ವಿಲಿಯಂ ಅವರ ಬೆಳ್ಳಿಚೂರು ಮತ್ತು ಇತರ ಕವನಗಳು ಸಂಕಲನದ ಕವಿತೆಗಳು ಕನ್ನಡ ಕಾವ್ಯ ನವೀನತೆಗೆ ಸಾಕ್ಷಿಯಾಗಿವೆ. ಕತ್ತೆಯೊಂದರ ಆತ್ಮಕಥೆ, ಕ್ರಿಸ್ತನೊಡನೆ ಒಂದು ನಿಮಿಷ, ಹೇಳು ಜೂಡಸ್, ಸ್ಥಾವರ, ಮರ, ಆ ಸುತ್ತಿಗೆ ಸದ್ದು, ಹೃದಯ ಒಕ್ಕಲಿಗನ ಸಾಮ್ಯ ಕವಿತೆಗಳು ಧಾರ್ಮಿಕ ನೆಲೆಯಲ್ಲಿ ಬದುಕಿನ ವೈವಿಧ್ಯತೆಗಳನ್ನು ತೆರೆದಿಡುತ್ತವೆ. ಬತ್ತಿ ಬರಡಾಗಿದೆ ನಿನ್ನ ಹಾಡಿನ ಕೆಚ್ಚಲು, ಎರಡೆನೇ ಸಹಸ್ರಮಾನ ಪ್ರವೇಶ ಕವಿತೆಗಳಲ್ಲಿ ನಗರೀಕರಣದ ಛಾಯೆ ಮೂಡಿದೆ. ಲೂಸಿ ಕರುಳು ಬಳ್ಳಿಯ ಪ್ರತೀಕವಾದರೆ, ಬದುಕು ಬದುಕಿನ ಗುಟ್ಟು ಇದುವರೆಗೆ ಯಾರೂ ಅರಿತಿಲ್ಲವೆಂಬ ಸತ್ಯವನ್ನು ಪ್ರತಿಪಾದಿಸುವಂತಿದೆ. ಉಪ್ಪಿನಗೊಂಬೆ ಬದುಕಿನ ನಶ್ವರತೆಯನ್ನು ಸೂಚಿಸುತ್ತಲೇ ಐಕ್ಯಭಾವವನ್ನೂ ಅಭಿವ್ಯಕ್ತಿಸಿದೆ. ಕ್ರೌರ್ಯದ ನೆರಳಲ್ಲಿ ಕಾವ್ಯ ಈ ಹುಟ್ಟಲಾರದು ಎಂಬ ಸೂಚನೆ ಕವನ ಕಟ್ಟಲಿ ಹೇಗೆ ಕವಿತೆ ಧ್ವನಿಸಿದೆ. ಪಕ್ಕೆ-ತೆಕ್ಕೆ ಬೈಬಲಿನ ಮಾನವ ಸೃಷ್ಟಿಯ ಸಂದರ್ಭವಾದರೂ ಪಕ್ಕೆಗಳೆರಡು ತೆಕ್ಕೆಯಾಗಿರಲಿ ಎಂಬ ಗ್ರಹಿಕೆ ವಿಶಿಷ್ಟವಾದದ್ದು.
ವಿಲಿಯಂ ಅವರ ಹನಿಗವನಗಳಲ್ಲಿ ಚುರುಕುಮುಟ್ಟಿಸುವ ಗುಣವಿದೆ. ಮಿಂಚಿನಂತೆ ಚಕ್ಕನೆ ಹೊಸ ಹೊಳಹುಗಳನ್ನು ಹೊಳೆಯಿಸುವ ಚುಟುಕುಗಳು ತಟ್ಟನೆ ಮನಸ್ಸನ್ನು ಮುದಗೊಳಿಸುತ್ತವೆ. ಹಣತೆ ಅಸ್ತಿತ್ವದಂತಹ ಗಂಭೀರ ವಿಚಾರವನ್ನು ಧ್ವನಿಸುತ್ತದೆ. ಜಾತಿಯ ಅಪಾಯಗಳನ್ನು ಗತಿಯೇನು? ನೋಡಿದರಾ? ಕಾಂಡ-ಹೆಂಡ, ಮರ,ಭೂಮಿಯಂತಹ ಹನಿಗವನಗಳು ಪರಿಸರವಾದಿ ಧೋರಣೆಯಲ್ಲಿವೆ. ಕತೆ ಹನಿಗವಿತೆ ಇವೆಲ್ಲಕ್ಕೂ ಪುಟವಿಟ್ಟ ಅಭಿವ್ಯಕ್ತಿ. ಕವಿ ವಿಲಿಯಂ ಅವರನ್ನು ಪಕ್ಕ ಬರವಣಿಗೆ, ಅವಸರದ ನೇಯ್ಗೆ ಇಲ್ಲ, ಆಯಕಟ್ಟಿನ ಚೌಕಟ್ಟಿನೊಳಗೆ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ನಿರೂಪಿಸುವ ಕೌಶಲ್ಯ ಅವರದ್ದು.