥಕತೆಯನ್ನು ಕಾಣುವುದೇ ವೈಭವದ ನಶ್ವರತೆಯ ಮೂಲಕ ಅನ್ನುವುದು ಜೈನ ಕವಿಗಳ ಧೇಯ ವಾಕ್ಯವಾಗಿದೆ. ಇದು ಕೇವಲ ಆದರ್ಶದ ಬದುಕಿನ ಕಲ್ಪನೆ ಮಾತ್ರವಾಗದೇ, ಅದುವೇ ನಮ್ಮ ದೈನಂದಿನ ಸಹಜ ಬದುಕಿನ ಲಯವಾಗಬೇಕು ಎಂಬ ಅಭಿಪ್ಪೆಯನ್ನು ಜೈನ ಕವಿಗಳಲ್ಲಿ ನೋಡಬಹುದಾಗಿದೆ. ಹೀಗೆ ಶುರುವಾದ ಕನ್ನಡದ ಕಾವ್ಯಕಥನ ಮಾದರಿಯಲ್ಲಿ ಏರ್ಪಟ್ಟಿರುವ ಪಲ್ಲಟಗಳನ್ನು ಎರಡು ಪ್ರಮುಖ ನೆಲೆಯಲ್ಲಿ ಗುರುತಿಸಬಹುದು. ಒಂದು ಭಾಷಿಕ ಪಲ್ಲಟ ಮತ್ತೊಂದು ಸಾಹಿತ್ಯಕ ಪಲ್ಲಟ, ಸಾಹಿತ್ಯದ ನಿರೂಪಣೆಗಳ ಸ್ವರೂಪ, ಗುರಿ ಮತ್ತು ಭಾಷೆಯನ್ನು ಬದಲಾಯಿಸುವ ಮೂಲಕ ಬದುಕಿನ ದೃಷ್ಟಿಕೋನಗಳಲ್ಲಿ ಏರ್ಪಟ್ಟ ಪಲ್ಲಟಗಳನ್ನು ನಮ್ಮಿ ಕವಿಗಳು ತೋರಿಸಿಕೊಟ್ಟಿದ್ದಾರೆ.
 'ಓದು ಕಾವ್ಯದಿಂದ ಹಾಡು ಕಾವ್ಯ'ಗಳ ತಾತ್ವಿಕ ವಿನ್ಯಾಸಕ್ಕೂ ಈ ಪಲ್ಲಟಗಳೇ ಮೂಲಚೂಲವಾಗಿವೆ.

ಹಳಗನ್ನಡ ಸಾಹಿತ್ಯದ ಈ ಒಟ್ಟು ವಿದ್ಯಮಾನವನ್ನು, ಹನೂರು ಅವರು ಮೂರು ಮುಖ್ಯ ಚಳುವಳಿಯ ಮಾರ್ಗಗಳನ್ನಾಗಿ ಗುರುತಿಸುತ್ತಾರೆ. (1), ಜೈನ ಕವಿಗಳು ಆರಮನೆಯ ಬದುಕಿನ ವಿರುದ್ಧ ನಡೆಸಿದ ಚಳುವಳಿ (2), ವಚನಕಾರರ ಸಾಮಾಜಿಕ ಚಳುವಳಿ (3), ದಾಸವರೇವಣ್ಯರ ಸೌಮ್ಯಪಂಥದ ಸಾಮಾಜಿಕ ಅರಿವಿನ ಚಳುವಳಿ ಎಂಬುದಾಗಿ ಇವುಗಳನ್ನು ನೋಡಬಹುದು. ಬದುಕಿನ ದುರಂತ, ವಿಷಾದ, ಸಂಘರ್ಷದಂತಹ ವಿವರಗಳು ಕನ್ನಡ ಕಾವ್ಯಗಳಲ್ಲಿ ಯಥೇಚ್ಛವಾಗಿ ಒಡಮೂಡಿವೆ. ಹಿಂಸೆಯನ್ನು ವಿವರಿಸುವ ಮೂಲಕವೇ ಹಿಂಸೆಯ ಮೂಲವನ್ನು ಅನಾವರಣಗೊಳಿಸುವ ಮತ್ತು ಅಹಿಂಸೆಯ ಮನೋಧರ್ಮವನ್ನು ನೆಲೆಗೊಳಿಸುವ ಬಗೆಗಳು ಇಲ್ಲಿ ಎದ್ದು ಕಾಣುತ್ತವೆ. ಮಾನವಸಾರವನ್ನು ಸಾರುವ ಈ ಕಥನಗಳು ಒಂದೇ ಆದರೂ ಅವುಗಳೊಳಗೆಯೇ ಹಲವು ವೈರುಧ್ಯಗಳು ಹೇಗೆ ತಲೆಯೆತ್ತಿವೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಕನ್ನಡ ಕಾವ್ಯ ಪರಂಪರೆಯಲ್ಲಿ ಏರ್ಪಟ್ಟಿರುವ ಕಾವ್ಯದ ಆಶಯಗಳನ್ನೂ ಇಲ್ಲಿ ಮತ್ತು ಗುರುತಿಸಬಹುದು. ಪಂಪ, ರನ್ನರಕ್ಕಿಂತ ವಚನ ಚಳವಳಿ ಆತೋನ್ನತಿಯೇ ದೊಡ್ಡದೆಂಬ ನಡೆಸಿ ಮಾರ್ಗದಲ್ಲಿ ಶರಣರು ಕಾಯಕ ಮತ್ತು ಭಕ್ತಿ ತತ್ವವನ್ನು ಪ್ರಚಾರಕ್ಕೆ ತಂದರು.

ದಿಟ, ಪಂಪ ಹೇಳುವ ಕಾವ್ಯ ಧರ್ಮ ಮತ್ತು ಕುಮಾರವ್ಯಾಸ ಹೇಳುವ ಮನುಷ್ಯ ಧರ್ಮ ಪರಸ್ಪರ ಪೂರಕವಾಗಿವೆ. ಭಕ್ತಿ ಆರಾಧನೆಗಳ ನಡುವಣ ಭಿನ್ನತೆಗಳನ್ನು ಕಾವ್ಯವೊಂದು ಪ್ರಕಟಿಸುವ ಜೀವಕಾರುಣ್ಯ ಎಂತಹದು? ಅದು ನಮ್ಮ ಬದುಕಿಗೆ ಹೇಗೆ ಒತ್ತಾಸೆಯಾಗಬಲ್ಲದು ಅನ್ನುವುದನ್ನು ಇಲ್ಲಿ ಕಾಣುತ್ತೇವೆ. “ಕನ್ನಡ ಪರಂಪರೆಯಲ್ಲಿ ನಡೆಸಲ ಸಂದುಹೋದ ಯಾವುದೇ ಕವಿ ಎಷ್ಟೇ ಮಾನವೀಯ ಚಿಂತನೆಗಳನ್ನು ಜೀವಪರ ಓ' ಹೆಂ ಧೋರಣೆಗಳನ್ನು ಹೊಂದಿದ್ದರೂ, ಆಯಾ ಕವಿ ಅನುಸರಿಸಿದ ಧರ್ಮ, ದೈವನಿಷ್ಠೆ ಬರ್ಬ ಇವುಗಳನ್ನು ಮಾತ್ರ ಬಿಟ್ಟುಕೊಟ್ಟಂತೆ ತೋರುವುದಿಲ್ಲ”. 'ಮನುಷ್ಯ ಜಾತಿ ಎಂಬ ತಾನೊಂದೆ ವಲಂ' ಎಂದು ಹೇಳಿದ ಪಂಪ ಜೈನಧರ್ಮ ಬ್ರಾಹ್ಮಣ ಧರ್ಮಕ್ಕಿಂತ ಶ್ರೇಷ್ಠ ಮನುತ ಎನ್ನುತ್ತಾನೆ. ವಚನಕಾರರು ಮತ್ತು ವೀರಶೈವ ಕವಿಗಳು ಲೋಕದ ಜನವೆಲ್ಲ ಹರನನ್ನೇ ಕೇಳುವ ನಂಬುವಂತೆ ಹೇಳುತ್ತಾರೆ. ಜಾತಿ, ಕುಲ ಪದ್ಧತಿಯನ್ನು ವಿರೋಧಿಸುವ ಇವರೆಲ್ಲರೂ ತಮ್ಮ ಧರ್ಮವನ್ನೇ ಎತ್ತಿಹಿಡಿಯುವ ಇರಾದೆಯನ್ನು ಹೊಂದಿದ್ದಾರೆ.

ಕನ್ನಡ ಕಾವ್ಯ ಪರಂಪರೆಯ ಸಾಮಾನ್ಯ, ಅಸಾಮಾನ್ಯ, ಪಂಡಿತ, ಪಾಮರ ಮತ್ತು ಕೃಷಿವಿರ ಪ್ರಖರ ವೈಚಾರಿಕ ಧೋರಣೆಯ ನಡೆಯೇ ಅತ್ಯಂತ ವೈವಿಧ್ಯಮಯವಾಗಿವೆ. ವೈಚಾರಿಕತೆ, ಸಿಂಪ ಭಾಷೆ ಹಾಗೂ ಕಾವ್ಯ ಧೋರಣೆಗಳೊಳಗಿನ ಬಹುಳತೆ ಇಲ್ಲಿ ಎದ್ದು ಕಾಣುತ್ತದೆ. ಆದರೆ ನೀಡುತ ಜೈನ, ಶೈವ, ವೈಷ್ಣವ ಪಂಥಗಳಿಗೆಯೇ ಪೂರಕವಾಗಿ ಮೈದಾಳಿದ ಪಠ್ಯಗಳಲ್ಲಿ ಜೀವಪರವಾದದ್ದು ಮತ್ತು ಜೀವವಿರೋಧಿಯಾದದ್ದು ಯಾವುದು? ಎನ್ನುವ ಪ್ರಶ್ನೆ ಸರಳ ಮಾತ್ರ ಮುಂದುವರೆಯುತ್ತದೆ. ಜೈನ ಮತ್ತು ವೈಷ್ಣವ ಕವಿಗಳು ರಾಮಾಯಣ, ಮಹಾಭಾರತ ಹೆಚ್ಚಿಸು ಕಾವ್ಯಗಳನ್ನು ಮಾತ್ರ ಅನುಸರಿಸಿದರೆ, ಶೈವ ಕವಿಗಳು ಅತ್ಯಂತ ಸಾಮಾನ್ಯರನ್ನೇ ಕುರಿತು ಸುಸ್ಥಿರ ತಮ್ಮ ಕಾವ್ಯವನ್ನು ರಚಿಸಿದರು. “ಬದುಕಿನ ಸಂಘರ್ಷಗಳನ್ನು ಮೂಲಭೂತ ತಿಳಿವಳಿಕೆಯನ್ನು ಬಗ್ಗೆ ಗ ಒಂದು ಕಥೆಯ ಮೂಲಕ ಹೇಳುವ ಪ್ರಾಚೀನ ಕಥನ ಮೂಲಗಳನ್ನು ಬಿಟ್ಟು ಶರಣರು ಬೆಂಬಲಿ ನೇರವಾಗಿ ವಚನಗಳ ಮೂಲಕ ಬದುಕಿನ ತತ್ವಗಳನ್ನು ಉಪನಿಷತ್ತುಗಳಂತೆ ಬಿತ್ತರಿಸಿದರು.  ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಪ್ರಾತಿನಿಧ್ಯ ಪಡೆದ ಸುಳಿವುಗಳು ಈ ವಚನ ಮಾದರಿ ಸಾಹಿತ್ಯದಿಂದ ಹರಿಹರ, ರಾಘವಾಂಕರಲ್ಲಿ ಮುಂದುವರೆಯುತ್ತವೆ ಎಂಬುದು ಗಮನಾರ್ಹ.

ಸೌರಶಕ ಜಾನಪದ ಸಾಹಿತ್ಯದ ಜೊತೆಗೆ ಅನುಸಂಧಾನಗೊಳಿಸುವ ಮತ್ತು ಮುಖಾಮುಖಿಯಾಗಿಸುವ ನಿಲುವುಗಳು ಈ ಬರಹಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯಕ ಅವಧಿ ನಿಲುವುಗಳನ್ನು ಮಾತ್ರ ಸಮಂಜಸಗೊಳಿಸುವುದಷ್ಟೆಯಲ್ಲ ಬದಲಾಗಿ ಬದುಕಿನ ಅನುಭವಗಳ ನೀಡಿದ ಇಡೀ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನ್ಯಾಸಗಳು ಹೇಗೆ ನಮ್ಮ ಕನ್ನಡ ಕಾವ್ಯ ಮತ್ತಷ್ಟ ಪರಂಪರೆಯಲ್ಲಿ ನೆಲೆಗೊಂಡಿವೆ ಎನ್ನುವುದನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ.

( ಕೃಪೆ: ಹೊಸಮನುಷ್ಯ, ಬರಹ: ಮೇಟಿ ಮಲ್ಲಿಕಾರ್ಜುನ)

----

  ಹರನೆಂಬುದೇ ಸತ್ಯ ಪುಸ್ತಕ ವಿಮರ್ಶೇ (ಪ್ರಜಾವಾಣಿ)

---

 

Related Books