ಗಂಗಾವತಿ ಬೀಚಿ ಎಂದೇ ಖ್ಯಾತರಾದ ಗೆಳೆಯ ಪ್ರಾಣೇಶ್ `ನುಡಿ ಪಡಿ'ಯಲ್ಲಿ ಸತ್ಯಕ್ಕೇ ಹೆಚ್ಚು ಒತ್ತು ನೀಡಿರುವುದು ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದಂತಾಗಿದೆ. “ಮಾತೆಂಬುದು ಜ್ಯೋತಿರ್ಲಿಂಗ” ಎಂದರು ಜಗಜ್ಯೋತಿ ಬಸವಣ್ಣನವರು. ಮಾತು ಜ್ಯೋತಿರ್ಲಿಂಗವಾಗಬೇಕಾದರೆ ಆಲೋಚನೆಗಳ ಹಣತೆಯಲ್ಲಿ ಅಧ್ಯಯನದ ತೈಲವನ್ನೆರೆದು ಸುಜ್ಞಾನದ ಬತ್ತಿಯನ್ನಿರಿಸಿ ಸುಬೋಧೆಯ ಕಿಡಿಯನ್ನು ತಾಗಿಸಿದರೆ ಮಾತ್ರ ಸಾಧ್ಯ. ಪ್ರಾಣೇಶರ ಈ ಪುಸ್ತಕದಲ್ಲಿ ಹಲವಾರು ಪ್ರಖರ ವಿಷಯಗಳನ್ನು ಕುರಿತಾದ ಲೇಖನಗಳಿವೆ. ಇಂದಿನ ಜನಜೀವನದ `ಅತಿ'ಗಳನ್ನು ಹಿಂದಿನ ಕಾಲಘಟ್ಟದ `ಹಿತ'ಕ್ಕೆ ಹೋಲಿಸುವ ಪರಿಯು ಹಿಂದಿನ ಪೀಳಿಗೆಗೆ ಮುದವನ್ನೂ, ಇಂದಿನ ಪೀಳಿಗೆಗೆ ಎಚ್ಚರಿಕೆಯನ್ನೂ, ಮುಂದಿನ ಪೀಳಿಗೆಗೆ ಗತವೈಭವದ ಮೆಲುಕನ್ನೂ ನೀಡುವಲ್ಲಿ ಈ ಲೇಖನಗಳು ಸಲವಾಗಿವೆ. “ನುಡಿ ಪಡಿ” ಪುಸ್ತಕದ ಹೆಸರೇ ಸೂಚಿಸುವಂತೆ ಇದು ನುಡಿಗಳ ಸೋಪಾನ. ಮಧ್ವರ ಬೋಧನೆಗಳಿಂದ ಹಿಡಿದು ಹೊರದೇಶದ ಆಚಾರ-ವಿಚಾರಗಳವರೆಗೆ ಹಬ್ಬಿರುವ ಈ ಸೋಪಾನದ ಮೆಟ್ಟಿಲುಗಳಲ್ಲಿ ಅನೇಕ ಬೋಧಪ್ರದ ವಿಷಯಗಳಿವೆ. ಹಳೆಯ ಚಿತ್ರಗೀತೆಗಳ ಸುಮಧುರ ಜಾಡಿನಲ್ಲಿ ದೊರಕುವ ಆನಂದದ ಪಲುಕುಗಳಿವೆ. ಪ್ರಾಣೇಶನೆಂಬ ಮಾಗಿದ ಮರವು ಬಿಟ್ಟಿರುವ ಈ “ನುಡಿ ಪಡಿ” ಎಂಬ ಲವು ರುಚಿಕರವಾಗಿದೆ, ಮೆಲ್ಲಲು ಯೋಗ್ಯವಾಗಿದೆ, ಚರ್ವಿತಚರ್ವಣಕ್ಕೆ ಗ್ರಾಸವಾಗಲು ಶಕ್ತವಾಗಿದೆ -ಎನ್. ರಾಮನಾಥ್
ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು. ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...
READ MORE