‘ಅಮ್ಮ ಮತ್ತು ಯುದ್ಧ’ ಲೇಖಕಿ ಕೆ. ಷರೀಫಾ ಅವರ ಲೇಖನಗಳ ಸಂಕಲನ. ಈ ಕೃತಿಗೆ ಚಿಂತಕ, ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಬೆನ್ನುಡಿ ಬರೆದಿದ್ದಾರೆ. ಅವಳು ಬ್ಯೂಟಿಫುಲ್ ಆಗಿದ್ದಾಳೆ ಎಂಬ ಮಾತಿನ ಜಾಗದಲ್ಲಿ ಈಗ ಅವಳು ಸೆಕ್ಸಿಯಾಗಿದ್ದಾಳೆ ಎಂಬಂತಹ ಮಾತು ಹೆಚ್ಚೆಚ್ಚು ಬಳಕೆಗೊಳ್ಳುತ್ತಿರುವುದಕ್ಕೆ ಹಿಂದೆ ಸರಕು ಸಂಸ್ಕೃತಿಯು ಮಹಿಳೆಯನ್ನು ಕೇವಲ ಸೆಕ್ಸ್ ಆಬ್ಜೆಕ್ಟ್ ಮಾತ್ರವಾಗಿ ಬಿಂಬಿಸುವ ಧೋರಣೆಯನ್ನು ಕೆ. ಷರೀಫಾ ಗುರುತಿಸಿದ್ದಾರೆ. ಸುಂದರವಾಗಿರುವವಳು ತಾಯಿ, ತಂಗಿ, ಸಹದ್ಯೋಗಿ, ಹೆಂಡತಿ ಯಾರೂ ಆಗಿರಬಹುದು. ಹಾಗೇ ಗುರುತಿಸುವ ಸೌಂದರ್ಯ ಅಭಿರುಚಿಗೆ ವ್ಯಾಪಕ ನೆಲೆಗಟ್ಟಿದೆ. ಅದು ಕೂಡಾ ದೇಹಸಂಬಂಧಿ ಗ್ರಹಿಕೆಯಾಗಿದ್ದರೂ ಅದರಲ್ಲಿ ಹಲ್ಲೆಕೋರತನವಿಲ್ಲ. ಆದರೆ ಸೆಕ್ಸಿಯಾಗಿದ್ದಾಳೆ ಎಂಬ ಅಭಿವ್ಯಕ್ತಿಯಲ್ಲಿ ಸಂಕುಚಿತ ಕಾಮದೃಷ್ಟಿಯಿದ್ದು ಹೆಣ್ಣಿನ ವ್ಯಕ್ತಿತ್ವದ ಘನತೆಯನ್ನು ಅದು ಅಲ್ಲಗಳೆಯುತ್ತದೆ. ಈ ಬಗೆಯ ಹಲವಾರು ಸೂಕ್ಷ್ಮಗ್ರಹಿಕೆಗಳನ್ನು ಮಹಿಳಾ ಸಮಾಜವಾದಿ ನೆಲೆಯಿಂದ ಕೆ.ಷರೀಫಾ ವ್ಯಕ್ತಪಡಿಸಿದ್ದಾರೆ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE