ಕವಿ-ಕಥೆಗಾರ ಚಂದ್ರಪ್ರಭ ಕಠಾರಿ ಅವರ ಕವನ ಸಂಕಲನ-(ಅ)ಗೋಚರ ಕೈ. ಕವಿ ಡಾ. ಟಿ. ಯಲ್ಲಪ್ಪ ಅವರು ಕೃತಿಗೆ ಬೆನ್ನುಡಿ ಬರೆದು ‘ಬಹಳಷ್ಟು ದಿನ ಓದಿಕೊಂಡೇ ಕವಿತಾ ರಚನೆಗೆ ತೊಡಗಿಕೊಂಡ ಕವಿಯೊಬ್ಬನ ಆತ್ಮವಿಶ್ವಾಸ ಹಾಗೂ ಜೀವನಾನುಭವದ ದೊಡ್ಡ ಹರವು ಇಲ್ಲಿಯ ಕವಿತೆಗಳಲ್ಲಿ ಕಾಣಬಹುದು. ಕವಿತೆಯಲ್ಲಿ ಬಳಸುವ ಪದಗಳು ಹಾಗೂ ಹೊರಡಿಸಬಹುದಾದ ಬಹುಮುಖಿ ಅರ್ಥಸಾಧ್ಯತೆ ಮತ್ತು ಧ್ವನಿಸಾಧ್ಯತೆಗಳ ಬಗ್ಗೆ ಕವಿಗೆ ಅರಿವಿದೆ. ಇಲ್ಲಿಯ ಕವಿತೆಗಳ ವಸ್ತು-ಗರ್ಭಸ್ಥ ತಾಯಿಯೊಡಲ ಭ್ರೂಣದ ಆತಂಕದಿಂದ ಹಿಡಿದು ಬಾಡಿಗೆ ತಾಯಿಯ ನಿರ್ಲಿಪ್ತ ಭಾವಕೋಶದವರೆಗೆ, ದೇವರು-ದೆವ್ವದ ಅಸ್ತಿತ್ವದ ಬಗೆಗಿನ ಜಿಜ್ಞಾಸೆಯವರೆಗೆ, ದಯೆ ಇರದ ಬರದ ನಾಡಿನ ಸಂತೆಯಲ್ಲಿ ಮಾರಾಟವಾಗಿ, ಕಟುಕನ ಕೈಸೇರಿ, ಹಸಿದ ಬಡವನ ಹೊಟ್ಟೆ ಸೇರಿದ, ಹಸಿದ ಹಸುವಿನ ಬಗ್ಗೆ, ಬಡವನ ಹಸಿವಿಗೆ ದಯಾಮರಣವನ್ನು ದಯಪಾಲಿಸಲಾಗದ ಕಟುಕ ಸಮಾಜದಲ್ಲಿ-ಬಡವನ ಹಸಿವಿಗೆ ಸಾಯಲಿರುವ ಹಸುವನ್ನು ಕೊಂದು ಅನ್ನವಾಗಿಸಿದ ಕಟುಕನಿಗಿಂತ ಭಗವಂತನನ್ನೇ ಮಿಗಿಲಾದ ದಯಾಮಯಿ ಎಂದು ಕರೆಯುವ ಔದಾರ್ಯದವರೆಗೆ ಹರಡಿವೆ. ಇಲ್ಲಿಯ ಕವಿತೆಗಳಿಗೆ ಮನುಷ್ಯತ್ವವನ್ನೇ ಮರೆತು ಮೃಗಗಳಾದ ಮನುಷ್ಯರ ಸಣ್ಣತನಗಳನ್ನು ಅನುಕಂಪದಿಂದ ಕಾಣಿಸುವ ಕಣ್ಣಿದೆ. ಮಿಡಿಸುವ ಕರುಳಿದೆ ಇಲ್ಲಿ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಚಂದ್ರಪ್ರಭ ಕಠಾರಿ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಕತೆ, ಕವನ, ನಾಟಕ ಬರೆಯುವುದು ಹವ್ಯಾಸ. ಕಠಾರಿ ಕತೆಗಳು ( ಇಲ್ಲಿಯ ಹಲವು ಕತೆಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕ ಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿ ಬಹುಮಾನ ಪಡೆದಿವೆ.) ಮತ್ತು ಅಂಬು ( ನಾಟಕ) ಪ್ರಕಟವಾಗಿವೆ. ...
READ MORE