ಕವಿ, ಕಥೆಗಾರ ಅನಿಲ್ ಗುನ್ನಾಪೂರ ಅವರ ‘ಗುಬ್ಬಚ್ಚಿ ಗೂಡಿನಲ್ಲಿ’ ಕವನ ಸಂಕಲನವಾಗಿದೆ. ಈ ಸಂಕಲನಕ್ಕೆ ಅನ್ವೇಷಣೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ ಮುನ್ನುಡಿ ಬರೆದಿದ್ದಾರೆ. ಅವರ ಮುನ್ನುಡಿಯ ಸಾಲುಗಳಲ್ಲಿ ‘ನಾನು ಕಂಡಂತೆ ಅನಿಲ್ ಗುನ್ನಾಪೂರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವಕ. ಆಗೊಮ್ಮೆ ಈಗೊಮ್ಮೆ ಪ್ರತಿಕ್ರಿಯಾತ್ಮಕ ಕಾವ್ಯ ಸಾಮಾಜಿಕ ತುಡಿತಗಳು ದಾಖಲಿಸಿರುವುದನ್ನು ಗಮನಿಸಿದ್ದೇ, ಈ ಹುಡುಗ ಜಾಳುಜಾಳಾದ ಭಾವನೆಗಳ ಹರಿಬಿಟ್ಟ ಕವಿ ಅಲ್ಲ! ಮಧ್ಯಮ ಮಾರ್ಗದ ಕಾವ್ಯ ರಚನೆಗೆ ಕೈ ಹಾಕಿದ್ದರೂ ಕಾವ್ಯದ ಬಗ್ಗೆ ಅದಮ್ಯ ಉತ್ಸಾಹ, ಕವಿಯಾಗುವ ಛಲಗಾರಿಕೆ ಇದೆ. ಈ ಸಂಕಲನ ಓದಿದ ನಂತರ ಭಿನ್ನಾಸಕ್ತಿಯ, ಭಿನ್ನ ವಸ್ತುವಿನ ಹುಡುಗಾಟದಲ್ಲಿ ಕವಿ ಶೋಧನೆಯಲ್ಲಿದ್ದಾನೆ ಅನ್ನಿಸುತ್ತದೆ. ವೈಯಕ್ತಿಕ ಭಾವನೆಗಳ ಜೊತೆಗೆ ಸಾಮಾಜಿಕ ಆಯಾಮವನ್ನು ತಮ್ಮ ಕಾವ್ಯದ ಪರಿಧಿಯಲ್ಲಿ ತರುವ ಯತ್ನ ರೇಷ್ಮೆಹುಳು ಗೂಡುಕಟ್ಟುವ ಪರಿಯನ್ನು ಸೂಚಿಸುತ್ತದೆ. ಹೀಗಾಗಿ ಒಟ್ಟು ಕವಿಯ ಹಂಬಲಕ್ಕೆ ಹಲವು ಸಾಲುಗಳೇ ಸಾಕ್ಷಿ. ಅನಿಲ್ ಗುನ್ನಾಪೂರ ತನ್ನ ಕಾವ್ಯಕ್ಕೆ ಬೇಕಾದ ವಸ್ತುವಿನ ಹುಡುಕಾಟದಲ್ಲಿ ಗೆದ್ದಿರುವುದಕ್ಕೆ ಸಾಕ್ಷಿ ಪುರಾವೆಗಳಿವೆ. 'ಕಾವ್ಯ' ಕವಿಯೇ ಹೇಳಿಕೊಂಡಂತೆ "ಹೊಸ ಹುಮ್ಮಸ್ಸಿನಲ್ಲಿ ಮರು ಜೀವ ಪಡೆದಿದೆ" ಕವಿತೆ ಅಂತರಂಗದ ಕನ್ನಡಿಯಾದರೂ, ಹೊರ ಜಗತ್ತಿಗೆ ಅದು ಅಪರಿಚಿತ, ಏಕೆಂದರೆ ಕವಿ ಭಾವ, ಕವಿ ಸಮಯ, ಕವಿ ಸ್ಫೂರ್ತಿ ಎಲ್ಲಾ ಮನುಷ್ಯರಲ್ಲೂ ಏಕಕಾಲಕ್ಕೆ ಉದ್ಭವವಾಗುತ್ತೆ ಎಂದು ಹೇಳಲಾಗದು. ಇವತ್ತಿನ ಹೊರ ಜಗತ್ತಿನ ತಲ್ಲಣಗಳಲ್ಲಿ ಮನುಷ್ಯ ಜೀವಕ್ಕೆ ಬೆಲೆ ಇಲ್ಲದಾಗಿದೆ. ಮನುಷ್ಯ ದ್ವೇಷದ ಕ್ರೌರ್ಯಕ್ಕೆ ಮಾನವೀಯ ಮನಸ್ಸುಗಳು ತಲ್ಲಣಿಸಿ ಹೋಗಿವೆ. 'ಧರ್ಮ ಸಿದ್ಧಾಂತಗಳೆಲ್ಲ ಲೊಳಲೊಟ್ಟೆ' ('ಮನುಷ್ಯರು ಕಂಡರು') ಎಂಬ ನಿರ್ಧಾರಕ್ಕೆ ಬರುವ ಕವಿತೆ, ಈಗಾಗಲೇ ಆಗಿರುವ ಸಾಮಾಜಿಕ ಅಸಮಾನತೆಯ ಕಾವು ಎಂಥಾದ್ದು ಎಂದು ಪರಿಭಾವಿಸಬೇಕಿದೆ. “ಉರಿಬಿಸಿಲಿನ ಕಾವು ಮಾಯವಾಗಿ / ಚೂರು ತಂಗಾಳಿ ಸೋಕಲಿ ಸಾಕೆನಗೆ" ಎಂಬ ಆಶಯ ದೊಡ್ಡದು. ಅಸಮಾನತೆಯ ಮೇಲುಕೀಳಿನ ಸಮಾಜದಲ್ಲಿ ಸಮಸಮಾಜ ನಿರ್ಮಾಣ, ಮನುಷ್ಯರೆಲ್ಲ ಒಂದು ಎಂಬ ಕಲ್ಪನೆಯ ತುರ್ತನ್ನು ಅನಿಲ್ ಗುನ್ನಾಪೂರ ಅವರಂಥ ಕವಿಗಳು ಹೆಗಲಹೊತ್ತು ಸಾಗಿಸಬೇಕಾಗಿದೆ. ಭಾರತದಂಥ ದೇಶದಲ್ಲಿ ಜಾತಿ, ವರ್ಗ, ವರ್ಣಗಳ ಮೇಲುಕೀಳಿನಲ್ಲಿ ಕಾವ್ಯ ಬೆಳಕಾಗಿ ಮುನ್ನಡೆಯ ಬೇಕಾಗಿದೆ’ ಎಂದು ಬರೆದಿದ್ದಾರೆ.
ಅನಿಲ್ ಗುನ್ನಾಪೂರ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿಯವರು. ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಗುಬ್ಬಚ್ಚಿ ಗೂಡಿನಲ್ಲಿ' ಇವರ ಚೊಚ್ಚಲ ಕವನಸಂಕಲನ. ಈ ಕೃತಿ 2016ರಲ್ಲಿ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡಿದೆ. ಪ್ರಜಾವಾಣಿ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಇವರ ಕಥೆ- ಕವಿತೆಗಳು ಪ್ರಕಟವಾಗಿವೆ. 2018 ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆಯಲ್ಲಿ ಇವರ ಕವಿತೆಗೆ ಮೂರನೇ ಬಹುಮಾನ ಲಭಿಸಿದೆ. 'ಕಲ್ಲು ಹೂವಿನ ನೆರಳು' ಇವರ ಚೊಚ್ಚಲ ಕಥಾಸಂಕಲನ. ...
READ MORE