ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ 'ಮನೋವಿಜ್ಞಾನವೆಂದರೆ ಏನು?” ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು "ಮನೋವಿಜ್ಞಾನ ಯಾಕೆ ಬೇಕು?" ಎನ್ನುವಲ್ಲಿ. ಮೊದಲನೆಯ ಗುಂಪಿನವರು ವಿವರಣಾತ್ಮಕ ಮನೋವಿಜ್ಞಾನದ ನಿರ್ಮಾಪಕರು. ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರಂಥದ ಕರ್ತೃ ಪ್ರೊ. ವೆಂಕಟರೆಡ್ಡಿಯವರು, ನನ್ನ ಪ್ರಕಾರ, ಎರಡನೇ ಗುಂಪಿಗೆ ಸೇರಿದವರು. ರೆಡ್ಡಿ ಅವರನ್ನು ನಾನು ಅವರು ವಿದ್ಯಾರ್ಥಿಯಾಗಿದ್ದ ಕಾಲದಿಂದಲೂ ಬಲ್ಲೆ. ಅಂದಿನಿಂದಲೂ ಅವರ ಆಸಕ್ತಿ ಇದ್ದುದೆಲ್ಲ ಮನೋವಿಜ್ಞಾನ ಸೂತ್ರಗಳನ್ನು ಮಾನವರ ಜೀವನೋನ್ನತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಾಗಿತ್ತು. ಈ ದಿಶೆಯಲ್ಲಿ ಅವರು ಬಹಳಷ್ಟು ಕೃಷಿ ಮಾಡಿದ್ದಾರೆ; ಲೇಖನಗಳನ್ನು ಬರೆದಿದ್ದಾರೆ; ಭಾಷಣ ಮಾಡಿದ್ದಾರೆ. ಗ್ರಂಥರಚನೆ ಮಾಡಿದ್ದಾರೆ.
ಲೇಖಕ ಡಾ. ಆರ್. ವೆಂಕಟರೆಡ್ಡಿ ಅವರು ಮೂಲತಃ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರುದ್ರಾವರಂ ಗ್ರಾಮದವರು. ತಂದೆ ಶಂಭುರೆಡ್ಡಿ, ತಾಯಿ ಅಯ್ಯಮ್ಮ. ಎಂ.ಎ (ಮನೋವಿಜ್ಞಾನ), ಎಂ.ಇಡಿ ಹಾಗೂ ಪಿಎಚ್ ಡಿ ಪದವೀಧರರು. ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ, ಸೈಕೋಥೆರಪಿ, ಲೈಂಗಿಕವಾದ ಸಾಮಾನ್ಯ ದುರ್ಬಲತೆಗಳು ಹಾಗೂ ಲೈಂಗಿಕ ಥೆರಪಿ, ಎಚ್ ಐವಿ/ಏಡ್ಸ್ ಶಿಕ್ಷಣ, ಗ್ರಾಮೀಣ ಸಂಶೋಧನಾ ವಿಧಾನ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾನಸಿಕ ಆರೋಗ್ಯದಲ್ಲಿ ವಿಷಯಗಳಲ್ಲಿ ಬೆಂಗಳೂರು, ಹೈದ್ರಾಬಾದ್, ಮುಂಬೈ, ಮೈಸೂರು ಹೀಗೆ ವಿವಿಧೆಡೆ ತರಬೇತಿ ಪಡೆದಿದ್ದಾರೆ. ‘ಕಾಲೇಜು ವಿದ್ಯಾರ್ಥಿಗಳ ಬಡತನ ಹಾಗೂ ವ್ಯಕ್ತಿತ್ವ ವಿಕಸನ’ ಎಂಬುದು ಇವರ ಪಿಎಚ್ ಡಿ ವಿಷಯ. ...
READ MORE