‘ಎಲ್ಲಿ ಹೋದಳು ಈಕೆ’ ಕೃತಿಯು ಗುಂಡಣ್ಣ ಕಲಬುರ್ಗಿ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ವ್ಯಾವಹಾರಿಕ ಸಂಬಂಧಗಳು ಬಲಗೊಳ್ಳುತ್ತಾ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವುದನ್ನು ತಡೆಯುವುದು ಅನಿವಾರ್ಯವೆಂಬ ಎಚ್ಚರಿಕೆಯನ್ನು ಲೇಖಕರು ತಮ್ಮ ಕವನಗಳಲ್ಲಿ ನೀಡಿದ್ದಾರೆ. ಬೆಳಗು ಜಗದ ಕತ್ತಲನ್ನು ಕರಗಿಸದಿರುವ ಪರಿಣಾಮದಿಂದ ಹಿರಿಯರು ಹೆಜ್ಜೆ ಇಟ್ಟ ಹೆದ್ದಾರಿ ಇಂದು ತಿರುವು ಪಡೆದು ಹಿಂಸಾಮಾರ್ಗಗಳಾಗಿ ಕವಲೊಡೆದು ಬದಲಾಗಿರುವುದಕ್ಕೆ ಕವಿಮನ ತಲ್ಲಣಿಸಿದೆ. ಧರ್ಮದ ಹುಟ್ಟಿನ ಉದ್ದೇಶ ಭಾವನೆಗಳನ್ನು ಬೆಸೆದು ಆತ್ಮ ಪರಮಾತ್ಮರ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ, ಆದರೆ ಪ್ರಸ್ತುತ ಪರಿಸರದಲ್ಲಿ ಧರ್ಮವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಭಾವನೆಗಳನ್ನು ಭಿನ್ನಗೊಳಿಸುತ್ತಿರುವ ಅವ್ಯವಸ್ಥೆಯನ್ನು ವಿಡಂಬಿಸುವ ಆಶಯ ಹೊಂದಿರುವ ಕವನಗಳು ಈ ಸಂಕಲನದ ಪೂರ್ವಾರ್ಧದಲ್ಲಿ ಪ್ರಮುಖವಾಗಿವೆ. ಹನ್ನೆರಡನೇ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಜೀವಾಳವನ್ನಾಗಿಸಿಕೊಂಡು ಸಾಮಾಜಿಕ ಕ್ರಾಂತಿ ಮಾಡಿದ ಬಸವ ತತ್ವಗಳು ಸ್ವಾರ್ಥಿಗಳಿಂದ ಬದಲಾಗಿ ಸಾಮಾಜಿಕ ಭ್ರಾಂತಿಗಾಗಿ ಬಳಕೆಯಾಗುತ್ತಿರುವುದನ್ನು ಕವಿ ಕಂಡರಿಸುವುದು ಹೀಗೆ: `ನಿನ್ನ ಸುತ್ತ ನೀರು ನಿಲ್ಲಿಸಿದ್ದು ನಿರ್ಮಲತೆಗೆ ಧಕ್ಕೆ ಮಾಡಿದ್ದು – ಸ್ಥಾವರಗಳ ಹಾವಳಿ ಕಂಡು ಕರ್ಮಪಿಂಡದ ವಾಸನೆ ನೋಡಿ ಬೇಸರ ಬಂತು ಬಸವಾ ಬೇಸರ ಬಂತು!‘ ದೀಪವಾಗಿ ಬೆಳಗಿದ ಬಸವಣ್ಣನ ವಿಚಾರಗಳನ್ನು ದ್ವೀಪವನ್ನಾಗಿಸುತ್ತಿರುವವರನ್ನು ಎಚ್ಚರಿಸುವ `ಬೇಸರವಿದೆ ಬಸವಾ‘ ಕವನದ ಪ್ರತಿಯೊಂದು ಸಾಲು ಧರ್ಮ ರಕ್ಷಣೆಗಾಗಿ ಬಟ್ಟೆ ಬದಲಾಯಿಸಿಕೊಂಡು ಭಕ್ತಾದಿಗಳ ಗುಂಪು ಕಟ್ಟುತ್ತಿರುವ ಮನಕ್ಕೆ ಕನ್ನಡಿ ಹಿಡಿಯುತ್ತಾ ಮುಂದುವರಿಯುತ್ತವೆ. ವಚನಕಾರರ ವಾಣಿ ಇಂದು `ಭಯವೇ ಧರ್ಮದ ಮೂಲ‘ ಎಂದು ಬದಲಾಗಿ ಹಿಂಸಾತ್ಮಕ ಮಾರ್ಗದ ಮೂಲಕ ಧರ್ಮದ ರಕ್ಷಣೆ ನಡೆಯುತ್ತಿರುವುದನ್ನು ಮತ್ತು ಎಲ್ಲೆಡೆಯೂ ಗೋಮುಖ ವ್ಯಾಘ್ರರೇ ಹೆಚ್ಚಾಗುತ್ತಾ ಕ್ರೌರ್ಯ ಜಗತ್ತನ್ನು ಆಳುತ್ತಿರುವುದನ್ನು ಕವಿ ಖಂಡಿಸುತ್ತಾ ಅದರ ದರ್ಶನವನ್ನು ಹೀಗೆ ಮಾಡಿಸುತ್ತಾರೆ. `ಎದೆಹಾಲ ಕುಡಿಸಿದ ಹಡೆದವ್ವನ ಕೊಲ್ಲುತಾರ / ಹಡೆದ ಕುಡಿಯ ಕೊಲ್ಲುತಾರ, ಕಳ್ಳ ಹರಿದು ಚೆಲ್ಲುತಾರ‘ ಹೀಗೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಲೇಖಕ, ಕವಿ ಗುಂಡಣ್ಣ ಕಲಬುರ್ಗಿ ಅವರು ಮೂಲತಃ ಕಲಬುರ್ಗಿಯವರು. ಎಂಎ ಹಾಗೂ ಪಿ.ಎಚ್.ಡಿ ಪದವೀಧರರು. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಎಲ್ಲಿ ಹೋದಳು ಈಕೆ (ಕವನ ಸಂಕಲನ) ...
READ MORE