ಲೇಖಕಿ ಎಂ.ಆರ್. ಭಗವತಿ ಅವರ ಕವನಗಳ ಸಂಕಲನ-ಏಕಾಂತದ ಮಳೆ. ಒಟ್ಟು 40 ಕವನಗಳಿವೆ. ಗೇಟಿನ ಸದ್ದು, ಮುನ್ನಿಗೆ ಕನಸು ಬಿತ್ತು, ಪ್ರಾಪ್ತಿ, ಕೆಂಪು ಹೂ, ಪಟಾಕಿಯ ಜೀವನ, ಹಕ್ಕಿಗೂಡು, ನಗುವ ಮನಸ್ಸಿನ ಹಿಂದೆ, ಏಕಾಂತದ ಮಳೆ ಹೀಗೆ ವಸ್ತುವೈವಿಧ್ಯತೆ, ಪರಿಣಾಮಕಾರಿ ಶೈಲಿಯಿಂದ ಕಂಗೊಳಿಸುತ್ತವೆ.
ನೆನೆದ ಭಾವದ ಮಾತು
“ಏಕಾಂತದ ಮಳೆ” ಶ್ರೀಮತಿ ಎಂ.ಆರ್. ಭಗವತಿಯವರ ಚೊಚ್ಚಲ ಕವನ ಸಂಕಲನ. ಎರಡು ಶತಮಾನಗಳ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಈ ಸಂಕಲನ ಪ್ರಕಟವಾಗುತ್ತಿದೆ. ಒಂದು ಶತಮಾನದ ಅಂತ್ಯ ಹಾಗೂ ಇನ್ನೊಂದು ಶತಮಾನದ ಆದಿ ಎಂಬುದು ಮನುಷ್ಯನ ಕಾಲಗಣನೆಯ ಒಂದು ತಾಂತ್ರಿಕ ಗ್ರಹಿಕೆ ಮಾತ್ರ. ಆದರೆ ಕಾಲದ ನಿರಂತರತೆಯಲ್ಲಿ ಇವೆಲ್ಲ ಅಸೀಮ ಆಗು ಹೋಗುಗಳು. ಈ ಒಂದು ಅನುಭವವನ್ನೇ ಅಲ್ಲಮ ತನ್ನೊಂದು ವಚನದಲ್ಲಿ ಸುಂದರವಾಗಿ ಹೇಳಿದ್ದಾನೆ. ಹಿಂದಣ ಅನಂತವನೂ ಮುಂದಣ ಅನಂತವನೂ ಒಂದು ದಿನ ಒಳಕೊಂಡಿತ್ತು ನೋಡಾ ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ? ಯಾವ ಒಂದು ದಿನ ಅಥವಾ ಒಂದು ಕ್ಷಣ ವ್ಯಕ್ತಿಯ ಅನುಭವದ ಅನನ್ಯತೆಯಲ್ಲಿ ಮಾತಾಗುತ್ತದೆಯೋ ಅರ್ಥಾತ್ ಸೃಜನಶೀಲವಾಗುತ್ತದೆಯೋ ಅದು ನಿರಂತರತೆಯ ಗತಿಶೀಲತೆಯಲ್ಲಿ ನೆಲದ ಮರೆಯ ನಿದಾನವಾಗುತ್ತದೆ. ನಿಧಾನವೆನ್ನುವುದು ಎಲ್ಲರಿಗು ಸಿಕ್ಕುವುದಲ್ಲ. ಅದನ್ನು ದಕ್ಕಿಸಿಕೊಳ್ಳಬೇಕಾದರೆ ಅಗೆಯಬಲ್ಲ ಬಗೆಬೇಕು. ಬಗೆಯಲ್ಲಿ ತುಂಬಿ ಶ್ರಮ ಬೆಳಗಬೇಕು. ಈ ಬೆಳಗು ಮಾತ್ರ ನಿಕ್ಷೇಪವನ್ನು ಹೊಳೆಯಿಸುತ್ತದೆ. ಕಾವ್ಯವೆಂಬುದು ಕಾಲದ ನಿರಂತರತೆಯಲ್ಲಿ ಒಂದು ದಿನವನೊಳಕೊಂಡ ನೆಲದ ಮರೆಯ ನಿದಾನ. ಈ ನಿದಾನವನ್ನು ಅಗೆಯುವ ಬಗೆ ಶೋಧಕರು ಓದುಗರು, ಇಂಥ ಬಗೆಯುವ ಅಗೆಯುವ ಪ್ರಕ್ರಿಯೆಯಲ್ಲಿ ನಿರಂತರತೆಯ ನಿತ್ಯ ಹೊಸದು ಹೊಸದು ಆಗುತ್ತದೆ. ಕಾಲದ ನಿರಂತರತೆಯಲ್ಲಿ ಕ್ಷಣ ನಿಧಾನವಾಗುವ ನಿದಾನ ನಿಕ್ಷೇಪವಾಘುವ ಮಹಾಂತನ ಮಾತಿನ ಸಂಸ್ಕೃತಿಯ ಈ ನಿತ್ಯವಿಧಿಯನ್ನು ಬೇಂದ್ರೆ ಹೀಗೆ ಹೇಳಿದ್ದಾರೆ. ಕಾವ್ಯವನ್ನು ಹೊಸದು ಹೊಸದು ಹೊಸದು ಏನು ಆತು ಧ್ಯಾನ ಮಾಡು ಕೂತು ದಿನಾ ರಾತ್ರಿ ಕಾಲದ ನಿರಂತರತೆಯ ಗತಿಶೀಲತೆಯಲ್ಲಿ ತನ್ನ ಅನುಭವವನ್ನು ಅನನ್ಯವಾಗಿಸುವ ನಿಕ್ಷೇಪವಾಗಿಸುವ ಕಾವ್ಯಕರ್ಮದಲ್ಲಿ ತೊಡಗಿಕೊಂಡಿರುವ ಶ್ರೀಮತಿ ಭಗವತಿಯವರ ಏಕಾಂತದ ಮಳೆ ಓದಿದಂತೆ ಮನಸ್ಸನ್ನು ಆರ್ದ್ರಗೊಳಿಸುವ ಆವರಿಸುವ ಕಾವ್ಯ. ಮಳೆ ಮತ್ತು ಕನಸು ಈ ಕವಯತ್ರಿಯ ಸಂವೇದನೆಯ ಜೀವದ್ರವ್ಯಗಳು. ಮಳೆ ನೆನಪಿನ ರೂಪಕವಾಗಿ ಸಮೃದ್ಧಿಯ ಅಪೇಕ್ಷೇಯಾಗಿ, ನೋವಿನ ಆರ್ದ್ರತೆಯಲ್ಲಿ ಅಂತಃಕರಣವನ್ನು ತಣಿಸುವ ಜಲವಾಗಿ, ಹುಟ್ಟುಸಾವಿನ ನಡುವಿನ ಜೀವ ತೊಟ್ಟಿಲಾಗಿ ಸಂಕೀರ್ಣಭಾವದಲ್ಲಿ ಇವರ ಕಾವ್ಯದ ಲಯದಲ್ಲಿ ನಾದವಾಗಿದೆ. ಹಾಗೆಯೇ ಕನಸು, ಕಳೆದುಕೊಂಡದ್ದರ ನೆಲೆಯಲ್ಲಿ ಪಡೆದುಕೊಳ್ಳಬೇಕಾಗಿರುವ ಪರ್ಯಾಯವಾಗಿ ಜೀವನ ಪ್ರೀತಿಯಾಗಿ ನಿರೀಕ್ಷೆಯ ನೆಲವಾಗಿ ಪ್ರಜ್ಞೆಯ ಪಾತಳಿಯಾಗಿ ಕಾವ್ಯದ ಉಸಿರಾಗಿದೆ. “ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು.ಆದರೆ ಕನಸುಗಳಿಲ್ಲದ ಬದುಕಿನಲ್ಲಿ?” ನಮ್ಮ ಕೌಟುಂಬಿಕ ಸಾಮಾಜಿಕ ಸಂರಚನೆಗಳು. ಎಷ್ಟೋ ಸಾರಿ ಕ್ರಿಯಾಶೀಲತೆಯನ್ನು ಕೊಲ್ಲುವ ಕಟುಬಂಧನಗಳಾಗಬಹುದು. ನಿಜವಾದ ಸೃಜನಶೀಲ ಮನಸ್ಸು ಇಂಥ ಸಂಕೋಲೆಗಳ ನಡುವೆಯೇ ಸೆಣಸುತ್ತಾ ಬಿಡುಗಡೆಗೆ ತುಡಿಯುತ್ತೆ. ಪ್ರತಿಬಂಧಕ ಸವಾಲುಗಳೇ ಸೃಜನಕ್ರಿಯೆಯ ಪ್ರಚೋದಕ ನೆಲೆಗಳಾಗುತ್ತವೆ. ಏಕಾಂತದ ಮಳೆಯ ಹಲವು ರಚನೆಗಳ ಆಳದಲ್ಲಿ ಈ ನಿರ್ಬಂಧಗಳು ನೀಡುವ ಸಂಕಟ ಅವುಗಳನ್ನು ಗೆಲ್ಲುವ ಛಲಗಳ ಮುಖಾಮುಖಿತ್ವವಿದೆ. ಕಾದ ಬಿಸಿಲಿನಲ್ಲಿ ಮೆರವಣಿಗೆ ಹೊರಟವು ಮಾತುಗಳು ರಾತ್ರಿಯಲಿ ನೆರೆದ ದೀಪಗಲೆಲ್ಲ ಆರಿ ಹೋದವು ಮೌನವುಳಿವುದು ಭಾಷೆಯ ಜೀವಂತಿಕೆಯಾಗಿ ಇರುವಿಕೆಯ ಸ್ಪಷ್ಟ ಸಾಕ್ಷಿಯಾಗಿ ಹೃದಯದ ಅನುಭವಕ್ಕೆ ಯಾವ ಮಾಧ್ಯಮವೂ ಪರಿಪೂರ್ಣ ಸಂಕೆತ ಶಕ್ತಿಯಾಗಲಾರದು; ಅರ್ಥರೂಪಿಗಳಾಗಬಹುದು ಅಷ್ಟೆ. ಮಾಧ್ಯಮ ಭಾಷಾಂತರವಾಗಬಹುದೇ ಹೊರತು ಭಾವನೆಯೇ ಆಗಲಾರದು. ಭಾಷೆಗಿರುವ ಶಕ್ತಿ ಎಷ್ಟು ಕಡುಪಾದದ್ದೊ ಅದರ ಮಿತಿಕೂಡ ಅಷ್ಟೇ ಅಳ್ಳಕವಾದದ್ದು. ಅಂತೆಯೇ ಅಂತರಂಗದ ಒಳಗನ್ನೆಲ್ಲ ಆಕೃತಿಯಾಗಿ ಅಭಿವ್ಯಕ್ತಿಸುವುದೆಂದರೆ ಕಣ್ಣು ಮುಚ್ಚಿ ಅಳು ಬರಿಸಿಕೊಂಡ ಹಾಗೆ ಹೃದಯದ ಮಾತನ್ನು ಕಣ್ಣಲ್ಲಿ ಭಾಷಾಂತರ ಮಾಡಿದರೆ ಅದು ಯಾವ ಭಾಷೆ ? (ಯಾವ ಭಾಷೆ) ಭಾಷೆಯ ಶಕ್ತಿಸಾಧ್ಯತೆ ಮತ್ತು ಮಿತಿವೈಫಲ್ಯಗಳ ಸೂಕ್ಷ್ಮಗಳನ್ನು ಬಲ್ಲವರು ಈ ಕವಯಿತ್ರಿ. ರೂಪ ರಸ ಗಂಧಕ್ಕೆ ಮೀರಿದ ಅಮೂರ್ತಾನುಭವ ಕೊಡುವ ಆಪ್ತತೆಯ ಅರಿವೂ ಇವರಿಗಿದೆ. ಅಂಥ ಅನುಭವವನ್ನು ಕಟ್ಟಿಕೊಡುವಾಗಲೂ ರೂಪರಸಗಂಧ ನಿಷ್ಠ ನೆಲೆಯಲ್ಲೇ ಭಾಷೆಯನ್ನು ಫಲಿಸಿಕೊಳ್ಳುವ ಗೆಯ್ಮೆ ಇವರದು. ನಿಯತ ಲಯಗತಿಗೆ ಬೆದರಿ ಕೂತ ಹುಡುಗಿಯ ಮೈಯಲ್ಲಿ ಮಳೆಯ ಪುಳಕ ಬೇರು ಬೇರಿಗೂ ಹೊಸ ಚಿಗುರು; ಹೊಸ ಹೂವು ಹೊಸ ಗಂಧ ಗಾಳಿಯ ಆವಿ ಪಟ್ಟಕ್ಕೆ ಕೂತ ಮಾತುಗಳಲ್ಲೀಗ ವಿರಹ ಮೈಯಲ್ಲಿ ಮಳೆಯ ಪುಳಕಾನುಭವದ ಸ್ತರದಲ್ಲಿ ಕೂತ ಹುಡುಗಿಯ ಅನುಭವವನ್ನು ಹೇಳುತ್ತಾ ಬೆಳೆವ ಮಾತು, ಹೊಸ ಗಂಧಗಾಳಿಯ ಆವಿಮಾತಿನಲ್ಲಿ ಕರಗಿ ವಿರಹದ ಪರಿಯಲ್ಲಿ ಬಳಲುವ ಬಗೆಯನ್ನು ಶಬ್ದಸೂತಕವಾಗದ ರೀತಿಯಲ್ಲಿ ಹೇಳಿರುವ ಸೊಗಸು ಅನುಭವಿಸಿದಷ್ಟೂ ಆಳಕ್ಕೆ ಇಳಿಯುವ ಅನುಭಾವಿಕ ದ್ರವ್ಯ. ಬದುಕನ್ನು ನೇತ್ಯಾತ್ಮಕವಾಗಿ ಕಾಣುವ ಹುಣ್ಣಿನ ಭಾವದ ಕಣ್ಣಲ್ಲ. ಈ ಕವಯಿತ್ರಿಯದು, ನೋವಿನಾಳದಲ್ಲೂ ಪ್ರೀತಿಯ ಸೆಲೆ ಹುಡುಕುವ ಛಲ, ನೋವಿಗೆ ಮುಖಾಮುಖಿಯಾಗುತ್ತಲೇ ಅದನ್ನು ಮೌನದಲ್ಲಿ ಎದುರಿಸುತ್ತಾ, ಏಕಾಂತದಲ್ಲೇ ಅದರೆಲ್ಲ ಒಳಸುಳಿಗಳ ಸಂಕಟಗಳನ್ನು ನುಂಗುತ್ತಾ ವಿಷಕಂಠ ಪ್ರಜ್ಞೆಯಲ್ಲಿ ಶಿವಮಯವಾಗುವ ಶಕ್ತಿಸ್ವರೂಪಿಯೆ ಮಾಗಿದ ಗುಣ ಇದು. ಈ ಕಾರಣದಿಂದಲೇ ಇಲ್ಲಿಯ ಮಾತಿನ ರೀತಿ ಗುಂಪನ್ನು ಉದ್ದೇಶಿಸುವ ಏರುದನಿಯಾಗದೆ ತನ್ನೊಳಗನ್ನು ತಾನೇ ಶೋಧಿಸಿಕೊಳ್ಳುವ ಪಿಸುಮಾತಿನ ದೃಢ ನಿಲುವಿನ ಗಂಭೀರ ಧ್ವನಿಯಾಗಿದೆ. ವಿಚಾರದ ತಿಳಿವು ಹಾಗೂ ಅಂತಃಕರಣದ ಆರ್ದ್ರತೆಯಿದ್ದಾಗ ಮಾತ್ರ ಮಾತಿಗೆ ಈ ದೃಢತೆ ಸಾಧ್ಯವಾಗುತ್ತದೆ. ನಿನಗೆ ನನ್ನ ಮೌನ ಅರ್ಥವಾಗದಿದ್ದರೆ ನನ್ನ ಮಾತೂ ಅರ್ಥವಾಗುವುದಿಲ್ಲ (ಭಾವ ಸಂವಾದ) ಮಾತು ಕಣ್ಣೊಳಗೇ ಇಳಿದಾ ಶಬ್ದವೇಕೆ ತಳಮಳದ ಮಾತು ಮೌನದ ತಂಗಾಳಿ ಮಾತು ಮೇಲ್ನೋಟ ಮೌನ ಒಳತೋಟಿ ಮುಗಿಲ ಮಿಂಚಿಗೇ ಕಣ್ಣ ಹೊಡೆಯಿತು ಮೌನ, ಮಾತು ಏತಕೆ? ಗತ್ತಿನ ಮಾತ ಹೆಡಿಗೆ ಮುರಿವುದು ಮೌನ ಹುರುಪಿನಲಿ ಮಾತು ಹುದುಗಿತು ಮೌನದಲಿ, ಎಲ್ಲ ಗೆದ್ದ ಮೌನ ಬಿರಿಯಿತು ಮಾತಿನಲಿ. (ಮಾತು ಮಾತಲ್ಲ) ಇಂಥ ಮಾತು ಮೌನಗಳ ಸಹಯೋಗದ ಸಂವೇದನೆಯಲ್ಲಿ ಮರದೊಳಗಣ ಮಂದಾಗ್ನಿಯ ಗುಣವಿರುತ್ತದೆ. ಈ ಮಂದಾಗ್ನಿ ಮರವನ್ನು ಸುಡುವ ಕಿಚ್ಚಲ್ಲ; ಚಿಗುರು ಹೂ ಹಣ್ಣುಗಳ ಸುಟ್ಟು ಬಾಳಿಗೆ ಹೊಸ ಹುಟ್ಟನ್ನು ಕೊಡುವ ಜೀವಾಗ್ನಿ. ಈ ಜೀವಾಗ್ನಿ ಗುಣದ ಭಾಷೆ ಏಕಾಂತದ ಮಳೆಯ ಭಾಷೆ. ಶಬ್ದಾರ್ಥದ ಅಬ್ಬರ ಹುಡುಕುವ ಶಬ್ದವೇದಿಗಳಿಗೆ ಇಲ್ಲಿ ಸಂತಾನ ಯೋಗವಿಲ್ಲ. ರೂಪಕ ಧಾತುವಿನ ಸಂಲಗ್ನದಲ್ಲಿ ಸಂವಾದಿಸಬಲ್ಲ ಪ್ರಜ್ಞಾಜೀವಿಗೆ ಇದು ಅಲ್ಲಮನ ಬಯಲು. ಗೇಟಿಗೆ ಮೂಗು ತುರಿಸಿದ ಶ್ವಾನದ ನೋಟಕ್ಕೆ ಕರುಳ ಹಿಡಿದಂತೆ ಕಸಿವಿಸಿ ಹಕ್ಕ ಕಿತ್ತುಕೊಂಡಂತೆ ಅದರ ಕಣ್ಣ ನೋವಿಗೆ ಸಾಕ್ಷಿಯಾಗದ ಯೋಚನೆಗಳು ಆಳುತ್ತವೆ ಮುಸಿ ಮುಸಿ ನಾಲಿಗೆ ಹೊರಚಾಚಿದ ಬೇಡಿಕೆಗೆ ತವಕಗೊಳ್ಳುತ್ತಾ ಕೂರುತ್ತೇನೆ ಬರೆಯಲಾರದೆ ಮುಚ್ಚಿಟ್ಟು. (ಸಾಕ್ಷಿ) ಹೊರನೋಟಕ್ಕೆ ಕೇವಲ ಒಂದು ಚಿತ್ರ ಸಂಗತಿಯಾಗಿ ಕಾಣುತ್ತದೆ ಈ ಪದ್ಯ. ಆದರೆ ಅದರ ಒಳಗನ್ನು ಪರಿಭಾವಿಸಿದಂತೆ ಚಿತ್ರದ ಶಾಬ್ದಿಕ ಆಕೃತಿ ಮರೆಯಾಗಿ ಪದಪದವೂ ರೂಪಕವಾಗುತ್ತವೆ. ಅನುಭವ ಮತ್ತು ಅಭಿವ್ಯಕ್ತಿಗಳ ನಡುವಿನ ತವಕ ತಲ್ಲಣಗಳನ್ನು ವಾಸ್ತವ ಮತ್ತು ನಿರೀಕ್ಷೆಗಳ ನಡುವಿನ ಮಾತಿನಾಚೆಗಿನ ಮೌನರೋಧನವನ್ನು ಗಾಢತರವಾಗಿ ತುಂಬಿ ಕೊಡುತ್ತವೆ. ಇಲ್ಲಿ ಪ್ರಸ್ತಾಪಿಸಲೇ ಬೇಕಾದ ಇನ್ನೊಂದು ಅಂಶವಿದೆ. ಮಳೆ ಮತ್ತು ಕನಸುಗಳು ಹೇಗೆ ಇಲ್ಲಿಯೆ ಬಹುತೇಕ ಕವನಗಳ ಲಯಗತಿಗಳಾಗಿವೆಯೋ ಹಾಗೆಯೇ ಸಾವು. ಇಲ್ಲಿ ಮತ್ತೊಮ್ಮೆ ಕಾಲದ ನಿರಂತರತೆಯನ್ನು ಕುರಿತ ಅಲ್ಲಮನ ಗ್ರಹಿಕೆಯನ್ನು ಸ್ಮರಿಸ ಬಯಸುತ್ತೇನೆ. ಹಿಂದಣ ಅನಂತವನ್ನೂ ಮುಂದಣ ಅನಂತವನೂ ಒಂದು ದಿನ ಒಳಕೊಂಡ ಕಾಲದ ನಿರಂತರತೆಯನ್ನು ಪರಿಭಾವಿಸಿರುವ ಅಲ್ಲಮನ ಕಾಲಪ್ರಜ್ಞೆ ಹುಟ್ಟು ಸಾವಿನ ಎರಡು ತುದಿಗಳಲ್ಲಿ ನಿತ್ಯವಾಗಿರುವ ಬದುಕಿನ ನಿರಂತರತೆಯ ಧ್ಯಾನವೇ ಆಗಿದೆ. ಈ ಧ್ಯಾನ ಹಿಂದು ಮುಂದಣಗಳನ್ನು ಸಂಗತಗೊಳಿಸಿರುವ ದ್ರವ್ಯ. ಹುಟ್ಟನ್ನು ಸಂತೊಷಿಸುವ ಮನಸ್ಸು ಸಾವಿಗೆ ಸಂತಾಪಿಸುತ್ತದೆ. ಸಂತೋಷ ಸಂತಾಪಗಳ ಈ ದ್ವಂದ್ವ ಮಾನ ಗುಣವನ್ನು ಸಮವಾಗಿ ಕಾಣುವುದು ಎಲ್ಲರಿಗೂ ಸಾಧ್ಯವಲ್ಲದ ನಡೆ. ಸಾವಿನ ಸೂತಕದಲ್ಲಿ ಸಂತಾಪಗೊಳ್ಳುವ ಈ ಕವಯಿತ್ರಿಯ ಭಾವಸ್ಥಿತಿ ಮತ್ತೆ ಏಕಾಂತದ ಮಳೆಯೇ ಆಗುತ್ತದೆ. ಆತ್ಮೀಯ ಜೀವವೊಂದರ ಸಾವಿನ ನೆನಪಿನಲ್ಲಿ ಹನಿಯೊಡೆದ ಏಕಾಂತದ ಮಳೆ “ಗೇಟಿನ ಸದ್ದು”. ಕವನದಲ್ಲಿ ಗೇಟಿನ ಸದ್ದೇ ರೂಪಕವಾಗಿದೆ. ಗೇಟಿನ ಸದ್ದು ಯಾರೋ ಬರುವ ಹೋಗುವ ಕ್ರಿಯೆಯ ಸಪ್ಪಳಮಾತ್ರವಾಗದೆ, ಆತ್ಮೀಯ ಜೀವವೊಂದರ ಜೀವನ ವಿಧಾನದಲ್ಲಿ, ಕಾಲ ಮತ್ತು ಕ್ರಿಯೆ; ನಡೆ ಮತ್ತು ನಿಯತಿ ವ್ಯಕ್ತಿತ್ವದ ವಿಧಿಗಳಂತೆ ಜೀವ ಪಡೆದಿದ್ದ ಅನುಭವವಾಗಿದೆ. ಇಂದು ಆ ಅನುಭವ ಅನಂತದೊಳಗೆ ಲೀನವಾದ ಜೀವದ ನೆನಪಾಗಿ ನೆನಪು ಗೇಟಿನ ಸದ್ದಿನ ವರ್ತಮಾನದ ಅನಿವಾರ್ಯದಲ್ಲಿ ಮೂರ್ತಗೊಳ್ಳುತ್ತದೆ. ಆದರೆ ಅ ಮೂರ್ತತೆ ವ್ಯಕ್ತಿಯ ಆಕೃತಿಯಾಗದೆ ವ್ಯಕ್ತಿತ್ವದ ಪ್ರಕೃತಿಯಾಗಿ ಹೊರಗಿನ ಸತ್ಯವಾಗದೆ ಒಳಗಿನ ನಿತ್ಯವಾಗಿದೆ. ಧ್ಯಾನದಲ್ಲಿ ನೆನಪು ಭ್ರಮೆಯಾಗುವ, ಭ್ರಮೆ ಜಂಗಮವಾಗುವ ಅನುಭವವನ್ನು ಪದ್ಯ ದ್ವನಿಪೂರ್ಣವಾಗಿ ಕಟ್ಟಿಕೊಟ್ಟಿದೆ. ಸಾವಿನ ನೆನಪು ಸಂಕಟದ ಆಧೀರತೆಯಾಗದೆ, ಕಳೆದದ್ದರ ಹಪಾ ಹಪಿ ಹಂಬಲ ಮಾತ್ರವಾಗದೆ ಜೀವ ಸಂಬಂಧಗಳ ಅರಳುವಿಕೆಯ ಧಾತುಸಂಪನ್ನತೆಯಾಗಿರುವುದು ಮೆಚ್ಚುವ ಅಂಶ. ಮಳೆಯ ನಂತರದ ಉಪಮಳೆಯ ಲಲಿತಗತಿಯಲ್ಲಿ ಸಾವಿನ ನಂತರದ ನೆನಪಿನ ಜೀವನ ಗತಿಯನ್ನು ಕವನ ಸೊಗಸಾಗಿ ವ್ಯಂಜಿಸಿದೆ. ತಮ್ಮ ನಿನ್ನಯ ನೆನಪಿನಲ್ಲಿ ಎಂದೂ ಮುಗಿಯದ ಹಾಡಿದೆ ಹಾಡು ಮುಗಿಯದ ಹಾದಿಯಲ್ಲಿ ನನ್ನ ಪ್ರೀತಿಯು ಮಿಂಚಿದೆ ಅನಂತಕ್ಕೂ ಚಾಚಿಕೊಂಡ ಪ್ರೀತಿಗೆಲ್ಲಿ ಕೊನೆಯಿದೆ? ಹಿಂದಣ ನೆನಪುಗಳನ್ನು ಏಕಾಂತದ ಮಳೆಯಾಗಿಸುವ ಈ ಪ್ರೀತಿಯ ಪಯಣ ಮುಗಿಯುವ ಹಾಡಿನ ಪಿಸುದನಿಯಲ್ಲಿ ಅನಂತದ ಹಾದಿ ತುಳಿದಿದೆ. ಈ ಹಾಡಿನ ದನಿ ವೈಯುಕ್ತಿಕ ಸ್ತರದ ಏಕಾಂತವನ್ನು ದಾಟುವ, ಸಮಷ್ಟಿ ನೆಲೆಯ ಸಮಸ್ಯೆಗಳಿಗೆ ತೆರೆದುಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಆದರೆ ಅಂಥ ಪ್ರಯತ್ನಗಳ ಫಲ ಇನ್ನೂ ನಿರೀಕ್ಷೆಯ ನಿಡಿದಾದ ಹಾದಿಯ ತುದಿಯಲ್ಲಿದೆ ಅನ್ನಿಸುತ್ತಿದೆ. “ಮೂಕದಾರಿಯ ನೆನಪು” ಈ ಹಾದಿಯ ಅಂಥ ಒಂದು ಹಾಡು, ಏಕಾಂತದ ಮಳೆಯಲ್ಲಿ ಲೋಕಾಂತವನ್ನೂ ಗಾಢವಾಗಿ ಒಳಗೊಳ್ಳುವ, ಒಂದು ದಿನವನ್ನೊಳಗೊಂಡು ಮಾತಾಡುವ ಮಹಾಂತರ ಸಾಲಿನಲ್ಲಿ ತಮ್ಮ ಅನನ್ಯತೆಯನ್ನು ನಿಚ್ಚಳವಾಗಿ ಪ್ರಕಾಶಿಸಬಲ್ಲ ಎಲ್ಲ ಸೂಚನೆಗಳನ್ನು ಇಲ್ಲಿಯ ಹಲವಾರು ಕವನಗಳಲ್ಲಿ ಭಗವತಿಯವರು ನೀಡಿದ್ದಾರೆ. ಆಲವಾಗಬೇಕು ಬಿಳಲುಗಳು ಉದ್ದ ಚಾಚಿ ಹರಡಬೇಕು ಹಕ್ಕಿಗೆ ಗೂಡಾಗಬೇಕು ಇರುವೆಯಂತೆ ಬದುಕಬೇಕು ಎತ್ತರಕ್ಕೆ ಏರಬೇಕು ನಾನು ಅಷ್ಟರೊಳಗೆ ಒಂದು ಪುಟ್ಟ ಗಿಡವಾಗಬೇಕು ಹೀಗೆ ಹಿರಿಯಾಸೆಯಲ್ಲಿಯೂ ಕಿರಿದರ ಮಹತ್ವವನ್ನೂ ಕಡೆಗಡಿಸದೆ ನೆಲಾ ಬದುಕನ್ನು ಶ್ರಮದ ಪ್ರೀತಿಯಲ್ಲಿ ಹಾಡ ಹೊರಟಿರುವ ಶ್ರೀಮತಿ ಭಗವತಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನನ್ನ ಈ ನಾಲ್ಕು ಮಾತುಗಳಿಗೆ ಶ್ರೀಮತಿ ಭಗವತಿಯವರ ಅಪೇಕ್ಷೆ ಹಾಗೂ ಅಣ್ಣ ಶ್ರೀನಿವಾಸರಾಜುವಿನ ಒತ್ತಾಯ ಕಾರಣ. ಇವರಿಗೆ ಪ್ರಿಯ ನಮನ.
-ಎಸ್.ಜಿ. ಸಿದ್ಧರಾಮಯ್ಯ (ಕೃತಿಯ ಮುನ್ನುಡಿ)
©2024 Book Brahma Private Limited.