ಲೇಖಕ ಎ.ಕೆ. ರಾಮೇಶ್ವರರು ಸಭೆ-ಸಮಾರಂಭ ಹಾಗೂ ಸಮ್ಮೇಳನದಲ್ಲಿ ಸಾದರ ಪಡಿಸಿದ ವಿಚಾರಗಳನ್ನು ಅಕ್ಷರ ರೂಪಕ್ಕೆ ಇಳಿಸಿದ ಕೃತಿಯೇ-ನುಡಿಯ ಬೆಡಗು. ನಾರದ ಭಕ್ತಿ ಸೂತ್ರಗಳು, ನನ್ನ ಬಾನುಲಿ ನನ್ನ ಒಡನಾಟ, ಗುಲಬರ್ಗಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ, ಮಡಿವಾಳ ಮಾಚಿ ತಂದೆಯ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ, ಕನ್ನಡ ಸಂಸ್ಕೃತಿ-ವೈವಿಧ್ಯತೆ, ವೈಶಿಷ್ಟ್ಯತೆ ಮಕ್ಕಳ ಸಾಹಿತ್ಯ ಸಮೀಕ್ಷೆ, ಅಧ್ಯಕ್ಷೀಯ ಭಾಷಣ: ವಿಜಾಪುರ ಜಿಲ್ಲಾ ಸಾಹಿತ್ಯದ ಒಂದು ನೋಟ, ಶೋಷಿತರ ಕೂಗು ನಿಂತಿಲ್ಲ.. ಹೀಗೆ ವಿವಿಧ ಲೇಖನಗಳಿವೆ.
ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು. ...
READ MORE