"ಅವಳ ಪ್ರೇಮದ ಕುರುಹುಗಳು" ಕವಿ ಸಂಗಮೇಶ್ವರ ಶಿ ಕುಲಕರ್ಣಿ ಅವರು ಹನಿಗವಿತೆಗಳ ಸಂಕಲನ. ಸಾಹಿತಿ ಜೋಗಿ ಅವರು ಬೆನ್ನುಡಿ ಬರೆದು ‘ಹನಿಗವಿತೆಗಳಿಗೆ ಪ್ರೇಮಕ್ಕಿಂತ ಒಳ್ಳೆಯ ಸಂಗಾತಿ ಸಿಗಲಾರದು. ಅದನ್ನು ಅರ್ಥ ಮಾಡಿಕೊಂಡವರಂತೆ ಸಂಗಮೇಶ್ವರ ಕುಲಕರ್ಣಿ ನವಿರಾದ ಪ್ರೇಮದ ಕುರುಹುಗಳನ್ನು ಹೊಲಬು ಕೆಡದಂತೆ ಬರೆದಿದ್ದಾರೆ. ಅವರ ಕವಿತೆಯ ಬಂಧವನ್ನು ಈ ಅನುರಾಗದ ಹಾದಿ ಚಂದಗೊಳಿಸಿದೆ. ಪ್ರಾಸಕ್ಕೆ ಕಟ್ಟುಬೀಳದೆ ಪದಗಳನ್ನು ಮುರಿದು ಕಟ್ಟುವ ಹಳೆಯ ಜಾಡಿಗೆ ಬೀಳದೆ ಸಂಗಮೇಶ್ವರ ತಣ್ಣನೆಯ ಪದಗಳಲ್ಲಿ ಬಿಸುಪಿನ ಪ್ರೀತಿಯನ್ನು ಕಟ್ಟಿಕೊಟ್ಟದ್ದು ಅವರ ಪ್ರತಿಭೆಗೆ ಸಾಕ್ಷಿ. ಹನಿಗವಿತೆ ಸುಲಭದ ಹಾದಿ ನಿಜ. ಆದರೆ ಆದರ ಆಯಸ್ಸು ಕಮ್ಮಿ. ಇದನ್ನು ಮೆಟ್ಟಿಲಾಗಿಸಿಕೊಂಡು ಅವರು ಬದುಕಿನ ಕುಲುಮೆಯಿಂದ ಆಗಷ್ಟೇ ಹೊರತೆಗೆದ ಕುಡುಗೋಲಿನಂತಿರುವ ಬೆಂಕಿಕವಿತೆಗಳನ್ನು ಬರೆಯಲಿ’ ಎಂದು ಆಶಿಸಿದ್ದಾರೆ. ಪ್ರೇಮ, ಸರಸ, ವಿರಸ, ತಿರಸ್ಕಾರ, ನಿರಾಶೆ, ಕಾಮ.... ಹೀಗೆ ಪ್ರೇಮಿಯ ಅನುರಾಗದ ವಿವಿಧ ಮುಖಗಳ ದರ್ಶನಗಳು ಇಲ್ಲಿಯ ಹನಿಗವಿತೆಗಳಲ್ಲಿವೆ.
ಸಂಗಮೇಶ್ವರ ಶಿ.ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದವರು. ತಂದೆ ಶಿವಾನಂದ ಕುಲಕರ್ಣಿ, ತಾಯಿ ಮಹಾದೇವಿ. ತಮ್ಮ ಊರಾದ ಬೂದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡಿಕೇರಿಯ ಎಸ್.ಆರ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಬೈಲಹೊಂಗಲದಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೈಲಹೊಂಗಲದ ಎಸ್.ಬಿ.ಐ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು. ಹವ್ಯಾಸಿ ಬರಹಗಾರರು. ಇವರ ಹಲವು ಕವಿತೆ, ಚುಟುಕುಗಳು ಬೆಳಗಾವಿಯ ಸ್ಥಳೀಯ ಹಾಗೂ ರಾಜ್ಯದ ...
READ MORE