ಲೇಖಕ ರೋಹಿಣಾಕ್ಷ ಶಿರ್ಲಾಲು ಅವರ ಲೇಖನಗಳ ಸಂಗ್ರಹ ಸಿರಿ ಬೆಳಗು. ಕೃತಿಯ ಉಪಶೀರ್ಷಿಕೆಯಲ್ಲಿ ಅವಿನಾಶಿ ಪರಂಪರೆಯ ಕಥನ ಎಂಬುದಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಬಿ.ವಿ.ವಸಂತ್ ಕುಮಾರ್ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಈ ಕೃತಿಯಲ್ಲಿ ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವರ್ಕರ್, ಈಶ್ವರಚಂದ್ರ ವಿದ್ಯಾಸಾಗರ, ಅರವಿಂದ ಮಹರ್ಷಿ, ದೀನ್‌ದಯಾಳ್ ಉಪಾದ್ಯಾಯ, ಲೋಕಮಾನ್ಯ ತಿಲಕ, ಮಹಾತ್ಮ ಗಾಂಧಿ, ಧರಂಪಾಲ್, ಆನಂದ ಕುಮಾರಸ್ವಾಮಿ, ಕುದ್ಮಲ್ ರಂಗರಾಯ, ಚಾಪೇಕರ್ ಸಹೋದರರು ಮತ್ತು ಕಿಟಲ್ ಮೊದಲಾದ ಮಹಾಮಹಿಮರ ಚಿಂತನೆಗಳ ಜೀವನ ಸಾಧನೆಗಳ ಸ್ಮರಣೆಯಿದೆ. ಸ್ವಾತಂತ್ಯ್ರ ಸ್ವರಾಜ್ಯಗಳ ಬಗ್ಗೆ ಚರ್ಚೆಯಿದೆ. ವಿಜ್ಞಾನ, ಕಲೆ, ಶಿಕ್ಷಣ, ರಾಷ್ಟ್ರೀಯತೆ ಮೊದಲಾದ ಹತ್ತಾರು ಸಂಗತಿಗಳನ್ನು ವಿಶ್ಲೇಷಿಸಿದ್ದಾರೆ. ಆಗಸ್ಟ್ 29, 1947ನ್ನು ನೆನೆಯುತ್ತಾ “ಯಾವ ಬಾಲಕನೊಬ್ಬನನ್ನು ಅಸ್ಪೃಶ್ಯನಾಗಿ ಹುಟ್ಟಿದ ಕಾರಣಕ್ಕೆ ಶಾಲೆಯ ಅಧ್ಯಾಪಕರುಗಳಿಂದ ಹಿಡಿದು ಸಹಪಾಠಿಗಳವರೆಗೆ ಅವಮಾನಕ್ಕೆ ಗುರಿಮಾಡಲಾಗಿತ್ತೋ, ಯಾವ ತರುಣ ಚೌದಾಲ ಕೆರೆಯ ನೀರಿನ ಹಕ್ಕಿನಲ್ಲಿ ಮಾನವ ಘನತೆಯನ್ನು ಕಾಣಲು ಪ್ರಯತ್ನಿಸಿ ಹಲ್ಲೆಗೆ ಒಳಗಾಗಿದ್ದರೋ, ಕಾಳಾರಾಮನ ದರ್ಶನಕ್ಕೆ ಆರ್ದ್ರ ಹೃದಯದಿಂದ ಹಂಬಲಿಸಿದರೂ ಕರಗದ ಕಲ್ಲು ಹೃದಯಗಳ ಕಾಠಿಣ್ಯದಿಂದ ನಲುಗಿಹೋಗಿದ್ದರೋ, ಬರೋಡಾದ ರಾಜನ ಮಿಲಿಟರಿ ಸೆಕ್ರೆಟರಿಯಾಗಿದ್ದರೂ ವಾಸದ ಮನೆಯಿಂದ ಹೊರದಬ್ಬಿಸಿಕೊಂಡು ಬಯಲು-ಬೀದಿಯಲ್ಲೊಂದು ರಾತ್ರಿಯೆಲ್ಲಾ ಕಳೆಯಬೇಕಾಗಿ ಬಂದಿತ್ತೋ ಅಂತಹ ವಂಚಿತನೊಬ್ಬ ಈ ದೇಶದ ಭವಿಷ್ಯವನ್ನು ಸಂವಿಧಾನವೆಂಬ ಅಕ್ಷರಮಾಲೆಗಳ ನಡುವೆ ಪೋಣಿಸಿ ಸ್ವರಾಜ್ಯವು ಸುರಾಜ್ಯವಾಗಲು ಕಾರಣರಾದ ಐತಿಹಾಸಿಕ ದಿನವಿದು” ಎಂದಿದ್ದಾರೆ. ಇದು ರೋಹಿಣಾಕ್ಷ ಅವರ ವಿಚಾರಯುಕ್ತ ಭಾವಪೂರ್ಣ ಲಯಬದ್ಧ ಬರಹದ ಶೈಲಿ. ಅವರದು ಜಡವಾದಿ ವಿಚಾರವಾದವಲ್ಲ. ಅವರದು ಚೇತನವಾದಿ ವಿಚಾರವಾದವಾಗಿದೆ. ಅವರದು ಅರಾಷ್ಟ್ರೀಯವಾದಿ ದೇಶದ್ರೋಹಿ ನಿಲುವುಗಳಲ್ಲ. ಅವರದು ರಾಷ್ಟ್ರೀಯಯವಾದಿ ದೇಶಭಕ್ತಿಯ ನಿಲುವುಗಳು. ಅವರದು ಯಥಾಸ್ಥಿತಿವಾದಿಯ ಕರ್ಮಠತೆ ಅಲ್ಲ ಅಥವಾ ಸಂಘರ್ಷವಾದಿ ಸರ್ವಾಧಿಕಾರಿ ರಕ್ತಪಾತಿ ಕ್ರೌರ್ಯದ ನೆಲೆಯೂ ಅಲ್ಲ. ಅವರದು ಎಲ್ಲೆಡೆಯ ಒಳಿತುಗಳನ್ನು ಒಂದುಗೂಡಿಸಿ ಎಲ್ಲ ರೀತಿಯ ಸಾಮರಸ್ಯವನ್ನು ಸಾಧಿಸುವ ನಿಷ್ಠುರತೆಯ ಅಚಲ ನೆಲೆಯಾಗಿದೆ ಎಂಬುದಾಗಿ ಹೇಳಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇಲ್ಲಿ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರು. 2005ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪೂರೈಸಿರುತ್ತಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ ಅನೇಕ ರಾಷ್ಟ್ರೀಯ – ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಇವರು ಯುವ ತಲೆಮಾರಿನ ಭರವಸೆಯ ಲೇಖಕರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಮಾಡಿದ ...
READ MORE