‘ಹೆಜ್ಜೆ ಊರುವ ತವಕ’ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಲೇಖನ ಸಂಕಲನವಾಗಿದೆ. ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಷಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ ಆಪ್ತವಾಗಿ ಬರೆಯುವವರ ಸಂಖ್ಯೆ ಕಡಿಮೆ. ಕಾಡು, ಬೆಟ್ಟ, ಪಕ್ಷಿ ಪ್ರಪಂಚ, ಮರ, ಗಿಡ, ಬಳ್ಳಿಗಳನ್ನು ಎಲ್ಲರೂ ನೋಡಿರುತ್ತಾರೆ; ಆದರೆ ಅವುಗಳ ನಡುವಿನ ಸಂಬಂಧವನ್ನು ಗುರುತಿಸಿ, ಈ ವಿಸ್ಮಯಭರಿತ ಲೋಕದ ಬೆರಗುಗಳನ್ನು ಅಕ್ಷರರೂಪದಲ್ಲಿ ದಾಖಲಿಸುವವರು ವಿರಳ. ಅಂತಹ ಅಪರೂಪದ ಪ್ರಯತ್ನದಲ್ಲಿ ತೊಡಗಿಕೊಂಡು, ಬರಹಗಳನ್ನು ಬರೆದು ಪ್ರಕಟಿಸಿ, ಈಗ ಸಂಕಲನ ರೂಪದಲ್ಲಿ ಹೊರತರುತ್ತಿದ್ದಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿಯವರು. ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದು ಮಾತ್ರವಲ್ಲ, ಅಲ್ಲಿ ಕಂಡುಬರುವ ಅಪರೂಪದ ಸಂಗತಿಗಳನ್ನು ಹೆಕ್ಕಿತೆಗೆದು, ವಿಶ್ಲೇಷಣೆಗೊಳಪಡಿಸಿ ಬರಹರೂಪಲ್ಲಿ ದಾಖಲಿಸಿರುವ ಅವರ ಈ ಅಕ್ಷರಾಭಿಯಾನ ನಿಜಕ್ಕೂ ಅಭಿನಂದನಾರ್ಹ. ಈ ಪುಸ್ತಕದಲ್ಲಿ ಮೂರು ಭಾಗಗಳಿವೆ : ಮೊದಲ ಭಾಗದಲ್ಲಿ ಲೇಖಕರು ಕ್ಯಾಮೆರಾ ಹಿಡಿದು ಹಕ್ಕಿಗಳನ್ನು ಸೆರೆಹಿಡಿಯಲು ಹೊರಟಾಗ ಗಮನಿಸಿದ ಪ್ರಾಕೃತಿಕ ವಿದ್ಯಮಾನಗಳು ದಾಖಲಾಗಿವೆ. ಮಲಬಾರ್ ಟ್ರೋಜನ್‌ನಂತಹ ಅಪರೂಪದ ಹಕ್ಕಿಯನ್ನು ಛಾಯಾಚಿತ್ರೀಕರಿಸುವ ಸಾಹಸದಲ್ಲಿ ಯಶಸ್ವಿಯಾಗುವ ಲೇಖಕರು, ಇನ್ನೊಂದು ಹಕ್ಕಿಯ ಬೆನ್ನು ಹತ್ತಿದಾಗ, ಹಾರುವ ಓತಿಯನ್ನೂ ಗಮನಿಸುತ್ತಾರೆ! ಮರಗಿಡಗಳ ಕೊಂಬೆಗಳ ನಡುವೆ ಸುಲಭವಾಗಿ ಕಣ್ಮರೆಯಾಗಬಲ್ಲ ಹಾರುವ ಓತಿಯನ್ನು ಗುರುತಿಸಿದ್ದು ಲೇಖಕರ ವೀಕ್ಷಣಾ ಕೌಶಲವನ್ನು ತೋರುತ್ತದೆ. ಹಕ್ಕಿ, ಕೀಟ, ಪಾತರಗಿತ್ತಿ, ಹಾರುವ ಓತಿ ಹೀಗೆ ನಾನಾ ಜೀವಿಗಳು ವಾಸಿಸುವ ಕಾಡಿನ ಇಕಾಲಜಿಯ ಸರಪಣಿಯನ್ನು ಇಲ್ಲಿನ ಬರಹಗಳು ಪರಿಚಯಿಸುತ್ತವೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ನಿಸರ್ಗದ ನಡುವಿನ ಚಾರಣದ ಅನುಭವಗಳು ದಾಖಲಾಗಿವೆ. ಮೂರನೆಯ ಭಾಗದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳ ವಿಮರ್ಶಾತ್ಮಕ ಬರಹಗಳಿದ್ದು, ಲೇಖಕರ ಓದಿನ ವ್ಯಾಪ್ತಿಯ ಪರಿಚಯ ಮಾಡಿಸುತ್ತವೆ. ಈ ಪುಸ್ತಕದ ಲೇಖಕ ನವೀನಕೃಷ್ಣ ಅವರು, ಈಗ ಪದವಿ ತರಗತಿಯಲ್ಲಿ ಅಧ್ಯಯನವನ್ನು ಮುಂದುವರಿಸಿದ್ದು, ಈ ಕಿರಿಯ ವಯಸ್ಸಿನಲ್ಲೇ ಪರಿಸರಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಆಪ್ತವಾಗಿ ಬರೆಯುತ್ತಿದ್ದಾರೆ ಎಂಬುದು ವಿಶೇಷ, ಅವರು ಓದುತ್ತಿರುವ ಕಾಲೇಜಿನ ಮೂಲಕವೇ ಈ ಪುಸ್ತಕ ಬೆಳಕು ಕಾಣುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.
ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು. ಇವರು ಚೂಂತಾರು ಹಾಗೂ ಮುಕ್ರುಂಪಾಡಿಯ 'ದ್ವಾರಕಾ'ದಲ್ಲಿ ನಡೆಯುವ ವಸಂತ ವೇದಪಾಠ ಶಿಬಿರದಲ್ಲಿ ಕಳೆದ 8 ವರ್ಷಗಳಿಂದ ವೇದ ಅಧ್ಯಾಪಕರಾಗಿ ತೊಡಗಿಸಿಕೊಂಡಿದ್ದಾರೆ. ಪ್ರಕೃತಿ-ಪ್ರಾಣಿ-ಪಕ್ಷಿಗಳ ಕುರಿತಾದ, ಸಾಹಿತ್ಯ ಕೃತಿಗಳ ಬಗೆಗಿನ ಇವರ ಅನೇಕ ಲೇಖನಗಳು ವಿಶ್ವವಾಣಿ, ವಿಜಯಕರ್ನಾಟಕ, ಭಾರತವಾಣಿ, ಜ್ಞಾನತಾಣ, ಉದಯವಾಣಿ ಮುಂತಾದ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವನ್ಯಜೀವಿ ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಪ್ರವಾಸ, ಓದು-ಬರೆಹ ಇವರ ಹವ್ಯಾಸಗಳು. ಕೃತಿಗಳು: ಹೆಜ್ಜೆ ಊರುವ ತವಕ ...
READ MORE