ಚಂದ್ರದೀಪ

Author : ಚಿಂತಾಮಣಿ ಕೊಡ್ಲೆಕೆರೆ

Pages 173

₹ 120.00




Year of Publication: 2021
Published by: ಸಪ್ನ ಬುಕ್ ಹೌಸ್ (ಪ್ರೈ)ಲಿಮಿಟೆಡ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 08040114455

Synopsys

ಲೇಖಕ ಚಿಂತಾಮಣಿ ಕೊಡ್ಲೆಕೆರೆ ಅವರ ಕವನ ಸಂಕಲನ ‘ಚಂದ್ರದೀಪ’. ಈ ಕವನ ಸಂಕಲನಕ್ಕೆ ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ.‘ಈಗ ಬರೆಯುತ್ತಿರುವ ಸಮಕಾಲೀನ ಕವಿಗಳಲ್ಲಿ ಕವಿ ಚಿಂತಾಮಣಿ ಕೊಡ್ಲೆಕೆರೆ ಯಾವ ಬಗೆಯ ತೀವ್ರವೇಗಕ್ಕೂ ಸರಭಸತೆಗೂ ಬಾಗದಿರುವ ಕವಿ. ಇವರು ಕಾವ್ಯಭಾಷೆಯನ್ನು ಅತ್ಯಂತ ನವಿರಾಗಿ, ಸೂಕ್ಷ್ಮವಾಗಿ, ಚೀನಿಚೀನಾಂಬರದಂತೆ ಬಳಸಬಲ್ಲರು. ವಸ್ತುವಿಗೆ ಅನುಗುಣವಾಗಿ ಲಯಪ್ರತೀತಿಯನ್ನು ಸಾಧಿಸಬಲ್ಲರು. ಇತರೆ ಕವಿಗಳಿಗಿಂತ ತಮ್ಮ ಜಾಡು ಬೇರೆಯೆಂಬಂತೆ ಕಾವ್ಯಕಟ್ಟುವ ಕಲೆಯಲ್ಲಿ ಕೊಡ್ಲೆಕೆರೆ ಸಾಧಿಸಿರುವ ಪರಿಣತಿ ಅಚ್ಚರಿಯನ್ನೂ, ವಿಸ್ಮಯವನ್ನೂ, ಆನಂದವನ್ನೂ ನಮಗೆ ತಂದುಕೊಡುತ್ತದೆ. ಇದಕ್ಕೆ ತಕ್ಕಂತೆ ಕಾವ್ಯಭಾಷೆ, ಲಯ, ಸಂಕೇತ, ಪ್ರತಿಮೆ, ರೂಪಕಗಳು ಬಂದು ಕವಿತೆಗಳೊಳಗೆ ಹಾಸುಗೊಳ್ಳುತ್ತವೆ. ನಾನು ಇಲ್ಲಿರುವ ಎಪ್ಪತ್ತೈದು ಕವನಗಳನ್ನು ಒಂದಲ್ಲ, ಹಲವು ಬಾರಿ ಓದಿ ಆನಂದಿಸಿದ್ದೇನೆ. ವ್ಯಕ್ತಿ, ಕುಟುಂಬ, ಸಮಾಜ, ಪ್ರಕೃತಿಯ ಒಡಲೊಳಗೆ ಬೆಳೆಯುತ್ತಾ, ಜೀವಕಾರುಣ್ಯದ ಹಾದಿಯನ್ನು ಇಲ್ಲಿಯ ಕವಿತೆಗಳು ನಮಗೆ ತೋರಿಸುತ್ತವೆ. ಇದು ಭಾರತೀಯ ಅಧ್ಯಾತ್ಮದ ಕೋಶದಿಂದ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಇಂಥ ಸಾಮರ್ಥ್ಯ ಈ ಕವಿಗೆ ದಕ್ಕಿರುವುದು ಕನ್ನಡ ಕಾವ್ಯದ ಭಾಗ್ಯವಿಶೇಷವೆಂದು ದಿಟವಾಗಿ ನಾನು ಹೇಳಬಲ್ಲೆ. ಇವರ ಕವಿತೆಗಳಲ್ಲಿ ಬೆಳಕಿನ, ದೀಪದ ಕುರುಹುಗಳಿವೆ. ಆ ಕುರುಹುಗಳು ಅರಿವಿನ ರೂಪಕಗಳಾಗಿ ಬೆಳದು ನಿಂತಿವೆ’ ಎಂದಿದ್ದಾರೆ.

About the Author

ಚಿಂತಾಮಣಿ ಕೊಡ್ಲೆಕೆರೆ
(13 January 1961)

ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು.  ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ...

READ MORE

Reviews

‘ಚಂದ್ರದೀಪ’ ಕೃತಿಯ ವಿಮರ್ಶೆ 

ಬಾನು ಇದೆ ಕಡಲಿದೆ ಸುಳಿವ ಗಾಳಿಯೂ
ಈ ದಡದಿಂದಾದಡಕ್ಕೆ ತಾರಿದೋಣಿಯೂ
ಬೆಳಕು ಇದೆ ಕತ್ತಲಿದೆ ಮಳೆಯ ಮಾಯೆಯೂ
ಬೆಳದಿಂಗಳ ಬೆನ್ನ ಹಿಂದೆ ಇರುಳ ಛಾಯೆಯೂ
ಇಲ್ಲೆ ಇದ್ದ ಅವರಷ್ಟೇ ಕಾಣದಾದರು

ಆಕಾಶ ಸೇರಿ ಮೋಡಕ್ಕೆ ಕೊಕ್ಕಿಟ್ಟು ನೀರು ಕುಡಿಯುವುದು
ಹಾಗೆ ಮೋಡಗಳ ಕುಕ್ಕುತ್ತ ಕುಕ್ಕುತ್ತ ಮಳೆಯೆ ಸುರಿಯುವುದು,

ಇಂಥಾ ವಿಶಿಷ್ಟ ಕವಿತೆಗಳ ಮೂಲಕ ‘ಚಂದ್ರದೀಪ’ ಸಂಕಲನದಲ್ಲಿ ನಮ್ಮನ್ನು ಭೇಟಿಯಾಗುತ್ತಾರೆ ಚಿಂತಾಮಣಿ ಕೊಡ್ಲೆಕೆರೆ. ಈ ಕವಿತೆಗಳಲ್ಲಿ ಬಾಲಭಾವ, ಯೌವನದ ನಶೆ, ಮಧ್ಯ ವಯಸ್ಸಿನ ತಾದಾತ್ಮ ಎಲ್ಲವೂ ಸಿಗುತ್ತವೆ. ಏಕೆಂದರೆ ಈ ಸಂಕಲನದಲ್ಲಿ ಕವಿ ತಾನು ಬೇರೆ ಬೇರೆ ವಯಸ್ಸಿನಲ್ಲಿ ಬರೆದ ಕವಿತೆಗಳನ್ನು ಜೋಡಿಸಿಕೊಟ್ಟಿದ್ದಾರೆ. ಅಥವಾ ಆ ವಯಸ್ಸಲ್ಲಿ ನಿಂತು ಈ ಕವಿತೆ ಕಟ್ಟಿದ್ದಾರೆ. ಮಗು ತಾಯಿ, ಪ್ರಕೃತಿ ಮನುಷ್ಯ, ಪ್ರೇಮಿಗಳು, ದೇವ-ಭಕ ಹೀಗೆ ಇಲ್ಲಿನ ಅನೇಕ ಕತೆಗಳು ಪರಸರ ಸಂವಾದ ನಡೆಸುವಂತೆ ಭಾಸವಾಗುತ್ತದೆ. ಮಳೆಯ ಆಗಮನವನ್ನು ತಾಯಿ ಮಗುವಿನ ಹೋಲಿಕೆಯಲ್ಲಿ ಚಿತ್ರಿಸಿರುವುದು ಮತ್ತೊಂದು ಪ್ರಯತ್ನ.

ಅವಧಿಗೂ ಮೊದಲೇ, ಸುರುವಾದ ಮಳೆ
ತಾಯಿ ಬಾಯಿ ಬಿಟ್ಟು ಅತ್ತಂತಿದೆ
ಮಧ್ಯಾಹ್ನ ಮಲಗಿದ ಮಗುವ
ನಿದ್ರೆ ಭಂಗವಾದಂತೆ
ಮುದ್ದು ಪಾದಗಳಿಂದ
ತೊಟ್ಟಿಲು ಒದ್ದಂತೆ

ತೊಟ್ಟಿಲೂ ಸುತ್ತಲೂ
ಎಲ್ಲಾ
ಒದ್ದೆಯಾದಂತೆ
ಮತ್ತೆ ಮಗು ನಿದ್ದೆ ಹೋದಂತೆ

ಈ ರೀತಿಯ ಸಾಲುಗಳು ಚಿತ್ಮರಕ ಶೈಲಿಯ ಜೊತೆಗೆ ವಿಭಿನ್ನ ಹೊಳಹುಗಳ ಮೂಲಕವೂ  ಗಮನ ಸೆಳೆಯುತ್ತವೆ. ಒಟ್ಟಾರೆ ಬದುಕಿನ ಪ್ರಯಾಣದಲ್ಲಿ ಸಿಕ್ಕ ನೋಟಗಳು ಕವಿತೆಯಾಗಿವೆ. ಇವು ಗಮನ ಸೆಳೆಯುವಂತೆಯೂ ಇದೆ.   

(ಕೃಪೆ ; ಕನ್ನಡಪ್ರಭ, ಭಾನುಪ್ರಭ)

Related Books