‘ಭೂಮಿ ಹಿಡಿದ ಹೂ’ ಕವಿ ಅಜಯ ಬಣಕಾರ ಅವರ ಕವನ ಸಂಕಲನ. ಈ ಕೃತಿಗೆ ಟಿ.ಎಸ್. ಗೊರವರ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ.. ‘ ಈಗಾಗಲೇ ಹನಿಸಂಪಿಗೆ, ಹೂನಗೆ, ನೀನಿರದ ಭೂಮಿಯಲಿ ಸಂಕಲನ ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕೊಟ್ಟೂರಿನ ಅಜಯ ಬಣಕಾರ ಅವರ ಭೂಮಿ ಹಿಡಿದ ಹೂ ಸಂಕಲನದ ಕವಿತೆಗಳು ತಣ್ಣಗೆ ಓದಿಸಿಕೊಳ್ಳುತ್ತವೆ. ಆದರೆ, ಅವು ಮಂಡಿಸಲು ಹೊರಟಿರುವ ಅನುಭವ ಲೋಕ ಮಾತ್ರ ಸುಡು ಸುಡುವಂಥದ್ದು’, ಎನ್ನುತ್ತಾರೆ. ಭೂಮಿ, ಮಳೆ, ಹೂ, ಮಿಂಚು, ಹುಣ್ಣಿಮೆ, ಜಾತ್ರೆ, ಮರ, ನವಿಲು, ಆಣೆಕಟ್ಟು..ಅವರ ಕಾವ್ಯದ ತುಂಬಾ ದಂಡಿ ದಂಡಿಯಾಗಿ ಬರುತ್ತವೆ. ಇಂಥಹ ವಸ್ತುಗಳನ್ನೇ ಅವರು ರೂಪಕಗಳಾಗಿಸುತ್ತಾ ನಮ್ಮನ್ನು ಸೆಳೆಯುತ್ತಾರೆ. ಒಂದು ದೃಷ್ಟಿಯಿಂದ ಇಂಥಹ ರೂಪಕಗಳು ಅವರ ಕವಿತೆಗಳಲ್ಲಿ ಬೀಜಗಳಂತೆ ಚೆಲ್ಲಿಕೊಂಡು ಸ್ವಚ್ಛಂಧವಾಗಿ ಅರಳುತ್ತವೆ. ಇಲ್ಲಿನ ಬಹುತೇಕ ಕವಿತೆಗಳು ಬಿಸಿಲುಂಡ ಬದುಕೊಂದು ಮಳೆಯನ್ನು ಧೇನಿಸಿದಂತೆ ನಮಗೆ ಭಾಸವಾಗುತ್ತವೆ. ಇದು ಇಲ್ಲಿನ ಕವಿತೆಗಳ ಹೊಸ ಸಾಧ್ಯತೆಯೂ ಹೌದು ಎನ್ನುತ್ತಾರೆ ಗೊರವರ. ಕಾವ್ಯ ರಚನೆಯನ್ನು ಸಿದ್ಧಿಸಿಕೊಂಡಂತಿರುವ ಬಣಕಾರ ಅವರಿಗೆ ಬದುಕಿನ ಅನುಭವಗಳನ್ನು ಇನ್ನಷ್ಟು ಆಳವಾಗಿ ಶೋಧಿಸುವುದು ತಿಳಿದೇ ಇದೆ. ಇದು ಅವರ ಮುಂದಿನ ಕವಿತೆಗಳ ಹೊಸ ಸೃಷ್ಟಿಶೀಲತೆಯ ಬಗೆಗೆ ನಾವೆಲ್ಲ ಕುತೂಹಲದ ಕಣ್ಣಿನಿಂದ ಕಾಯುವಂತೆ ಮಾಡುತ್ತದೆ ಎಂದಿದ್ದಾರೆ ಟಿ.ಎಸ್. ಗೊರವರ.
ಈ ಕೃತಿಯಲ್ಲಿ ಭೂಮಿ ಹಿಡಿದ ಹೂ, ನಮ್ಮ ಬಳ್ಳಾರಿ, ಜಯನಗರದ ಮಳೆ, ಪಾದಯಾತ್ರೆ, ಓಂಟಿಮರ, ಅಪ್ಪನ ಬೆಲ್ಟು, ಜೋಪಡಿ ನಗು, ಮೂಕನಕಲ್ಲು ಮಾತಾಡುತ್ತದೆ, ಮಂತ್ರಿಗಳೆ, ಅಣೆಕಟ್ಟು, ಮಿಂಚುಗಳು-1, ಬೆಂಗಳೂರಲಿ, ಮನೆಯೆಂದರೆ, ಕಾಡಹುಲಿ, ನೀರಾಗಬೇಕು, ದೀಪ ಹಚ್ಚುತ್ತೇನೆ, ದಿಕ್ಸೂಚಿಯಂತೆ ನಿಲ್ಲು, ಮೂರು ಹನಿಗಳು, ಪುಣ್ಯದ ಲೆಕ್ಕಗಳು, ಬದುಕು, ತುರ್ತು ಪಯಣದಲಿ, ಬಿಟ್ಟಾಕು ಅವಳ, ಕಿಟಕಿ ಮತ್ತು ಗಾಳಿ, ದೋಣಿ ಕವಿತೆ, ಸತ್ಯ ಮತ್ತು ಸುಳ್ಳು, ಅವರು ಬಂದರೆ ಇವರು ಬರುವುದಿಲ್ಲ, ಹಾರೈಸಿದ ಮಳೆ, ಕೆಂಪು ಸೈಕಲ್ಲು, ಪ್ರಭಾವ, ಕ್ರಾಸು, ಕಾಲುವೆ ನೀರು, ಬಿಡಿ ಪದ್ಯಗಳು, ಎಂಥಾ ಮಳೆ, ಕಲ್ಲ ಮೇಲಿನ ಹೆಸರು, ಬೋರವ್ವನ ಹಾರಗಳು, ಪುಟ್ಟ ಮರ, ನಿನ್ನ ಮರೆಯಬೇಕೆಂದು, ಎರಡು ಹನಿಗಳು, ಹಾರಿಬಂತು ನವಿಲು, ನೀನು ಪಂಜರದೊಳಗೆ, ಗೆಳೆಯನ ಶೆಡ್ಡು, ದ್ವಿಪದಿಗಳು, ಖಾಲಿಜೇಬು, ಜಯನಗರದ ಹೂಮರಗಳು, ಅಪ್ಪನಿಲ್ಲದ ಮದುವಿ, ಮಿಂಚುಗಳು-2, ಕೊನೇ ಬಸ್ಸು, ಕೆರೆಕೋಡಿ ಒಡೆದು, ಜಾತ್ರೆ, ಒಂದರಿಂದ ಹತ್ತು ಎಂಬ 52 ಕವಿತೆಗಳ ಸಂಕಲನಗೊಂಡಿವೆ.
ಬರಹಗಾರ ಅಜಯ ಬಣಕಾರ ಅವರು ಜನಿಸಿದ್ದು 1976 ಜುಲೈ 22ರಂದು. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. ದಾವಣಗೆರೆ ಯು.ಬಿ.ಡಿ.ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಇವರು ತುಂಗಭದ್ರ ಬೋರ್ಡ್ ನಲ್ಲಿ ಸೆಕ್ಷನ್ ಆಫೀಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವಾಗಲೇ ಇವರು ಬರೆದ ಹಲವು ಕಥೆಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಕಟಿತ ಕೃತಿಗಳು: ಹನಿಸಂಪಿಗೆ (ಹನಿಗವನ ಸಂಕಲನ) ಹೂನಗೆ (ಹನಿಗವನ ಸಂಕಲನ) ನೀನಿರದ ಭೂಮಿಯಲಿ(ಕವನ ಸಂಕಲನ) ಭೂಮಿ ಹಿಡಿದ ಹೂ (ಕವನ ಸಂಕಲನ) ಕೊಪ್ಪಳದಲ್ಲಿ ನಡೆದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ- ಪ್ರಶಸ್ತಿ ಸಂದಿವೆ. ...
READ MORE