ಖ್ಯಾತ ಲೇಖಕಿ ಕಾದಂಬರಿಕಾರ್ತಿ, ಕವಯತ್ರಿ ವೈದೇಹಿ ಅವರ ಕವನ ಸಂಕಲನ-ದೀಪದೊಳಗಿನ ದೀಪ. ಕಾವ್ಯ ವಸ್ತು, ಶೈಲಿ, ಸಾಮಾಜಿಕ ಹೊಣೆಗಾರಿಕೆ ದೃಷ್ಟಿಯಿಂದ ಇಲ್ಲಿಯ ಕವನಗಳು ಓದುಗರ ಗಮನ ಸೆಳೆಯುತ್ತವೆ.
ಕೃತಿಗೆ ಬೆನ್ನುಡಿ ಬರೆದಿರುವ ಎಚ್.ಎಸ್.ರಾಘವೇಂದ್ರ ರಾವ್ ಅವರು “ವೈದೇಹಿಯವರು ತಮ್ಮ ಕವಿತೆಗಳಲ್ಲಿ 'ಅನುಕ್ತ' ಲೋಕವನ್ನು ಹಂಚಿಕೊಳ್ಳಲು ಆಸಕ್ತರಾಗಿದ್ದಾರೆ. ಅದರ ಜೊತೆಗೆ ಸಹಜವಾದ ನಾದದ ಲಯಗಳ ಜಗತ್ತಿನಲ್ಲಿ ದೊರೆಯುವ ಬಿಡುಗಡೆಯ, ಉಲ್ಲಾಸದ ಸ್ಥಿತಿ ಕೂಡ ಅವರಿಗೆ ಬೇಕೆನಿಸಿದೆ. ವೈದೇಹಿಯವರು ಹೆಣ್ಣುಮಕ್ಕಳ ಪಾಡುಗಳನ್ನು ನೋಡುತ್ತಾ ಅವರದೇ ಹಾಡುಗಳನ್ನು ಕೇಳುತ್ತಾ ಬೆಳೆದವರು. ಅವೆರಡರ ನಡುವಿನ ಪರಸ್ಪರ ಸಂಬಂಧಗಳನ್ನು ಕಂಡುಕೊಳ್ಳಲು ಬಯಸಿದವರು. ಗಮನಿಸಲೇ ಬೇಕಾದ ಮಾತೆಂದರೆ ಇವರು ದಿಟವಾದ ಕವಿ ಕೂಡ ಎನ್ನುವುದು. ಇವರಿಗೆ ಕವಿತೆ ಬರೆಯುವುದು ಕತೆಗಾರ್ತಿಯ ಬಿಡುವಿನ ಹವ್ಯಾಸವಲ್ಲ. ಬದಲಾಗಿ ಅದು ಹೊಸ ಸಾಧ್ಯತೆಗಳ ಹುಡುಕಾಟ, ಈ ಕವಿತೆಯ ಲಕ್ಷಣಗಳ ಹುಡುಕಾಟವು ಕಾವ್ಯದ ಪ್ರಧಾನ ಧಾರೆಯೆಂದು ಕರೆಯಲಾದ ಬರವಣಿಗೆಯಿಂದ ನಮ್ಮನ್ನು ಒಂದಿಷ್ಟು ದೂರ ಕರೆದೊಯ್ಯುತ್ತದೆ. ಅವರದು ವಿಶಿಷ್ಟವಾದ ಕವಿತೆಯ ಒಂದು ನಿರ್ದಿಷ್ಟ ಬಗೆಯೆಂದೂ ನನಗೆ ತೋರುತ್ತದೆ” ಎಂದಿದ್ದಾರೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MOREದೀಪದೊಳಗಿನ ದೀಪ ಕವನ ಸಂಕಲನದ ಕುರಿತು ವೈದೇಹಿ ಮಾತುಗಳು