ಲೇಖಕ ವಿಶ್ವನಾಥ ಎಂ. ಮರತೂರು ಅವರ ಕೃತಿ-ಪ್ರೇರಣಾ. ನಮ್ಮ ಬದುಕೆಂಬ ದೋಣಿಗೆ ನಾವೇ ಣಾವಿಕರು ಎಂಬ ಉಪಶೀರ್ಷಿಕೆ ಮೂಲಕ ಪ್ರೇರಣಾತ್ಮಕ ಹಾಗೂ ಜೀವನ ಸ್ಪೂರ್ತಿಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಜೀವನದಲ್ಲಿ ಯಾವುದೋ ಕಾರಣಕ್ಕೆ ಸೋತಾಗ, ಬದುಕಿನ ಕ್ಷಣಗಳನ್ನೆ ಅನುಭವಿಸದೇ ಕುಗ್ಗಿ ಹೋಗುತ್ತಾರೆ, ಅಂತಹವರಿಗೆ ಮತ್ತೊಮ್ಮೆ ಬದುಕಿನ ಕ್ಷಣದ ಅವಕಾಶವನ್ನು ನೀಡುತ್ತದೆ. ಜೀವನದಲ್ಲಿ ಯಶಸ್ಸಿನ ದಾರಿಯನ್ನು ಹುಡುಕುತ್ತಿರುವ, ಈಗಾಗಲೇ ಜೀವನದಲ್ಲಿ ಸೋತಿರುವರಿಗೆ ಸ್ಪೂರ್ತಿ ನೀಡುವುದಷ್ಟೆ ಅಲ್ಲ ಬದಲಿಗೆ ಮಾರ್ಗದರ್ಶಿಯಾಗುತ್ತದೆ.
ಋಣಾತ್ಮಕ ಅಂಶಗಳೇ ತುಂಬಿರುವ ಇವತ್ತಿನ ಸಂದರ್ಭದಲ್ಲಿ ನಮ್ಮೊಳಗೆ ಧನಾತ್ಮಕ ಅಂಶಗಳನ್ನು ಚಿಗುರೊಡೆಸುವ ಮಹತ್ವದ ಕೆಲಸ ಈ ಪುಸ್ತಕ ಮಾಡುತ್ತದೆ. ಸೋಲು ಗೆಲುವಿನ ಮಾರ್ಗದರ್ಶನ ಈ ಪುಸ್ತಕ ಪ್ರತಕ್ಷ ಅನುಭವಗಳ ಮೂಲಕ ಮಾಡಲಿದೆ.
ಸಮಾಜ ನನಗೇನು ಮಾಡಿದೆ, ನಾನೇಕೆ ಸಮಾಜದ ಉದ್ಧಾರಕ್ಕೆ ಶ್ರಮಿಸಲಿ ಎಂಬ ನಕಾರಾತ್ಮಕ ಚಿಂತನೆ ಮಾಡುವವರಿಗೆ ಪ್ರೇರಣಾ ಪುಸ್ತಕ ಧನಾತ್ಮಕ ಸಮಾಜ ಕಟ್ಟುವ ನಿರ್ಧಾರವನ್ನು ಪ್ರಕಟಿಸುತ್ತದೆ. ಪ್ರತಿ ಲೇಖನವು ಸಾವಿನಾಚೆಗೆ ಬದುಕಿದೆ, ಸೋಲಿನಾಚೆಗೆ ಗೆಲುವಿದೆ, ನೋವಿನಾಚೆಗೆ ನಲಿವಿದೆ, ಕಷ್ಟದಾಚೆಗೆ ಸುಖವಿದೆ ಎಂಬ ವಿಚಾರವನ್ನು ಅತ್ಯಂತ ಗಟ್ಟಿಯಾಗಿ ಪ್ರಸ್ತುತಪಡಿಸುತ್ತವೆ.
ಇಂದಿನ ಯುವ ಸಮೂಹ ಸಾಧನೆಯ ಅರ್ಧ ಪಥದತ್ತ ಸಾಗಿ, ನನ್ನಿಂದ ಮುಂದೇನೋ ಮಾಡಲಾಗದು ಎಂದು ಕೈಚೆಲ್ಲಿ ಕುಳಿತಿರುವ ಸಂದರ್ಭದಲ್ಲಿ ಅರಿವಿನ ಆಲೆಯೊಳಗೆ, ಅನುಭವದ ನೆಲೆಯಲ್ಲಿ ಯುವ ಜನಾಂಗಕ್ಕೆ `ಪ್ರೇರಣಾ' ಆಕರ ಗ್ರಂಥವಾಗಲಿದೆ.
ಲೇಖಕ ಕೆ.ಎಂ.ವಿಶ್ವನಾಥ ಮರತೂರ, ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರು ಗ್ರಾಮದವರು. ಕಲಬುರ್ಗಿಯಲ್ಲಿ ಎಂ.ಎಸ್.ಸಿ. ಬಿ.ಈಡಿ. ಪದವೀಧರರು. ಕುವೆಂಪು ಅವರ 109ನೇ ಜನ್ಮ ದಿನೋತ್ಸವದಂದು ಮೈಸೂರಿನಲ್ಲಿ ನಡೆದ ರಾಜ್ಯ ಕವನ ಸ್ಪರ್ಧೆಯಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪಡೆದವರು. 2015-16 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು" ವಿಷಯದ ಮೇಲೆ ಫೆಲೋಶಿಪ್ (2015-16 ) ಪ್ರಬಂಧ ಹಾಗೂ ಇದೇ ಸಾಲಿನಲ್ಲಿ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. “ಭಾರತದ ಭವಿಷ್ಯ ಮತ್ತು ಸಂವಿಧಾನ” ರಾಜ್ಯ ಪ್ರಬಂಧ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಸ್ಥಾನ ದೊರಕಿದೆ. ...
READ MORE