ಲೇಖಕಿ ಕೃಷ್ಣಾ ಕೌಲಗಿ ಅವರ ಬರಹಗಳ ಸಂಕಲನ ತುಂತುರು ಇದು ನೀರ ಹಾಡು. ಈ ಕೃತಿಯಲ್ಲಿ ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬದುಕಿನ ಏನೆಲ್ಲ ಭಿತ್ತಿಚಿತ್ರಗಳು ಇಲ್ಲಿ ಆಕಾಶದ ಭಗವಂತನಿಂದ ಹಿಡಿದು ಮನೆಯ ಕೆಲಸಗಳನ್ನು ಮಾಡಿಕೊಟ್ಟು ಹೋಗುವ ಸ್ವಾಭಿಮಾನೀ ಹೆಣ್ಣುಮಕ್ಕಳವರೆಗೂ ತೆರೆದುಕೊಂಡಿವೆ. ಅಂತೆಯೇ ಸ್ತ್ರೀ ಸಹಜ ಆಸೆ ಅಭಿಲಾಷೆಗಳ ಝಳಕುಗಳು ಅವಲಕ್ಕಿ ಸರ, ಸೀರೆಗಳು, ಒಂದಷ್ಟು ತಿರುಗಾಟ, ಮಕ್ಕಳು, ಮೊಮ್ಮಕ್ಕಳ ಸಾಧನೆಗಳಿಗೆ ಸಹಜತೆಯಲ್ಲಿ ಹಿಗ್ಗುವ ಮಗುಮನಸು, ಅಕಾಲಿಕವಾಗಿ ಅಗಲಿದ ತಂಗಿಯ ಸಾವಿನ ಬಗೆಗಿನ ತೀವ್ರ ವೇದನೆ...ಎಲ್ಲವೂ ಅವರ ಮನಸ್ಸು ಬಿಚ್ಚಿಟ್ಟ ಒಳಮನಸ್ಸೇ ಆಗಿವೆ. 'ತುಂತುರು ಹಾಡು' ತನ್ನ ನಿರರ್ಗಳ ಚರ್ಚೆಗಳಲ್ಲಿ ಅವರ ವಿಭಿನ್ನ ಅನುಭವಗಳ ಬಗ್ಗೆ ಹೇಳುತ್ತದೆ. "ಜಿಸೆ ಮೌತನೇ ನ ಪೂಛಾ ಉಸೆ ಜಿಂದಗೀನೇ ಮಾರಾ' ಎಂಬ ಹಾಡಿನ ಸಾಲುಗಳನ್ನೆತ್ತಿಕೊಂಡು ಬದುಕೇ ಭಾರವಾಗಿ ಉಸಿರಾಡುತ್ತಿರುವವರ ಪ್ರಸಕ್ತಿಯ ಹೇಳುತ್ತ ಅಂಥವರು ಇಲ್ಲೇ ಉಳಿದು ನಾನಾ ವಿಧವಾಗಿ, ಅಕಾಲಮೃತ್ಯುವಿನಿಂದ ಯಮನ ಮನೆಗೆ ನಡೆಯುವ ಎಳೆವಯಸ್ಸಿನವರ ವಿಧಿಯ ಬಗೆಗಿನ ಹಳಹಳಿಕೆ 'ಬ್ರಹ್ಮಾಂಡವೇ ಬೊಂಬೆಯಾಟವಯ್ಯಾ' ಎಂದಂದು ಮನುಷ್ಯನ ಅಸಹಾಯಕತೆಯ ನಿದರ್ಶನದತ್ತ ಬೆರಳಿಟ್ಟು ತೋರಿದ ಪರಿ ಮನಸ್ಸನ್ನು ಹಿಂಡಿಬಿಡುತ್ತದೆ. ಹಗಲಿರುಳೂ ಜಾಗೃತವಾಗಿರುವ ಒಂದು ಮನಸ್ಸು ಏನೆಲ್ಲ ಪರಿವೀಕ್ಷಣೆ ಮಾಡುತ್ತ ನಿನ್ನೆ-ಇಂದು- ನಾಳೆಗಳ ಬಗೆಗಿನ ಅನುಭವ, ಆಲೋಚನೆಗಳನ್ನು ಹಿಡಿಹಿಡಿಯಾಗಿ ಕಟ್ಟಿಕೊಟ್ಟಾಗ ಅದು ಕೃಷ್ಣಾ ಕೌಲಗಿಯವರ ಲೇಖನವಾಗದೆ ತುಂತುರು ನೀರ ಹಾಡಾಗಿಬಿಡುವ ಒಂದು ವಿಸ್ಮಯ ಈ ಪುಸ್ತಕದಲ್ಲಿದೆ ಎಂದಿದ್ದಾರೆ.
ವೈಚಾರಿಕ ಬರಹಗಳಿಗೆ ಹೆಚ್ಚು ಒತ್ತು ನೀಡುವ ಬರೆಹಗಾರ್ತಿ ಕೃಷ್ಣಾ ಕೌಲಗಿ ವೃತ್ತಿಯಲ್ಲಿ ಶಿಕ್ಷಕರು. 1946 ಫೆಬ್ರುವರಿ 09 ಧಾರವಾಡದಲ್ಲಿ ಜನಿಸಿದರು. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸ. ಇಳಿ ವಯಸ್ಸಿನಲ್ಲೂ ಬತ್ತದ ಬರವಣಿಗೆಯ ಉತ್ಸಾಹ ಅವರನ್ನು ಸಮಾಜಮುಖಿಯನ್ನಾಗಿಸಿದೆ. ತನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ಟೈಪಿಂಗ್ ಕಲಿತು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಚಿಂತನಾ ಬರೆಹಗಳನ್ನು ಓದುಗರಿಗೆ ತಲುಪಿಸಿದರು. ‘ನೀರ ಮೇಲೆ ಅಲೆಯ ಉಂಗುರ’ ಅವರ ಅಂಕಣ ಬರಹಗಳ ಸಂಕಲನ. ...
READ MORE