‘ಆತ್ಮಸಖಿ’ ಕೃತಿಯು ಅರುಣಾ ನರೇಂದ್ರ ಅವರ ಗಜಲ್ ಸಂಕಲನವಾಗಿದೆ. ಈ ಗಜಲ್ ಸಂಕಲನ ಸಾಮಾಜಿಕ ಕಳಕಳಿಯನ್ನು ಬಿತ್ತರಿಸುವತ್ತ ಮುಖ ಮಾಡಿದ್ದು, ಇಲ್ಲಿನ ಪ್ರೀತಿ, ಪ್ರೇಮ, ಹಸಿವು, ನೀರಡಿಕೆ, ದೇಶಾಭಿಮಾನ, ಅಕ್ಷರ ಅರಿವು, ಸರಳತೆಯ ನಡುವೆಯೂ ಒಂದು ಹೋರಾಟಕ್ಕೆ ಕರೆ ನೀಡುವ ಕಥಾವಸ್ತುಗಳಿವೆ. ಇಲ್ಲಿನ ವಿಚಾರಗಳು ಗಜಲ್ ಓದುಗರ ಎದೆಯಾಳಕ್ಕೆ ಇಳಿಯುತ್ತವೆ ಹಾಗೂ ಮನಸಾರೆ ಕಾಡುತ್ತವೆ. ಆಗಾಗ ಬಯಲೊಳಗಿನ ಬೆಡಗಿನಂತೆ ಮರುಭೂಮಿಯಲ್ಲಿ ಬಿಟ್ಟು ಬಂದ ಕನಸುಗಳಿಗೆ ಕಾಲುದಾರಿಯನ್ನು ಕೂಡಾ ಸೃಷ್ಟಿಸುತ್ತವೆ.
ಕೃತಿಯನ್ನು ವಿಮರ್ಶಿಸಿರುವ ಪ್ರಭಾವತಿ ಎಸ್ ದೇಸಾಯಿ, ಪ್ರತಿಯೊಬ್ಬ ವ್ಯಕ್ತಿಗೆ ಒಬ್ಬ ಆತ್ಮಸಖಿ ಅಥವಾ ಆತ್ಮಸಂಗಾತಿ ಇದ್ದೆ ಇರುತ್ತಾರೆ. ಇದರಿಂದ ಕವಿ ಯಾವಾಗಲೂ ತನ್ನ ಆತ್ಮಸಂಗಾತಿ ಅಥವಾ ಆತ್ಮಸಖಿಯೊಂದಿಗೆ ತನ್ನ ಮನದಾಳದ ನೋವು ನಲಿವುಗಳನ್ನು ಹಂಚಿಕೊಂಡು ಮನವನ್ನು ಹಗುರ ಮಾಡಿಕೊಳ್ಳುತ್ತಾನೆ. ಇಲ್ಲಿ ಅರುಣಾ ಅವರು, ತಮ್ಮ ಭಾವನೆಗಳನ್ನು ಆತ್ಮಸಖಿಯೊಂದಿಗೆ ನಿವೇದಿಸಿಕೊಂಡಿದ್ದಾರೆ. ಅಲ್ಲಿನ ಭಾವನೆಗಳು ಸಾರ್ವತ್ರಿಕವಾಗಿದ್ದು ಸಂಕಲನದ ಗಜಲ್ ಗಳನ್ನು ಓದಿದಾಗ ಇವು ತನ್ನದೇ ಭಾವನೆಗಳೆಂದು ಓದುಗನಿಗೆ ಅನಿಸುತ್ತದೆ’ ಎಂದಿದ್ದಾರೆ.
ಕವಯತ್ರಿ ಅರುಣಾ ನರೇಂದ್ರ ಅವರು 15 ಜುಲೈ 1968 ಬಾಗಲಕೋಟೆಯಲ್ಲಿ ಜನಿಸಿದರು. ’ಮುದ್ದಿನ ಗಿಣಿ, ಪಾಟಿಚೀಲ, ಬೆಕ್ಕಣ್ಣನ ಉಪಾಯ, ಅಮ್ಮನ ಸೆರಗು, ರಸದ ತೆನೆ, ಧೀರ ಬೀರೇಶ್ವರ ವಚನಗಳು’ ಅವರ ಪ್ರಮುಖ ಕೃತಿಗಳು. 'ಬೆಕ್ಕಣ್ಣನ ಉಪಾಯ' ಮಕ್ಕಳ ಸಾಹಿತ್ಯ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗುಣಸಾಗರಿ ನಾಗರಾಜು ದತ್ತಿನಿಧಿ ಬಹುಮಾನ, ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ...
READ MORE