ಎನ್. ಕೆ. ಇಬ್ಬನಿ ನಡಂಪಲ್ಲಿ -ಕಾವ್ಯನಾಮದಿಂದ ಬರೆಯುವ ಎನ್.ಕೆ.ಮಂಜುನಾಥ ಅವರ ಕವನ ಸಂಕಲನ ‘ಆ ದಿನಗಳು'. ವಸ್ತು ವೈವಿಧ್ಯತೆಯ 40ಕ್ಕೂ ಅಧಿಕ ಕವನಗಳಿವೆ. ‘ಕೃತಿಗೆ ಮುನ್ನುಡಿ ಬರೆದ ಉಪನ್ಯಾಸಕಿ ಹಾಗೂ ಸಾಹಿತಿ ಭಾರ್ಗವಿ ಶ್ರೀ ‘ ಗ್ರಾಮೀಣ ಪರಿಸರದ ಗಿರಿ-ವನ-ನೆಲ-ಜಲ-ಜೀವ-ನಿಸರ್ಗ ಹೀಗೆ ನಿರಂತರ ಸ್ಪಂದನದೊಂದಿಗೆ ಬೆಳೆದ ಕವಿ ಸುತ್ತಲಿನ ಸಾಮಾಜಿಕ ಪರಿಸರದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ನಯಗಾರಿಕೆ, ಎದೆಗಾರಿಕೆ, ದುರ್ಬರ ದಿನಗಳನ್ನು ಎದುರಿಸಿದ ರೀತಿ ಹಾಗೂ ಅಂತಿಮವಾಗಿ ಪಟ್ಟ ಸಂತಸ, ಬಾಲ್ಯದ ಕಡುಕಷ್ಟದ ದಿನಗಳು ಹೀಗೆ ಕಾವ್ಯದ ವಸ್ತುವಾಗಿ ಪರಿವರ್ತನೆಗೊಳಿಸಿದ್ದಾರೆ. ವಾಸ್ತವಿಕ ಬದುಕಿನ ಕಹಿತನದ ಅರಿವು ಮೂಡಿಸುವ ಪ್ರಯತ್ನ ಮತ್ತು ಪ್ರಕೃತಿಯ ಸೊಬಗನ್ನು ಸಂಭ್ರಮಿಸದ ನಿರಾಶೆ ಎಲ್ಲವನ್ನೂ ಕವಿತೆಗಳಲ್ಲಿ ಕಾಣಬಹುದು ಎಂದು ಪ್ರಶಂಸಿಸಿದ್ದಾರೆ.
ಬೆನ್ನುಡಿ ಬರೆದ ಸಾಹಿತಿ ಎಚ್. ಹನುಮಂತ ವಗ್ಗರ್ ‘ಹೋರಾಟದ ಹಿನ್ನೆಲೆಯಾಗಿಸಿ ಬೆಳೆದ ಮಂಜುನಾಥ ಅವರು ಸಾಹಿತಿ-ಕವಿಯಾಗಿಯೂ ಮಹತ್ವದ ಹೆಜ್ಜೆ ಇರಿಸಿದ್ದು, ಅಸಹಾಯಕರ ಬದುಕನ್ನು ಕಾವ್ಯ ವಸ್ತುವಾಗಿಸಿ ಸಾಮಾಜಿಕ ಹೊಣೆಗಾರಿಕೆ ತೋರಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಎನ್.ಕೆ.ಇಬ್ಬನಿ ನಡಂಪಲ್ಲಿ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕ ಎನ್.ಕೆ. ಮಂಜುನಾಥ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ನಡಂಪಲ್ಲಿ (ಜನನ: 14-05-1984) ಗ್ರಾಮದವರು. ತಂದೆ ಕೆಂಚಪ್ಪ, ತಾಯಿ ನಂಜಮ್ಮ. ಸಂಘಟನೆಯೊಂದಿಗೆ ಬದುಕು ರೂಪಿಸಿಕೊಳ್ಳುತ್ತಾ ಸಾಹಿತ್ಯಾಸಕ್ತಿ ಬೆಳೆಸಿಕೊಂಡವರು. ಕೃಷಿಕರು. 2008ರಲ್ಲಿ ಕಾವ್ಯಾಮೃತಾ-ಸಂಪಾದಿತ ಕವನಗಳ ಸಂಕಲನ ಹಾಗೂ 2010ರಲ್ಲಿ ತಮ್ಮದೇ ಕವನ ಸಂಕಲನ-ಆ ದಿನಗಳು; ಪ್ರಕಟಗೊಂಡಿವೆ. ...
READ MORE