'ಅಮ್ಮ' ಕವಿ, ರಂಗಕರ್ಮಿ ಬೇಲೂರು ರಘುನಂದನ್ ಅವರ ಕಟ್ಟು ಪದಗಳ ಸಂಕಲನ ಈ ಕೃತಿಗೆ ಲೇಖಕಿ ಡಾ.ಬಿ.ಯು.ಸುಮ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಬೇಲೂರು ರಘುನಂದನ್ ಅವರ ಕಟ್ಟುಪದಗಳು ಒಂದು ವಿಶಿಷ್ಟವಾದ ಸಾಂಸ್ಕೃತಿಕ ಸಂಕಥನವನ್ನು ಕನ್ನಡದಲ್ಲಿ ಹುಟ್ಟು ಹಾಕುತ್ತಿವೆ. ಅವು ಆಧುನಿಕ ಸಂವೇದನೆಯನ್ನು ಆಧುನಿಕೋತ್ತರ ವಿನ್ಯಾಸದೊಳಗೆ ಅಡಕಗೊಳಿಸಲು ಪ್ರಯತ್ನಿಸುತ್ತಿವೆ. ಅವರ ನಾಲ್ಕನೇ ಕಟ್ಟುಪದ ಸಂಕಲನ ಅಮ್ಮ ವಿಭಿನ್ನ ಸಂದರ್ಭ ಮತ್ತು ನೆಲೆಗಳ ಮೂಲಕ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಆಕೆಯನ್ನು ಅದ್ಭುತವಾಗಿ ನಿರಚನಗೊಳಿಸುತ್ತದೆ’ ಎಂದಿದ್ದಾರೆ. ಜೊತೆಗೆ ಈ ನಿರಚನೆ ಅಮ್ಮನನ್ನು ಪಾರಂಪರಿಕ ಗ್ರಹಿಕೆಗಳಾಚೆಗೆ ತಾಯ್ತನದ ಅನಂತ ಆಯಾಮಗಳನ್ನು ಜೋದನೆಗೆ ಹಚ್ಚುವಂತೆ ವಿಸ್ತರಿಸುತ್ತದೆ. ಲಂಕೇಶರ ಅವ್ವ ಆಕೆಯನ್ನು ಶ್ರಮ ಸಂಸ್ಕೃತಿಯಲ್ಲಿಟ್ಟು ಅವಳ Masculine ಗುಣಗಳನ್ನು ಕಟ್ಟಿಕೊಟ್ಟರೆ, ಬೇಲೂರರ ಅಮ್ಮ Femininityಮತ್ತು Masculinityಯ ಹದವಾದ ಬೆಸುಗೆಯಾಗಿದೆ. ಆದ್ದರಿಂದ ಕನ್ನಡ ಸಂಸ್ಕೃತಿಯಲ್ಲಿ ತಾಯ್ತನ ಎಂದರೆ ಏನೆಲ್ಲಾ ಎಂಬ ವಾಗ್ವಾದಕ್ಕೆ ಇವು ಆಹ್ವಾನಿಸುತ್ತವೆ. ಬಹುಶಃ ಸ್ತ್ರೀವಾದದ ನಾಲ್ಕನೇ ಅಲೆ ಹೇಳುವ ಹೆಣ್ತನದ ಪ್ರತಿಮೆಗಳನ್ನು ಇಲ್ಲಿ ಹುಡುಕಬಹುದೇನೋ ಎಂದಿದ್ದಾರೆ.
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.. ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...
READ MORE