ಪೊಲೀಸ್ ಅಧಿಕಾರಿ, ಕವಿ ಡಾ. ಡಿ.ಸಿ. ರಾಜಪ್ಪ ಅವರ ಕವನ ಸಂಕಲನ ʻಬರಡು ಭೂಮಿಯ ಸತ್ಯಗಳುʼ. ಪುಸ್ತಕದ ಮುನ್ನುಡಿಯಲ್ಲಿ ಕವಿ ಜಿ.ಎಸ್. ಶಿವರುದ್ರಪ್ಪ ಅವರು, “ಪೊಲೀಸ್ ಇಲಾಖೆಯಂಥ ಬಿಗುಮಾನದ ಹಾಗೂ ಆತಂಕದ ಜಗತ್ತಿನೊಳಗಿದ್ದೂ, ಮನಸ್ಸನ್ನು ಪರಿಭಾವನೆಯ ಹದದಲ್ಲಿ ನಿಲ್ಲಿಸಿಕೊಳ್ಳುವಂಥ ನೆಮ್ಮದಿಯ ನೆಲೆಗೆ ನಿರ್ಮಿಸಿಕೊಳ್ಳುವುದು ಸುಲಭವಲ್ಲ. ಆದರೆ ಅದು ರಾಜಪ್ಪನವರಿಗೆ ಸಾಧ್ಯವಾಗಿದೆ ಮತ್ತು ಆ ನೆಮ್ಮದಿಯ ನೆಲೆಯೇ ಅವರ ಸುತ್ತಣ ಜಗತ್ತನ್ನು ತಮ್ಮ ಪ್ರಜ್ಞೆಗೆ ತಂದುಕೊಳ್ಳುವ ಮಧ್ಯಬಿಂದು ಹಾಗೂ ಕಾವ್ಯಾಭಿವ್ಯಕ್ತಿಯ ಪ್ರಸಾರ ಕೇಂದ್ರವೂ ಆಗಿದೆ. ಯಾವ ಕವಿಯೂ ಅನುಭವಕ್ಕೆ ತಡಕಾಡಬೇಕಾಗಿಲ್ಲ ಯಾಕೆಂದರೆ ಈ ಜಗತ್ತು ಕವಿಗೆ ಒದಗಿಸುವ ಅನುಭವ ಸಮೃದ್ಧಿಗೆ ಕೊನೆಯಿಲ್ಲ. ಈ ಅಗಾಧವಾದ ಬದುಕನ್ನು ಶತ ಶತಮಾನಗಳಿಂದಲೂ ಅಸಂಖ್ಯಾತ ಕವಿಗಳ ಮಾತಿನ ಮೂಲಕ ಹಿಡಿದು ಸುರಿದರೂ ಅದು ಎಂದಿಗೂ ಮುಗಿಯದಿದೆ. ಇಂದಿಗೂ ಮುಗಿಯದಿದೆ. ಮುಖ್ಯವಾದ ಮಾತೆಂದರೆ ಪ್ರತಿಯೊಬ್ಬ ಕವಿಯೂ ತನ್ನ ಕಾಲದ ಬದುಕನ್ನು ಹೇಗೆ ವ್ಯಕ್ತಿವಿಶಿಷ್ಟವಾಗಿ ಗ್ರಹಿಸಿದ್ದಾನೆ ಮತ್ತು ಇತರರಿಗಿಂತ ಹೇಗೆ ಅನನ್ಯವಾಗಿ ಅಭಿವ್ಯಕ್ತಿಸಿದ್ದಾನೆ ಎನ್ನುವುದು” ಎಂದು ಹೇಳಿದ್ದಾರೆ.