"ಬೊಗಸೆಯಲ್ಲಿ ಬೆಳದಿಂಗಳು" ಕವಯತ್ರಿ ಶಾಂತಲಾ ಭಂಡಿ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ಜೋಗಿ ಅವರು ಮೆಚ್ಚುಗೆಯ ನುಡಿಗಳನ್ನು ಬರೆದು ‘ಸಹಜ ಉಲ್ಲಾಸ, ತೋರಿಕೆ ಇಲ್ಲದ ಪ್ರೀತಿ, ಒಳಗೊಳ್ಳುವ ಅಕ್ಕರೆ, ಇವು ಶಾಂತಲಾ ಕವಿತೆಗಳ ಆಶಯ. ಮಲ್ಲಿಗೆ ತೋಟದಲ್ಲಿ ಸುಮ್ಮನೆ ಹಾದುಹೋಗುವ ತಂಗಾಳಿಯ ಹಾಗೆ ನಿರುದೃಶ್ಯ ಸಾಲುಗಳು ನಮ್ಮನ್ನು ಮುದಗೊಳಿಸುತ್ತವೆ. ಒಂದು ಮಧುರ ನಿನಾದ, ಮತ್ತೊಂದು ಮರ್ಮರ, ಒಂದು ಬಿಕ್ಕಳಿಕೆ, ಮತ್ತೊಂದು ಉಲ್ಲಾಸ - ಹೀಗೆ ಕವಿತೆ ಚಕಿತಗೊಳಿಸುವ ಬದಲು ಮುಗುಳ್ನಗೆ ಬೀರುತ್ತವೆ, ದಾಟಿ ಹೋಗುತ್ತವೆ. ಅದು ಈ ಪದ್ಯಗಳ ದೈನ್ಯತೆ ಮತ್ತು ಸಾರ್ಥಕತೆ’ ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ, ಲೇಖಕಿ ಶಾಂತಲಾ ಭಂಡಿ ಅವರು ಮೂಲತಃ ಶಿರಸಿ ತಾಲೂಕಿನ ಬೆಂಗಳೆಯವರು. ಪ್ರಸ್ತುತ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದು, ಟೆಕ್ನಿಕಲ್ ರಿಕ್ರೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಕತೆ-ಕವನ, ಪ್ರಬಂಧ, ಲಹರಿ, ಲೇಖನಗಳು ಕನ್ನಡ ಪತ್ರಿಕೆ ಹಾಗೂ ಅಂತರ್ಜಾಲದಲ್ಲೂ ಪ್ರಕಟವಾಗಿವೆ. ಇವರ ಬ್ಲಾಗ್ ’ನೆನಪು ಕನಸುಗಳ ನಡುವೆ’. ಕೃತಿಗಳು: ಬೊಗಸೆಯಲ್ಲಿ ಬೆಳದಿಂಗಳು (ಕವನ ಸಂಕಲನ-2010), ಬೆಳದಿಂಗಳ ಬೇರು (ಪ್ರಬಂಧ/ಲಹರಿ ಗುಚ್ಛ -2012) ...
READ MORE