ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ‘ಗಾಂಧೀ ಸ್ಮರಣೆ’. ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರ ಕವನ ಸಂಕಲನ. ಈ ಕೃತಿಗೆ ಪಿ. ಲಂಕೇಶ್ ಹಿನ್ನುಡಿ ಬರೆದಿದ್ದಾರೆ. ಕೃತಿಯ ಬಗ್ಗೆ ಬರೆಯುತ್ತಾ 'ಕಳೆದ ಎರಡು ವರ್ಷಗಳ ಮೌನದಲ್ಲಿ, ಸಾರ್ವತ್ರಿಕ ಸ್ಮಶಾನ ಮೌನದಲ್ಲಿ, ಪಾಟೀಲರ ಒಂದೇ ಒಂದು ಧ್ವನಿ ಎಲ್ಲರಿಗೂ ತಾಗುವ ನೈತಿಕ ಹಾಗೂ ಕಲಾತ್ಮಕ ಗುಣ ಪಡೆದಿವೆ' ಎನ್ನುತ್ತಾರೆ.
ಇಲ್ಲಿಯ ಕವಿತೆಗಳಲ್ಲಿ ಅಂಥದ್ದೊಂದು ಸಮುದಾಯದ ಪ್ರಜ್ಞೆ ಇದೆ. ಈ ಸಂಕಲನದಲ್ಲಿ ಅತ್ಯಂತ ಆತ್ಮೀಯ ಸಂಬಂಧಗಳ, ನಾನು-ನೀನಿನ ಅನೇಕ ಕವನಗಳಿವೆ. ಸಾಮಾಜಿಕ ಎನ್ನಬಹುದಾದ ಕವನಗಳು ಮತ್ತು ವೈಯಕ್ತಿಕ ಕವನಗಳೂ ಅಷ್ಟೇ ಮುಖ್ಯ ಎನ್ನುತ್ತಾರೆ ಚಂಪಾ.
ಈ ಸಂಕಲನವು ಮೊದಲ ಬಾರಿಗೆ 1976ರಲ್ಲಿ ಬೆಂಗಳೂರಿನ ಮುಂಗಾರು ಪ್ರಕಾಶನದಿಂದ ಪ್ರಕಟವಾಗಿತ್ತು. ಮೊದಲ ಸಂಕಲನಕ್ಕೆ ಮೂರ್ತಿ ಅವರ ಚಿತ್ರ ಹಾಗೂ ರಾ. ಸೂರಿ ಅವರ ಅಕ್ಷರಗಳನ್ನು ಬಳಸಲಾಗಿತ್ತು.
ಗಾಂಧೀಸ್ಮರಣೆ’ಗೆ ಮೊದಲು ಮಾತುಗಳಲ್ಲಿ ಕವಿ ಚಂಪಾ ಅವರು ’ಸಂಕಲನದ ಕವನಗಳ ಬಗ್ಗೆ ನಾನೇನು ಹೇಳುವುದು? ಒಂದು ಹೆದರಿಕೆ ಮಾತ್ರ ಇದೆ: ಇಂಥ ಕವನಗಳು ನಮ್ಮ ಅಕ್ಷರ ಪ್ರಪಂಚದಲ್ಲಿ ’ಐತಿಹಾಸಿಕ ದಾಖಲೆ’ಗಳಾಗಿ ಮಾತ್ರ ಉಳಿದು, ಕ್ರಿಯಾರೂಪದ ವಾಸ್ತವ ಪ್ರಪಂಚದ ಇತಿಹಾಸ ಮಾತ್ರ ಕಿಂಚಿತ್ತಾದರೂ ಇವುಗಳಿಂದ ಬದಲಾಗಬಹುದೇ? ಅಂತ. ಬಹುಶಃ ಈ ಪ್ರಶ್ನೆಗೆ ಉತ್ತರವನ್ನು ನಾವು-ನೀವು ಬರಹವನ್ನೊಳಗೊಂಡ, ಆದರೆ ಬರಹವನ್ನು ಮೀರಿದ ನಮ್ಮ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಕಂಡುಕೊಳ್ಳಬೇಕೇನೋ. ಸಾಹಿತ್ಯ ಬದುಕಿಗೆ ಹತ್ತಿರವಾಗುವುದು, ಬದುಕಿನ ಅವಿಭಾಜ್ಯ ಅಂಗವಾಗುವುದು ಈ ಅರ್ಥದಲ್ಲಿಯೇ. ಅಂಥದೊಂದು ಪರ್ವ ಈಗ ಬಂದಿದೆ. ನಾವು ಭವಿಷ್ಯದ ಇತಿಹಾಸಕಾರರ ನಿರ್ಣಾಯಕ ಮಾತುಗಳ ಸಲುವಾಗಿ ಅಲ್ಲ; ನಮ್ಮ ನಮ್ಮ ಸಾರ್ಥಕ ಅಸ್ತಿತ್ವದ ಸ್ವಾರ್ಥಕ್ಕಾಗಿ ನಮ್ಮ ವರ್ತಮಾನವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಬರೆದಿದ್ದರು.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE