ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಇವು ಎಚ್.ಎಸ್.ವಿ. ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಲು ಕಾರಣವಾದವು. ಹಾಗಾಗಿ ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕತೆಯು ಪರಂಪರೆಯೊಂದಿಗೆ ನಡೆಸಿದ ನಿರಂತರ ಹೊಕ್ಕಾಟ ಮತ್ತು ಸಂಘರ್ಷದ ಫಲವಾಗಿ ನಿಷ್ಪನ್ನವಾದಂಥದ್ದು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ವೆಂಕಟೇಶಮೂರ್ತಿ, ಮಕ್ಕಳಿಗಾಗಿ ಕವಿತೆ ನಾಟಕ ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಲಿದಾಸನ ಋತುಸಂಹಾರ ಕಾವ್ಯಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ಪಡೆದಿದೆ.
ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದೀತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು-ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಮೊದಲಾದುವು ಮುಖ್ಯ ನಾಟಕಗಳು, ಅಳಿಲು ರಾಮಾಯಣ, ಹಕ್ಕಿಸಾಲು, ಚಿನ್ನಾರಿಮುತ್ತ, ಅಜ್ಜಿ ಕತೆ ಹೇಳು-ಮುಖ್ಯ ಮಕ್ಕಳ ಕೃತಿಗಳು. 'ಈ ಮುಖೇನ ಇವರ ವೈಚಾರಿಕ ಪ್ರಬಂಧಗಳ ಸಂಪುಟ, ಅನಾತ್ಮಕಥನ, ಅಕ್ಕಚ್ಚುವಿನ ಅರಣ್ಯಪರ್ವ, ಆತ್ಮಕಥನಾತ್ಮಕ ಪ್ರಬಂಧಗಳು, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ-ಇವರು ಪಡೆದ ಕೆಲವು ಮುಖ್ಯ ಗೌರವ ಪುರಸ್ಕಾರಗಳು.
ಕವನ ಸಂಕಲನಗಳು: ಪರಿವೃತ್ತ, ಬಾಗಿಲು ಬಡಿವ ಜನ, ಮೊಖ್ತಾ, ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ವಿಸರ್ಗ, ಎಲೆಗಳು ನೂರಾರು, ಅಗ್ನಿಸ್ತಂಭ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಅಕಾಶ, ಮೂವತ್ತು ಮಳೆಗಾಲ, ನದಿತೀರದಲ್ಲಿ, ಉತ್ತರಾಯಣ ಮತ್ತು.., ರಾಮಕೃಷ್ಣ ಮನೆಗೆ ಬಂದರೆ (ಆಯ್ದ ಪದಗಳು), ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು, ಶಂಖದೊಳಗಿನ ಮೌನ, ಶಫೀಲ್ಡ್ ಕವಿತೆಗಳು, ಆಕಾಶ ಸೇತುವೆ (ಅನುವಾದಿತ), ಆಯ್ದ ಕವಿತೆಗಳು, ಎಚ್. ಎಸ್. ವಿ ಸಮಗ್ರ ಕವಿತೆಗಳು ಇತ್ಯಾದಿ.
ಸಂಕಲನಗಳು: ಬಾಣಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ.
ಕಾದಂಬರಿಗಳು : ತಾಪಿ, ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ವೇದವತಿ ನದಿಯಲ್ಲ.
ಸಾಹಿತ್ಯ ಚರಿತ್ರೆ : ಕೀರ್ತನಕಾರರು.
ಸಾಹಿತ್ಯ, ವಿಮರ್ಶೆ : ನೂರು ಮರ ನೂರು ಸ್ವರ, ಮೇಘದೂತ, ಕಥನಕವನ, ಆಕಾಶದ ಹಕ್ಕು, ಮೇಘದೂತ-ಕಾಳಿದಾಸ- ಬೇಂದ್ರೆ, ಪು.ತಿ.ನ ಪರಿಕ್ರಮ.
ಸಂಪಾದನೆ : ಇಪತ್ತನೇ ಶತಮಾನದ ಕನ್ನಡ ಕಾವ್ಯ, ಪು.ತಿ.ನ ಸಮಗ್ರ ಗದ್ಯ ಹಾಗೂ ಸಾನೆಟ್ ಸಂಗ್ರಹ.
ನಾಟಕಗಳು : ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಉರಿಯ ಉಯ್ಯಾಲೆ, ಅಗ್ನಿವರ್ಣ, ಸ್ವಯಂವರ, ಮೇಘ ಮಾನಸ, ಅಹಾತ, ಚೈತ್ರರಥ, ಸಮಗ್ರ ನಾಟಕ ಇತ್ಯಾದಿ.
ಅನುವಾದ : ಋತುವಿಲಾಸ (ಕಾಳಿದಾಸನ ಋತುಸಂಹಾರದ ಅನುವಾದ). ಸಂಶೋಧನಾ ಪ್ರಬಂಧ : ಕನ್ನಡದಲ್ಲಿ ಕಥನ ಕವನಗಳು.
ಮಕ್ಕಳ ಸಾಹಿತ್ಯ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು, ಉತ್ತರಾಯಣ ಮತ್ತು..., ಸಿ.ವಿ.ರಾಮನ್, ಹೋಮಿಜಹಾಂಗೀರಬಾಬಾ, ಸೋದರಿ ನಿವೇದಿತಾ, ಬಾಹುಬಲಿ, ಅಳಿಲು ರಾಮಾಯಣ ಮತ್ತು ಸುನಾದಸುತ್ತು (ನಾಟಕಗಳು), ಚಿನ್ನಾರಿಮುತ್ತ (ಕಾದಂಬರಿ), ಅಮಾನುಷರು ಮತ್ತು ಇತರ ಮಕ್ಕಳ ಕಥೆಗಳು, ಬಾರೋ ಬಾರೋ ಮಳೆರಾಯ (ಕವನ), ಎಚ್ಚೆಸ್ವಿ ಸಮಗ್ರ ಮಕ್ಕಳ ನಾಟಕಗಳು ಇತ್ಯಾದಿ.
ಆತ್ಮಕಥೆ : ಅನಾತ್ಮಕಥನ, ಅಕ್ಕಚ್ಚುವಿನ ಅರಣ್ಯಪರ್ವ,
ಪ್ರಬಂಧ ಸಂಕಲನ : ಎಕ್ಸ್‌ಮಾಸ್ ಮರ, ತಾವರೆಯ ಬಾಗಿಲು.
ಗೀತಸಾಹಿತ್ಯ : ಗೀತಸಂಪುಟ, ತೂಗುಮಂಚ, ಸುನೀತಭಾವ (ಸಾನೆಟ್ಟುಗಳು).
ಪ್ರವಾಸಕಥನ : ಸಿಂಗಾರಿ