ಬಾಳ ನೌಕೆಗೆ ಬೆಳಕಿನ ದೀಪ ರೇವಣ್ಣ ಸಿದ್ಧಪ್ಪ ಜಿ.ಆರ್ ಅವರ ಕವನ ಸಂಕಲನವಾಗಿದೆ. ಕಟ್ಟಿನ್ನೂ ಮುಗಿಸದ ಹಸಿಹಸಿ ಕವನ ಪ್ರಕಟಿಸೊ ನಮ್ಮೀ ಧಾವಂತ ಸಮಯ ಖಂಡದಲ್ಲು ಎಷ್ಟೊ ವರ್ಷ ರಚಿಸುತ್ತ ಅವಸರಿಲ್ಲದೆ ತೂಗಿ ಮಾಗಿ ಇದೀಗ ತಮ್ಮ ಮೊದಲ ಸಂಕಲನ ಹೊರತಂದಿರುವ ಜಿ.ಆರ್. ರೇವಣಸಿದ್ದಪ್ಪನವರ ಕ್ಲುಪ್ತ ಕವಿತಾಬಾಣಗಳ ಮೊನಚು ಅಭಿವ್ಯಕ್ತಿ ನೇರ ಗುರಿತಾಗತ್ತೆ. ತಣ್ಣಗೆ ಕಷ್ಟಬೆಟ್ಟಸಾಲು ಹತ್ತಿಳಿದ ಕವಿಯ ನಿಲುವು ನಿರ್ಲಿಪ್ತ ವಾಸ್ತವಾನುಭವದ ಕಾಲುದಾರಿ ತೆರೆಯತ್ತೆ. ಎಳೆತಪ್ಪಿ ವಿಕ್ಷಿಪ್ತವಾಗುವ ಅಪಾಯದಿಂದ ಪಾರಾಗಲು ಹಂಬಲಿಸೊ ಕವಿತೆಗಳಿವು. ರೈಲುಹಳಿಗಳ ನಡುವೆ, ಸಿದ್ದೇಶ ಕಾಣೆಯಾಗಿದ್ದಾನೆ, ಸಾಗರ, ಯಂತ್ರಜೀವಿ, ಎರಡು ಗಿಡಗಳು, ಒಲವಿಗೆಯಂತ ಪರಿಣಾಮಿ ರಚನೆಗಳಿಲ್ಲಿವೆ. ಇವಳು ಸುಳಿದಾಗ ಕವಿ ಬಿಚ್ಚಿಟ್ಟದ್ದಲ್ಲ ಬಚ್ಚಿಟ್ಟದ್ದೆ. ಅಮೂಲ್ಯ ಎನಿಸೊ ಇಲ್ಲಿನ ಅತ್ಯಂತ ಒಳ್ಳೆಯ ಸೂಚ್ಯಕವಿತೆ. ಯಾರಿವಳು? ಹಡೆದವ್ವನೆ? ಒಡಹುಟ್ಟಿದಕ್ಕನೆ?ಮುಗ್ಧಮಗಳೆ?ಮಾದಕತೆ ಬಳಿಯದ ಸಹಜ ಚೆಲುವೆಯೆ? ಪ್ರತ್ಯಕ್ಷ ದೇವಿಯೆ! ಎಂಬ ತರಂಗಾಂತರಂಗ ಕುತೂಹಲ ಕಡೆವ ಕವಿತೆ. ಇಂಥ ಕವಿಯಿಂದ ಇನ್ನಷ್ಟು ಪ್ರಬುದ್ಧ ಜೀವಂತ ಆಶಾವಾದಿ ಕವಿತೆಗಳ ನಿರೀಕ್ಷಿಸಬಹುದಲ್ಲವೆ? ಎಂದು ಬಿದರಹಳ್ಳಿ ನರಸಿಂಹಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...
READ MORE