‘ಚೊಚ್ಚಲ ಮಗ’ ಕವಿ ಎನ್.ಡಿ.ಮೇಗಲಮನಿ ಅವರ ಪ್ರಥಮ ಕವನ ಸಂಕಲನ. ತನ್ನ ಸುತ್ತಲಿನ ಪರಿಸರದಲ್ಲಿ ಸಾಂಸ್ಕೃತಿಕ ಕೆಲಸವನ್ನು ಸದಾ ಪಸರಿಸುತ್ತಾ, ಅದನ್ನು ಕಾಪಾಡಿಕೊಂಡ ಸರಳ ಜೀವಿ. ತನ್ನ ಕೆಲಸದಲ್ಲಿ ಸುಖ ಕಾಣುವ ಗ್ರಹಿತಿ. ನಿರ್ಲಕ್ಷಿತ ಪುಟ್ಟ ಜನಾಂಗದಿಂದ ಬಂದಿರುವ ಕವಿ ತನ್ನ ಅಕ್ಷರ ದೀಕ್ಷೆಯಿಂದಲೇ ಮಾರ್ಗ ಹುಡುಕಿಕೊಂಡವರು. ಇಂಥ ನಡೆದು ಬಂದ ದಾರಿಯ ಭಾವಲೋಕ ಅನಾವರಣ ಇಲ್ಲಿನ ಕವಿತೆಗಳಲ್ಲಿದೆ. ಬದಲಾದ ಕಾಲಮಾನದಲ್ಲಿಯೂ ಒಂದು ಜನಾಂಗ ಅನುಭವಿಸುತ್ತಿರುವ ನೋವುಗಳು, ಇಲ್ಲಿ ಸೂಕ್ಷ್ಮ ಸಂವೇದನೆಗಳ ಮೂಲಕ ವ್ಯಕ್ತವಾಗಿವೆ. ಇಂಥ ಶಿಕ್ಷಿತ ಮನಸ್ಸಿನ ಭಾವವಿಚಾರಗಳ ಗುಚ್ಛ ಈ ಸಂಕಲನ.
ಲಯಾತ್ಮಕ ಓಟ, ಸ್ಪುಟವಾಗಿ ಕಟ್ಟಿಕೊಡಬಲ್ಲ ಶಬ್ದ ಕರಣಿ, ಸರಳ ಸಹಜ ಕವಿತಾ ಶೈಲಿಗೆ ಸಿಡಿಲು, ವಲಸೆ, ಭೂಮಿ, ಬರಗಾಲ, ಪುಟ್ಟ ಹಕ್ಕಿ, ಧರಣಿ, ಆತ್ಮಹತ್ಯ, ಮುಂತಾದ ಕವಿತೆಗಳು ಕವಿಯ ಕಲ್ಪನಾ ಮತ್ತು ಕಾವ್ಯ ಶಕ್ತಿಗೆ ಸಾಕ್ಷಿಯಾಗಿವೆ. ಒಂದು ಪ್ರಾಮಾಣಿಕ ಅನ್ನಬಹುದಾದ ಸಹಜ ಕವಿತಾ ಶೈಲಿ ಇಲ್ಲಿದೆ. ಅತಿಯಾಗಿ ಏನನ್ನೂ ಹೇಳದೆ, ತನ್ನ ಮಿತಿಯಲ್ಲಿ ಅರಳಿರುವ ಕಾವ್ಯವಿದು.