ಯಶವಂತ ಚಿತ್ತಾಲರ ಇಪ್ಪತ್ತೆರಡು ಕವಿತೆಗಳ ಸಂಕಲನ ’ದಣಪೆಯಾಚೆಯ ಓಣಿ'. ಚಿತ್ತಾಲರು ಈ ಕಾವ್ಯದ ಸಾಲುಗಳನ್ನು ಕವಿತೆಯೆಂದು ಒಪ್ಪದೆ ’ಲಬಸಾ’ (ಲಯಬದ್ದ ಸಾಲುಗಳು) ಎಂದು ಕರೆದಿದ್ದಾರೆ. ಈ ಕವಿತೆಗಳು ಚಿತ್ತಾಲರ ಕಥನಲೋಕದ ಸಾರಸಂಗ್ರಹದಂತಿವೆ.
ಈ ಸಂಕಲನದ ಕುರಿತು ಕವಿ ಜಯಂತ ಕಾಯ್ಕಿಣಿ ಅವರು ’ಬಹುಶಃ ಇದನ್ನು ಕವಿತೆಯೆಂದು ಕರೆಯದೇ ಇರಲು ಚಿತ್ತಾಲರು ತೊಟ್ಟಿರುವ ಹಟ 'ಕವಿತೆ'ಯ ಹೆಸರಿನಲ್ಲಿ ಬರುತ್ತಿರುವ ಹೆಚ್ಚಿನ ರಚನೆಗಳ ಕುರಿತ ಅವರ ನಿಲುವೂ ಇದ್ದೀತು. ಈ ಬೆಚ್ಚಗಿನ ಅನುರಣನಶೀಲ ಇಪ್ಪತ್ತೆರಡು `ಗದ್ಯಬಂಧಿ' ಮತ್ತು 'ಪದ್ಯಗಂಧಿ' ರಚನೆಗಳನ್ನು ಓದಿದ ಮೇಲೆ ನನಗಂತೂ ಅನಿಸಿದ್ದಿಷ್ಟು: ಇವುಗಳನ್ನು ಕವಿತೆಯೆಂದು ಕರೆಯದಿದ್ದರೆ ಇನ್ಯಾವುದನ್ನು ಕರೆಯೋಣ ?’ ಎಂದು ಪ್ರಶ್ನಿಸುತ್ತಾರೆ.
ಒಂದು ಲಬಸಾ ಹೀಗಿದೆ-
ಕವಿತೆ ಹುಟ್ಟುವುದು, ಪ್ರೀತಿ ಮೊಳೆಯುವುದು
ಒಂದೆ ಜಾಗದಲ್ಲಿ: ಎದೆಗೂಡಿನ ಮೌನದಲ್ಲಿ
(ಬಂಗಾರದ ಹುಡುಗಿ)
ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...
READ MORE