ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸುವವರಿಗೆ ಅನುಕೂಲವಾಗಲೆಂದು ರಚಿಸಲಾದ ಈ ಕೃತಿ, ಕ್ರಿ. ಶ.1850ರಿಂದ 1920ರವರೆಗಿನ ಲೇಖಕರ ಬದುಕಿನ ವಿವರಗಳನ್ನು ನೀಡುತ್ತದೆ. ವೆಂಕಟೇಶ ಸಾಂಗಲಿ ಬಹು ಶ್ರಮಪಟ್ಟು ಬರಹಗಾರರ ಇತ್ಯೋಪರಿಗಳನ್ನು ಕಲೆಹಾಕಿದ್ದಾರೆ. ಆರ್ ನರಸಿಂಹಾಚಾರ್ಯರ ’ಕರ್ನಾಟಕ ಕವಿಚರಿತ್ರೆ’ ನಂತರ ಇಂತಹ ಸಾಹಸಕ್ಕೆ ಮುಂದಾದವರು ಸಾಂಗಲಿ.
ಅಕಾರಾದಿಯಾಗಿ ಕರ್ನಾಟಕದ ಲೇಖಕ ಸಮುದಾಯದ ವಿವರಗಳನ್ನು ನೀಡಲಾಗಿದೆ. ಜೊತೆಗೆ ಪುಸ್ತಕಗಳನ್ನು ಆಧರಿಸಿ ಅವಲೋಕನ ನಡೆಸುವವರಿಗೆ ಅನುಕೂಲವಾಗುವಂತೆಯೂ ವರ್ಗಿಕರಣ ಮಾಡಲಾಗಿದೆ. ಲೇಖಕರ ವಿವರಗಳನ್ನು ಗಮನಿಸಿದರೆ ಅಚ್ಚರಿಯಾಗುವಂತಹ ಅಂಶಗಳು ಗೋಚರಿಸುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ್, ಎ.ಆರ್. ಕೃಷ್ಣಶಾಸ್ತ್ರಿ, ಫ. ಗು. ಹಳಕಟ್ಟಿ, ನಂಜನಗೂಡು ತಿರುಮಲಾಂಬ, ತಳುಕಿನ ವೆಂಕಣ್ಣಯ್ಯ, ಶಿಶುನಾಳ ಶರೀಫ ಸಾಹೇಬ, ಕಡೆಂಗೋಡ್ಲು ಶಂಕರಭಟ್ಟ ಮುಂತಾದ ದಿಗ್ಗಜರ ಬದುಕಿನ ವಿವರಗಳನ್ನು ನೀಡುತ್ತದೆ. ಅಲ್ಲದೆ ಚಿಕ್ಕ ಪುಟ್ಟ ಪುಸ್ತಕ ಬರೆದವರನ್ನು ಕೂಡ ನಿರ್ಲಕ್ಷಿಸಿಲ್ಲ ಎನ್ನುವುದು ಮಹತ್ವದ ಸಂಗತಿ.