ಆಕಾಶದ ಚಿತ್ರಗಳು- ಕವಿ ವಿ.ನರಸಿಂಹ ವರ್ಮ ಅವರ ಮೊದಲ ಕವನ ಸಂಕಲನ. ಇಲ್ಲಿ 65 ಕವನಗಳಿವೆ. ಸಾಹಿತಿ ಶಿವಕುಮಾರ ಸಾಯ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಯಾವುದೇ ಚೌಕಟ್ಟು ಇಲ್ಲವೇ ಪಂಥಗಳಿಗೆ ಒಳಪಡದೇ ಜ್ಞಾನ ಮತ್ತು ಕಾವ್ಯದ ಕಲೆಗಾರಿಕೆಯಿಂದ ಮಾತ್ರ ರೂಪುಗೊಂಡ ಕವಿತೆಗಳಿವೆ. ಬದುಕಿನ ಸೂಕ್ಷ್ಮತೆಗಳು ಕವಿತೆಗಳ ವಸ್ತು ವೈವಿಧ್ಯಗಳಾಗಿವೆ. ‘ಸಹೃದಯರಿಗೆ’ ಎಂಬ ಕವಿತೆಯಲ್ಲಿ‘ವಾದ-ವಿವಾದಗಳು ಬೇಕಿಲ್ಲ. ಹೃದಯ ಬೆಸೆಯುವ ಸಂವಾದವಿದ್ದರೆ ಸಾಕು’ ಎಂದು ಹೇಳುವ ಮೂಲಕ ಕಾವ್ಯ -ಸಾಹಿತ್ಯದ ಉದ್ದೇಶವನ್ನೇ ಸ್ಪಷ್ಟಪಡಿಸಿದ್ದಾರೆ. ಕೆಲವು ಕವನಗಳಲ್ಲಿ ಸೊಗಸಾದ ವ್ಯಂಗ್ಯಾರ್ಥವಿದೆ. ಅನುಪ್ರಾಸ ಹಾಗೂ ವಿಡಂನಾತ್ಮಕವಾಗಿದ್ದರೂ ಬಹುತೇಕ ಕವನಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಶೋಷಣೆ, ಢೋಂಗಿ-ಪೊಳ್ಳು ವಿತಂಡವಾದಗಳನ್ನು ಇಲ್ಲಿಯ ಕವಿತೆಗಳು .ಧಿಕ್ಕರಿಸಿವೆ. ‘ನನ್ನೊಳಗಿನ ದೇವರು’ ಕವನದಲ್ಲಿ ಜೀವನೋಪನಿಷತ್ತು ಕಲಿಸುವ ದೇವರು ಎನ್ನುವ ಮೂಲಕ ಈ ಬಗೆಗಿನ ಗೊಂದಲ-ಘರ್ಷಣೆಗಳನ್ನು ನಿವಾರಿಸಿದ್ದಾರೆ. ಆರೋಗ್ಯಕಾರಿ ಮನೋಧೋರಣೆಯ ಕವಿತೆಗಳಿವು’ ಎಂದು ಪ್ರಶಂಸಿಸಿದ್ದಾರೆ.
ವಿ. ನರಸಿಂಹ ವರ್ಮ ಮೂಲತಃ ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದವರು. ಕಾನೂನು ಪದವೀಧರರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ದ್ದಾರೆ. ಇವರು ಬರೆದ ಕಥೆ-ಕವನ-ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶದ ಚಿತ್ರಗಳು-ಇವರ ಮೊದಲ ಕವನ ಸಂಕಲನ. ಬೆಂಗಳೂರಿನ ಸಾಂಸ್ಕೃತಿಕ ಭಾರತಿ ಸಂಸ್ಥೆಯಿಂದ ‘ಕಾವ್ಯಶ್ರೀ’ ಹಾಗೂ ಮೈಸೂರು ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ವರಕವಿ ಬೇಂದ್ರೆ’ ಕಾವ್ಯು ಪುರಸ್ಕಾರ ದೊರೆತಿದೆ. ...
READ MORE