‘ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ’ ಕೃತಿಯು ಪಂಡಿತ್ ರಾಜೀವ ತಾರನಾಥ ಅವರ ಜೀವನ ಸಾಧನೆ ಕುರಿತ ಕೃತಿಯಾಗಿದೆ. ಲೇಖಕಿ ಸುಮಂಗಲಾ ಅವರು ಈ ಕೃತಿಯಲ್ಲಿ “ರಾಗ ಇದೆಯಲ್ಲ ಅದು ಹುಟ್ಟುವಾಗ ಒಂದು ಮಗು ಥರಾನೇ ಹೇಗೆ ಹುಟ್ಟುತ್ತೆ.. ಹಾಗೆ ಬರುತ್ತೆ. ಆಮೇಲೆ ಅದಕ್ಕೆ ಅಲಂಕಾರ ಮಾಡುವುದು. ಯಾವ ಸ್ವರ ಎಲ್ಲಿ ಅಲಂಕರಿಸಬೇಕು, ಎಲ್ಲಿ ಎಷ್ಟು ಇರಬೇಕು ಅಂತ. ಸೊಂಟದ ಡಾಬನ್ನು ನೆತ್ತಿಗೆ ಹಾಕೋಕೆ ಆಗಲ್ಲ. ಹಂಗೆ ಕಿರೀಟವನ್ನು ಸೊಂಟಕ್ಕೆ ತೊಡಿಸೋಕೆ ಆಗಲ್ಲ. ಮುದುಕಿಯ ಅಲಂಕಾರವನ್ನು ಹುಡುಗಿಗೆ ಹಾಗೆಯೇ ಹುಡುಗಿಯ ಅಲಂಕಾರವನ್ನು ಮಗುವಿಗೆ ಮಾಡಲು ಆಗುವುದಿಲ್ಲ. ಯಾವುದಕ್ಕೆ ಎಷ್ಟು ಹೇಗೆ ಅಲಂಕಾರ ಮಾಡಬೇಕು ಎಂದು ಯೋಚಿಸಿ ಮಾಡಬೇಕಾಗುತ್ತೆ. ರಾಗವೊಂದು ಈಗ ಹುಟ್ಟಿ ಅವರ ಬೊಗಸೆಯಲ್ಲಿದೆ ಎಂಬಂತೆ ಕೈಗಳ ಲಾಸ್ಯ ಇತ್ತು. ಕಿಟಕಿಯಿಂದ ಹರಿದು ಬಂದ ಬೆಳಕಿನ ಕಿರಣಗಳು ಅವರ ಬೊಗಸೆಯಲ್ಲಿ ರಾಗಲಾಸ್ಯ ಸೃಷ್ಟಿಸಿದ್ದವು” ಎನ್ನುವಂತಹ ಮಾತುಗಳು ಇಲ್ಲಿ ಬಿಂಬಿತವಾಗಿದೆ. ವಿಶ್ವ ಪ್ರಸಿದ್ದ ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥರ ಜೀವನ ಚಿತ್ರಣವಿದು. ರಾಜೀವ ತಾರಾನಾಥರ ಬದುಕಿನ ಕೆಲ ಚಿತ್ರಣ ಹಾಗೂ ಪ್ರಸಿದ್ದ ಸಾಹಿತಿಗಳು, ಕಲಾವಿದರು ಬರೆದಂತಹ ಇಲ್ಲಿನ ಲೇಖನಗಳು ಪಂಡಿತ್ ರಾಜೀವ್ ತಾರಾನಾಥರ ಪ್ರತಿಭೆಯ ಅನಾವರಣವನ್ನು ಮಾಡುತ್ತವೆ.
ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ...
READ MORE